ಬೆಂಗಳೂರು: ’ಮಿಲಿಟರಿ ವಲಯದಲ್ಲಿ ಸಶಕ್ತವಾಗಿರುವ ರಾಷ್ಟ್ರಗಳು ಇತರ ರಾಷ್ಟ್ರಗಳಿಗೆ ನಿರ್ದೇಶನ ನೀಡಬಾರದು’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಏರೋ ಇಂಡಿಯಾ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ರಕ್ಷಣಾ ಸಚಿವರ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಕೆಲವು ರಾಷ್ಟ್ರಗಳು ಶ್ರೀಮಂತವಾಗಿರಬಹುದು ಹಾಗೂ ತಂತ್ರಜ್ಞಾನ ಮತ್ತು ಮಿಲಿಟರಿ ಕ್ಷೇತ್ರದಲ್ಲಿ ಇತರ ರಾಷ್ಟ್ರಗಳಿಗಿಂತ ಅಭಿವೃದ್ಧಿ ಸಾಧಿಸಿರಬಹುದು. ಇಂತಹ ಶಕ್ತಿ ಸಾಮರ್ಥ್ಯಕ್ಕಾಗಿ ಇತರ ರಾಷ್ಟ್ರಗಳಿಗೆ ತಾವು ಸೂಚಿಸಿದ ಪರಿಹಾರವನ್ನು ಅಳವಡಿಸಿಕೊಳ್ಳುವಂತೆ ನಿರ್ದೇಶನ ಮಾಡುವ ಹಕ್ಕು ಇಲ್ಲ’ ಎಂದು ಪ್ರತಿಪಾದಿಸಿದರು.
‘ನೆರವು ಬಯಸುವ ರಾಷ್ಟ್ರಗಳಿಗೆ ಉಪದೇಶ ನೀಡುವ ಪದ್ಧತಿಯಲ್ಲಿ ಭಾರತವು ನಂಬಿಕೆ ಇರಿಸಿಲ್ಲ. ನಾವು ಎಲ್ಲರೊಂದಿಗೆ ಸಾಗಲು ಬಯಸುತ್ತೇವೆ. ನಿಮ್ಮೊಂದಿಗೆ ಅಭಿವೃದ್ಧಿ ಸಾಧಿಸಲು ಬಯಸುತ್ತೇವೆ’ ಎಂದರು.
‘ಒಂದು ರಾಷ್ಟ್ರದಲ್ಲಿ ಕಾಣಿಸಿಕೊಂಡ ಕೋವಿಡ್–19, ಇಡೀ ಜಗತ್ತಿನಾದ್ಯಂತ ಪರಿಣಾಮ ಬೀರಿತು. ಹೀಗಾಗಿ, ನಾವೆಲ್ಲರೂ ಒಂದೇ ದೋಣಿಯಲ್ಲಿದ್ದೇವೆ. ಎಲ್ಲರೂ ಒಗ್ಗಟ್ಟಿನಿಂದ ಈಜಬೇಕು ಅಥವಾ ಮುಳುಗಬೇಕಾಗುತ್ತದೆ ಎನ್ನುವುದನ್ನು ಅರಿತುಕೊಳ್ಳಬೇಕು’ ಎಂದು ಹೇಳಿದರು.
‘ಭಯೋತ್ಪಾದನೆಯಂತಹ ಸವಾಲುಗಳನ್ನು ಒಗ್ಗಟ್ಟಿನಿಂದ ಎದುರಿಸಬೇಕು. ಇದಕ್ಕಾಗಿ ಹೊಸ ಕಾರ್ಯತಂತ್ರಗಳನ್ನು ರೂಪಿಸಬೇಕು. ಜಾಗತಿಕ ಭದ್ರತಾ ಸನ್ನಿವೇಶದಲ್ಲಿ ಪರಸ್ಪರ ಸಹಕಾರ ಅಗತ್ಯ’ ಎಂದರು.
27 ರಾಷ್ಟ್ರಗಳ ರಕ್ಷಣಾ ಸಚಿವರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.