ಸೋಮವಾರ, ಜೂನ್ 27, 2022
24 °C

ವಿದ್ಯುತ್ ದರ ಏರಿಕೆ ಶಾಕ್‌: ಪ್ರತಿ ಯೂನಿಟ್‌ಗೆ 30 ಪೈಸೆ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೆಟ್ರೋಲ್–ಡೀಸೆಲ್ ದರ ಏರಿಕೆಯಿಂದಾಗಿ ಜನ ಸಾಮಾನ್ಯರು ಹೈರಾಣಾಗಿರುವ ಬೆನ್ನಲ್ಲೇ, ವಿದ್ಯುತ್‌ ದರ ಏರಿಕೆಯ ಮತ್ತೊಂದು ಹೊರೆ ಗ್ರಾಹಕರ ಮೇಲೆ ಬೀಳಲಿದೆ.

ರಾಜ್ಯದ ಎಲ್ಲ ವಿದ್ಯುತ್‌ ಸರಬರಾಜು ಕಂಪನಿಗಳು (ಎಸ್ಕಾಂ) ಗ್ರಾಹಕರಿಗೆ ಪೂರೈಸುವ ಪ್ರತಿ ಯೂನಿಟ್‌ ವಿದ್ಯುತ್‌ ದರವನ್ನು 30 ಪೈಸೆಯಷ್ಟು ಏರಿಕೆ ಮಾಡುವುದಕ್ಕೆ ಅನುಮತಿ ನೀಡಿ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (ಕೆಇಆರ್‌ಸಿ) ಬುಧವಾರ ಆದೇಶ ಹೊರಡಿಸಿದೆ.

ಪರಿಷ್ಕೃತ ದರವು 2021ರ ಏಪ್ರಿಲ್‌ 1ರಿಂದ ಪೂರ್ವಾನ್ವಯವಾಗಲಿದೆ. ಕೋವಿಡ್‌ ಕಾರಣದಿಂದ ಏಪ್ರಿಲ್‌ ಮತ್ತು ಮೇ ತಿಂಗಳ ಹಿಂಬಾಕಿಯನ್ನು ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳಲ್ಲಿ ಬಡ್ಡಿರಹಿತವಾಗಿ ವಸೂಲಿ ಮಾಡುವಂತೆ ಆಯೋಗವು ಆದೇಶದಲ್ಲಿ ತಿಳಿಸಿದೆ.

ಎಸ್ಕಾಂಗಳು ಸರಾಸರಿ ಶೇಕಡ 17.31ರ ಪ್ರಮಾಣದಲ್ಲಿ ಪ್ರತಿ ಯೂನಿಟ್‌ಗೆ ₹ 1.35 ದರ ಹೆಚ್ಚಳಕ್ಕೆ ಅನುಮೋದನೆ ನೀಡುವಂತೆ ಬೇಡಿಕೆ ಸಲ್ಲಿಸಿದ್ದವು. ಕೆಇಆರ್‌ಸಿ, ಶೇ 3.84ರಷ್ಟು ಪ್ರಮಾಣದ ದರ ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ಹುಕ್ಕೇರಿಯ ಗ್ರಾಮೀಣ ವಿದ್ಯುತ್‌ ಸಹಕಾರಿ ಸಂಘದ ಗ್ರಾಹಕರಿಗೂ ಈ ದರ ಅನ್ವಯವಾಗಲಿದೆ.

ರಾಜ್ಯದಾದ್ಯಂತ ಗೃಹ ಬಳಕೆ, ಕೈಗಾರಿಕೆ, ವಾಣಿಜ್ಯ, ಕುಡಿಯುವ ನೀರು ಪೂರೈಕೆ, ಆಸ್ಪತ್ರೆಗಳು, ಬೀದಿದೀಪ ಮತ್ತು ಇತರ ಉದ್ದೇಶಗಳಿಗೆ ಬಳಕೆ ಮಾಡುವ ಪ್ರತಿ ಯೂನಿಟ್‌ ವಿದ್ಯುತ್‌ ದರದಲ್ಲಿ ಪ್ರತಿ ಹಂತದಲ್ಲಿ 10 ಪೈಸೆಯಷ್ಟು ಹೆಚ್ಚಳ ಮಾಡುವ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದೆ. ಗ್ರಾಹಕರಿಂದ ವಸೂಲಿ ಮಾಡುವ ನಿಗದಿತ ಶುಲ್ಕದ ದರವನ್ನು ಪ್ರತಿ ಕಿಲೋ ವ್ಯಾಟ್‌ ಅಥವಾ ಎಚ್‌ಪಿಗೆ ₹ 10ರಿಂದ ₹ 20ಕ್ಕೆ ಹೆಚ್ಚಳ ಮಾಡಲಾಗಿದೆ. ಇದರಿಂದ ಸರಾಸರಿ ಪ್ರತಿ ಯೂನಿಟ್‌ನ ದರದಲ್ಲಿ 30 ಪೈಸೆಯಷ್ಟು ಹೆಚ್ಚಳವಾಗಲಿದೆ.

ಮಿತಿ ಹೆಚ್ಚಳ: ಗೃಹ ಬಳಕೆ ವಿದ್ಯುತ್‌ನ ಕನಿಷ್ಠ ಮಿತಿಯನ್ನು 30 ಯೂನಿಟ್‌ಗಳಿಂದ 50 ಯೂನಿಟ್‌ಗಳಿಗೆ ಹೆಚ್ಚಿಸಲಾಗಿದೆ. ತ್ರೀ ಫೇಸ್‌ ವಿದ್ಯುತ್‌ ಪಡೆಯುವ ಹೊರೆಯ ಮಿತಿಯನ್ನು 50 ಕಿಲೋ ವ್ಯಾಟ್‌ನಿಂದ 150 ಕಿಲೋ ವ್ಯಾಟ್‌ಗೆ ಹೆಚ್ಚಿಸಲಾಗಿದೆ.

2018ರ ಆದೇಶದಂತೆ ಅಧಿಕ ಸಾಮರ್ಥ್ಯದ (ಎಚ್‌.ಟಿ) ವಿದ್ಯುತ್‌ ಬಳಕೆದಾರರಿಗೆ ಪ್ರೋತ್ಸಾಹ ಯೋಜನೆ ಮುಂದುವರಿಸಲಾಗಿದೆ. ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಬಳಸುವ ಹೆಚ್ಚುವರಿ ವಿದ್ಯುತ್‌ಗೆ ಪ್ರತಿ ಯೂನಿಟ್‌ಗೆ ₹ 1 ಮತ್ತು ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಎಲ್ಲ ಘಟಕಗಳ ಪ್ರತಿ ಯೂನಿಟ್‌ಗೆ ₹ 2 ಪ್ರೋತ್ಸಾಹಧನ ಮುಂದುವರಿಯಲಿದೆ. ಸಂಜೆ 6ರಿಂದ ರಾತ್ರಿ 10ರವರೆಗಿನ ಅವಧಿಯಲ್ಲಿ ಬಳಸುವ ಪ್ರತಿ ಯೂನಿಟ್‌ಗೆ ₹ 1 ದಂಡ ಶುಲ್ಕ ವಿಧಿಸುವುದನ್ನು ಮುಂದುವರಿಸಲಾಗಿದೆ.

ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ ಪ್ರತಿ ಯೂನಿಟ್‌ಗೆ ₹ 5.20ರ ದರದಲ್ಲೇ ವಿದ್ಯುತ್‌ ಪೂರೈಕೆ ಮುಂದುವರಿಯಲಿದೆ. ಪ್ರೋತ್ಸಾಹಕ ಯೋಜನೆ ಇಲ್ಲದ ಪ್ರತಿ ಯೂನಿಟ್‌ ದರದಲ್ಲಿ ಮಾತ್ರ 10 ಪೈಸೆ ಹೆಚ್ಚಳ ಅನ್ವಯವಾಗಲಿದೆ. ಬ್ಯಾಟರಿ ಚಾಲಿತ ವಾಹನಗಳ ಬಳಕೆ ಉತ್ತೇಜಿಸಲು ಬ್ಯಾಟರಿ ಚಾರ್ಜಿಂಗ್‌ ಘಟಕಗಳಿಗೆ ಪೂರೈಸುವ ವಿದ್ಯುತ್‌ ದರದಲ್ಲಿ ಹೆಚ್ಚಳ ಮಾಡಿಲ್ಲ. ಈಗ ಇರುವಂತೆ ಪ್ರತಿ ಯೂನಿಟ್‌ಗೆ ₹ 5ರ ದರ ಮುಂದುವರಿಯಲಿದೆ.

ಮಂಗಳೂರು ವಿಶೇಷ ಆರ್ಥಿಕ ವಲಯದ ಕೈಗಾರಿಕಾ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ ₹ 7.30 ಮತ್ತು ಏಕಸ್‌ ವಿಶೇಷ ಆರ್ಥಿಕ ವಲಯದ ಕೈಗಾರಿಕಾ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ ₹ 7.60ರ ದರ ನಿಗದಿ ಮಾಡಲಾಗಿದೆ.

₹ 1,819.38 ಕೋಟಿ ಕೊರತೆ

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ), ಮಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಮೆಸ್ಕಾಂ), ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ (ಸೆಸ್ಕ್‌), ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ), ಗುಲ್ಬರ್ಗ ವಿದ್ಯುತ್‌ ಸರಬರಾಜು ಕಂಪನಿ (ಜೆಸ್ಕಾಂ) ಮತ್ತು ಹುಕ್ಕೇರಿ ಗ್ರಾಮೀಣ ವಿದ್ಯುತ್‌ ಸಹಕಾರ ಸಂಘಗಳು ಸೇರಿದಂತೆ 2020ರ ಅವಧಿಯಲ್ಲಿ ₹ 1,100.33 ಕೋಟಿ ವರಮಾನ ಕೊರತೆ ಹೊಂದಿದ್ದವು.

2022ರ ವೇಳೆಗೆ ಅಂದಾಜಿಸಲಾದ ₹ 719.05 ಕೋಟಿ ಕೊರತೆಯೂ ಸೇರಿದಂತೆ ಒಟ್ಟು ₹ 1,819.38 ಕೋಟಿ ಕೊರತೆಯಾಗಲಿದೆ. ಅದನ್ನು 2022ನೇ ಆರ್ಥಿಕ ವರ್ಷದಲ್ಲಿ ವಿದ್ಯುತ್‌ ದರ ಹೆಚ್ಚಳದ ವಸೂಲಿ ಮಾಡಬೇಕಿದೆ ಎಂದು ಕೆಇಆರ್‌ಸಿ ಹೇಳಿದೆ.

ಹಸಿಗಾಯದ ಮೇಲೆ ಬರೆ: ಸಿದ್ದರಾಮಯ್ಯ ಆರೋಪ

‘ಜನರ ಕಷ್ಟ ಕಾಲದಲ್ಲಿ ನೆರವಿಗೆ ಬರಬೇಕಾಗಿದ್ದ ರಾಜ್ಯದ ಬಿಜೆಪಿ ಸರ್ಕಾರ ನಿರ್ದಯವಾಗಿ ವಿದ್ಯುತ್ ಶುಲ್ಕ ಹೆಚ್ಚಿಸಿ ಹಸಿಗಾಯದ ಮೇಲೆ ಬರೆ ಎಳೆದಿದೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದೂರಿದ್ದಾರೆ.

ವಿದ್ಯುತ್ ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರ ನೀಡಿರುವ ಕಾರಣಗಳು ಜನರನ್ನು ತಪ್ಪುದಾರಿಗೆ ಎಳೆಯುವಂತಿದೆ. ರಾಜ್ಯದ ವಿದ್ಯುತ್ ಸರಬರಾಜು ಕಂಪೆನಿಗಳು ಇಂದು ನಷ್ಟದಲ್ಲಿದ್ದರೆ ಅದಕ್ಕೆ ರಾಜ್ಯ ಸರ್ಕಾರದ ಅದಕ್ಷತೆ, ಭ್ರಷ್ಟಾಚಾರ ಮತ್ತು ಕಾರ್ಪೋರೇಟ್ ಕಂಪೆನಿಗಳ ಓಲೈಕೆ ಕಾರಣ. ಸಮರ್ಥನೀಯವಲ್ಲದ, ಅವೈಜ್ಞಾನಿಕ ಮತ್ತು ಜನವಿರೋಧಿಯಾಗಿರುವ ವಿದ್ಯುತ್ ದರ ಹೆಚ್ಚಳವನ್ನು ರಾಜ್ಯ ಸರ್ಕಾರ ತಕ್ಷಣ ಹಿಂದಕ್ಕೆ ಪಡೆಯದಿದ್ದರೆ ರಾಜ್ಯದಾದ್ಯಂತ ಕಾಂಗ್ರೆಸ್‌ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದ್ದಾರೆ.

* ಕೈಗಾರಿಕೆಗಳು ಸಹಜ ಸ್ಥಿತಿಗೆ ಮರಳಲು ಇನ್ನೂ ಎರಡು ವರ್ಷ ಬೇಕು. ವಿದ್ಯುತ್‌ ದರ ಏರಿಕೆ ಆದೇಶವನ್ನು ಹಿಂಪಡೆಯಬೇಕು.

-ಪೆರಿಕಲ್‌ ಎಂ.ಸುಂದರ್‌, ಎಫ್‌ಕೆಸಿಸಿಐ ಅಧ್ಯಕ್ಷ
      

* ವಿದ್ಯುತ್‌ ದರ ಕಡಿಮೆ ಮಾಡಿ ಎಂದು ಕೋರಿದ್ದೆವು. ಈಗ ಜಾಸ್ತಿ ಮಾಡಿದ್ದಾರೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಸಣ್ಣ ಕೈಗಾರಿಕೆಗಳು ಮುಚ್ಚಿಹೋಗುತ್ತವೆ

-ಕೆ.ಬಿ. ಅರಸಪ್ಪ, ಕಾಸಿಯಾ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು