ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್‌ ತೀರ್ಪಿಗೆ ತಲೆಬಾಗಬೇಕು; ದೇವೇಗೌಡ

Last Updated 15 ಮಾರ್ಚ್ 2022, 18:45 IST
ಅಕ್ಷರ ಗಾತ್ರ

ನವದೆಹಲಿ: ಹಿಜಾಬ್‌ ಕುರಿತು ರಾಜ್ಯ ಹೈಕೋರ್ಟ್‌ ನೀಡಿರುವ ತೀರ್ಪಿಗೆ ಎಲ್ಲರೂ ತಲೆ ಬಾಗಬೇಕು ಎಂದು ರಾಜ್ಯಸಭೆ ಸದಸ್ಯ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಸಲಹೆ ನೀಡಿದರು.

ಮಂಗಳವಾರ ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ‘ಹಿಜಾಬ್‌ ಪ್ರಕರಣದಲ್ಲಿ ರಾಜಕೀಯ ಲಾಭ–ನಷ್ಟದ ಬಗ್ಗೆ ಯೋಚಿಸದೆ, ಅಲ್ಪಸಂಖ್ಯಾತ ಸಮುದಾಯದ ಮಕ್ಕಳ ಶಿಕ್ಷಣದ ಕುರಿತು ಚಿಂತಿಸಬೇಕು’ ಎಂದರು.

ಹಿಜಾಬ್‌ ವಿಷಯದಲ್ಲಿ ವೈಯಕ್ತಿಕ ಅಭಿಪ್ರಾಯಕ್ಕಿಂತ ಹೈಕೋರ್ಟ್ ತೀರ್ಪನ್ನು ಒಪ್ಪುವುದೇ ಸೂಕ್ತ. ಈ ಸಂಬಂಧ ಸಮುದಾಯಗಳ ಹೋರಾಟ ನಿಲ್ಲಬೇಕು ಎಂದು ಅವರು ಕಿವಿಮಾತು ಹೇಳಿದರು.

ಹಿಜಾಬ್‌ ಪ್ರಕರಣವನ್ನು ವಿವಾದವಾಗಲು ಬಿಟ್ಟಿರುವುದು ರಾಜ್ಯ ಸರ್ಕಾರದ ವೈಫಲ್ಯ ಎತ್ತಿತೋರುತ್ತದೆ ಎಂದು ಆರೋಪಿಸಿದ ಅವರು, ಎಸ್‌ಡಿಪಿಐ ಸಂಘಟನೆಯನ್ನು ನಿಷೇಧಿಸಬೇಕು ಎಂಬ ಕೂಗು ಅನೇಕ ವರ್ಷಗಳಿಂದ ಕೇಳಿಬರುತ್ತಿದೆ. ಆದರೆ, ರಾಷ್ಟ್ರಮಟ್ಟದ ಆ ಸಂಘಟನೆಯನ್ನು ನಿಷೇಧಿಸುವುದು ಸುಲಭವಲ್ಲ ಎಂದರು.

ತೀರ್ಪು ಸ್ವಾಗತಾರ್ಹ; ಕೇಂದ್ರ ಸಚಿವರು:ಕೇಂದ್ರದ ಸಚಿವರು ಹಾಗೂ ಮಾಜಿ ಸಚಿವರು ಹೈಕೋರ್ಟ್‌ ತೀರ್ಪನ್ನು ಸ್ವಾಗತಿಸಿದ್ದು, ಪ್ರತಿಯೊಬ್ಬರೂ ತೀರ್ಪನ್ನು ಸ್ವಾಗತಿಸುವ ಮೂಲಕ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒತ್ತು ನೀಡಬೇಕಿದೆ. ವಿದ್ಯಾರ್ಥಿಗಳೂ ಶಿಕ್ಷಣಕ್ಕೆ ಆದ್ಯತೆ ನೀಡಲು ಗಮನಹರಿಸಬೇಕಿದೆ ಎಂದು ಸಲಹೆ ನೀಡಿದ್ದಾರೆ.

ಹಿಜಾಬ್‌ ಧರಿಸುವಂತೆ ಬಡ ಮುಸ್ಲಿಂ ಮಹಿಳೆಯರನ್ನೇ ಪ್ರೇರೇಪಿಸಿ, ಶೋಷಿಸಲಾಗುತ್ತಿದೆ ಎಂದು ಕೇಂದ್ರದ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ದೂರಿದ್ದಾರೆ.

ಹಿಜಾಬ್ ಪ್ರಕರಣ ಕುರಿತು ಹೈಕೋರ್ಟ್‌ ನೀಡಿರುವ ತೀರ್ಪನ್ನು ಪ್ರತಿಯೊಬ್ಬರೂ ಸ್ವಾಗತಿಸಬೇಕು. ಶ್ರೀಮಂತ ಮುಸ್ಲಿಮರು ತಮ್ಮ ಮನೆಯ ಮಹಿಳೆಯರನ್ನು ಯಾವುದೇ ರೀತಿಯ ಕಟ್ಟುಪಾಡುಗಳಿಗೆ ಒಳಪಡಿಸದೇ, ಬಡವರನ್ನು ಪ್ರಚೋದಿಸುತ್ತಿದ್ದಾರೆ. ಇದರಿಂದ ಬಡ ಮಹಿಳೆಯರು ಹಿಂದುಳಿಯುವಂತಾಗಿದೆ ಎಂದಿದ್ದಾರೆ.

ಎಲ್‌.ಕೆ.ಜಿ, ಯು.ಕೆ.ಜಿ ಹಂತದ ಚಿಕ್ಕ ಹೆಣ್ಣು ಮಕ್ಕಳನ್ನೂ ಬಿಡದೇ, ಧರ್ಮದ ಹೆಸರಲ್ಲಿ ಅವರ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಲಾಗುತ್ತಿದೆ. ಪಟ್ಟಭದ್ರ ಹಿತಾಸಕ್ತಿಗಳು ಬಿತ್ತಿದ ದ್ವೇಷಕ್ಕೆ ಶಿವಮೊಗ್ಗದಲ್ಲಿ ಹರ್ಷ ಎಂಬ ಯುವಕನ ಕೊಲೆ ನಡೆದಿದೆ. ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವಹಿಸಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಹೈಕೋರ್ಟ್‌ ತೀರ್ಪನ್ನು ಸ್ವಾಗತಿಸಿರುವ ಕೇಂದ್ರದ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ ಜೋಶಿ, ಜನತೆ ಶಾಂತಿ ಕಾಪಾಡುವ ಮೂಲಕ ಸೌಹಾರ್ದದಿಂದ ಇರುವಂತೆ ಮನವಿ ಮಾಡಿದ್ದಾರೆ.

ಹಿಜಾಬ್ ನಿಷೇಧಿಸಿದ್ದ ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಆರು ಜನ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿದ್ದು, ಎಲ್ಲರೂ ತೀರ್ಪನ್ನು ಗೌರವಿಸಬೇಕು ಎಂದು ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಕೋರಿದ್ದಾರೆ.

ಧಾರ್ಮಿಕ ವಿಷಯಗಳ ಕುರಿತ ಗೊಂದಲವನ್ನು ಎಸ್‌ಡಿಪಿಐ ಹಾಗೂ ಪಿಎಫ್ಐ ಸಂಘಟನೆಗಳು ದುರುಪಯೋಗ ಪಡಿಸಿಕೊಂಡಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹೈಕೋರ್ಟ್‌ ಶ್ಲಾಘನೀಯ ತೀರ್ಪನ್ನು ನೀಡಿದ್ದಾಗಿ ಹೇಳಿರುವ ಬಿಜೆಪಿ ಮುಖಂಡ, ಕೇಂದ್ರದ ಕಾನೂನು ಖಾತೆಯ ಮಾಜಿ ಸಚಿವ ರವಿಶಂಕರ ಪ್ರಸಾದ್‌, ಹಿಜಾಬ್‌ ಧರಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಮೂಲಭೂತ ಹಕ್ಕು ಎಂಬ ವಾದಕ್ಕೆ ಸೋಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT