ಗುರುವಾರ , ಜನವರಿ 20, 2022
15 °C

ಪ್ರಜಾವಾಣಿ ಒಳನೋಟ: ನಾಡಿನಗಲ ಹೊತ್ತುತ್ತಿದೆ ಕೋಮುಕಿಡಿ.. ಏನಿದರ ಮರ್ಮ?

ಅಕ್ರಂ ಮೊಹಮ್ಮದ್‌/ ಪ್ರಜ್ವಲ್‌ ಸುವರ್ಣ Updated:

ಅಕ್ಷರ ಗಾತ್ರ : | |

‘ಕರ್ನಾಟಕದಲ್ಲಿ ಈಗಿನ ವಾತಾವರಣವನ್ನು ಗಮನಿಸಿದರೆ, ಚುನಾವಣೆ ಹತ್ತಿರ ಬರುತ್ತಿರುವಂತೆ ಕಾಣುತ್ತಿದೆ’– 1990ರ ದಶಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಜರಂಗ ದಳವನ್ನು ಕಟ್ಟಲು ಶ್ರಮಿಸಿದ್ದ ಪ್ರವೀಣ್ ವಾಳ್ಕೆ ಅವರು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್‌ ಇದು. ಬಜರಂಗ ದಳವನ್ನು ತೊರೆದಿದ್ದ ಅವರು,ನಂತರದ ದಿನಗಳಲ್ಲಿ ಶ್ರೀ ರಾಮ ಸೇನೆಯನ್ನು ಸೇರಿದ್ದರು. ಈಗ ಈ ಎಲ್ಲಾ ಗುಂಪುಗಳಿಂದ ದೂರ ಉಳಿದಿದ್ದಾರೆ. ‘ನಾನೀಗ ಬದಲಾಗಿದ್ದೇನೆ’ ಎಂಬುದು ಅವರ ಮಾತು.

ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಈಗ ಹೆಚ್ಚಾಗುತ್ತಿರುವ ಮತೀಯ ಗೂಂಡಾಗಿರಿ ಮತ್ತು ಕೋಮು ಸಂಬಂಧಿತ ಘಟನೆಗಳಿಗೆ ಮುಂಬರಲಿರುವ ರಾಜ್ಯ ವಿಧಾನಸಭಾ ಚುನಾವಣೆಯೇ ಕಾರಣ ಎಂದು, ವಾಳ್ಕೆ ಅವರ ರೀತಿಯಲ್ಲಿಯೇ ರಾಜ್ಯದ ಕರಾವಳಿಯಲ್ಲಿ ಬಲಪಂಥೀಯ ಸಂಘ ಟನೆಗಳ ಜತೆಗಿನ ಸಖ್ಯ ಕಡಿದುಕೊಂಡ ಹಲವರು ಹೇಳುತ್ತಾರೆ.

‘ಸರ್ಕಾರವು ತನ್ನ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು, ಗಮನ ಬೇರೆಡೆ ಸೆಳೆಯಲು ಬಳಸುವ ತಂತ್ರವಿದು’ ಎನ್ನುತ್ತಾರೆ ಬಜರಂಗ ದಳದ ಮತ್ತೊಬ್ಬ ಮಾಜಿ ನಾಯಕರಾದ ಸುನಿಲ್ ಬಜಿಲಕೇರಿ. ಚುನಾವಣೆಯ ಹಿನ್ನೆಲೆಯಲ್ಲಿ ಕೋಮು ಹಿಂಸಾಚಾರ ನಡೆಸುವ ಈ ತಂತ್ರವನ್ನು, ಕರಾವಳಿಯ ಹಿಂದುತ್ವದ ಪ್ರಯೋಗಾಲಯದಲ್ಲಿ ಸಂಘಪರಿವಾರವು ನಡೆಸುತ್ತಾ ಬಂದಿತ್ತು. ಆದರೆ ಈಗ ಈ ತಂತ್ರವು ರಾಜ್ಯದ ಬೇರೆಲ್ಲಾ ಜಿಲ್ಲೆಗಳಿಗೂ ಹರಡಿದೆ ಎನ್ನುತ್ತಾರೆ ಅವರು.

ಈಚಿನ ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸಂಬಂಧಿ ಘಟನೆಗಳ ಸಂಖ್ಯೆ ಕಡಿಮೆ ಇತ್ತು. ಆದರೆ 2020ರಲ್ಲಿ ಇಂತಹ 110 ಘಟನೆಗಳು ವರದಿಯಾಗಿವೆ.

ಈ ವರ್ಷ ಅಕ್ಟೋಬರ್‌ವರೆಗೂ ಇಂತಹ 87 ಘಟನೆಗಳು ವರದಿಯಾಗಿವೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರವೇ ರಾಜ್ಯದಲ್ಲಿ ಕೋಮು ಸಂಬಂಧಿ ಘಟನೆಗಳ ಸಂಖ್ಯೆ ಏರಿಕೆಯಾಗುತ್ತಿದೆ. ಈ ಅವಧಿಯಲ್ಲಿ ಕೆಲವು ಘಟನೆಗಳು ರಾಜ್ಯದಾದ್ಯಂತ ದೊಡ್ಡ ಸುದ್ದಿಯೂ ಆಗಿವೆ.

ಬೆಳಗಾವಿಯಲ್ಲಿ ಹಿಂದೂ ಯುವತಿಯ ಜೊತೆಗೆ ಸಂಬಂಧ ಹೊಂದಿದ್ದ ಕಾರಣಕ್ಕೆ ಮುಸ್ಲಿಂ ಯುವಕ ಅರ್ಬಾಜ್‌ನ ತಲೆ ಕಡಿಯಲಾಯಿತು. ಬೆಂಗಳೂರು–ಬೆಳಗಾವಿಯಲ್ಲಿ ಮುಸ್ಲಿಂ ಗುಂಪುಗಳು ಹಾಗೂ ದಕ್ಷಿಣ ಕನ್ನಡದ ಸುರತ್ಕಲ್ ಮತ್ತು ಮೂಡುಬಿದಿರೆಯಲ್ಲಿ ಹಿಂದೂ ಗುಂಪುಗಳು ಮತೀಯ ಗೂಂಡಾಗಿರಿ ನಡೆಸಿದವು.

ಗದಗದಲ್ಲಿ ಬಾಬರಿ ಮಸೀದಿ ಧ್ವಂಸದಂತಹ ಚಳವಳಿ ನಡೆಸುವ ಬೆದರಿಕೆಯನ್ನು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹಾಕಿದರು. ವಾರದ ಹಿಂದಷ್ಟೇ ವಿಜಯಪುರ ಜಿಲ್ಲೆಯ ಆಲಮೇಲದಲ್ಲಿ ಮುಸ್ಲಿಂ ಯುವತಿ ಜತೆ ಸಂಬಂಧ ಹೊಂದಿದ್ದ ಕಾರಣಕ್ಕೆ ಯುವಕನೊಬ್ಬನ ಹತ್ಯೆ ಮಾಡಲಾಯಿತು. ಬಜರಂಗ ದಳದ ಕಾರ್ಯಕರ್ತರ ಮೇಲೆ ಯುವಕರ ಗುಂಪು ಹಲ್ಲೆ ನಡೆಸಿದ್ದನ್ನು ವಿರೋಧಿಸಿ, ಕಳೆದ ಶುಕ್ರವಾರವಷ್ಟೇ ತುಮಕೂರಿನಲ್ಲಿ ಬಂದ್ ಆಚರಿಸಲಾಯಿತು.

2017ರಲ್ಲಿ ಯಾದಗಿರಿಯಲ್ಲಿ ಶ್ರೀರಾಮ ಸೇನೆಯು ಆಯೋಜಿಸಿದ್ದ ರ‍್ಯಾಲಿಯಲ್ಲಿ ಭಾಗಿಯಾಗಿದ್ದ ತೆಲಂಗಾಣ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್, ‘ಪ್ರತಿಯೊಬ್ಬ ಹಿಂದೂ ಸಹ ತನ್ನ ಮನೆಯಲ್ಲಿ ಕತ್ತಿ ಇಟ್ಟುಕೊಳ್ಳಬೇಕು. ಆಗ ಮಾತ್ರ ಇಂಡಿಯಾವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಾಧ್ಯ’ ಎಂದು ಕರೆ ನೀಡಿದ್ದರು. ಅವರ ಈ ಪ್ರಚೋದನಕಾರಿ ಕರೆಗೆ ಸಭಿಕರು ಜೋರಾಗಿ ಚಪ್ಪಾಳೆ ತಟ್ಟಿದ್ದರು. ದ್ವೇಷ ಹರಡಲು ಮತ್ತು ತೆರೆಮರೆಯ ಇಂತಹ ವಿಚಾರಧಾರೆಗಳನ್ನು ಮುಖ್ಯವಾಹಿನಿಗೆ ತರಲು, ಪ್ರಚೋದನಕಾರಿ ಸಂದೇಶವಿರುವ ಇಂತಹ ರ‍್ಯಾಲಿಗಳು ಕಾರಣವಾಗುತ್ತವೆ. ದಕ್ಷಿಣ ಕನ್ನಡದಲ್ಲಿ ಆದ ರೀತಿಯಲ್ಲಿಯೇ ಬೇರೆ ಜಿಲ್ಲೆಗಳಲ್ಲೂ ಆಗುತ್ತಿದೆ ಎಂದು ಬಜರಂಗ ದಳದ ಮಾಜಿ ನಾಯಕರು ಮತ್ತು ಸಾಮಾಜಿಕ ವಿಶ್ಲೇಷಕರು ಕಳವಳ ವ್ಯಕ್ತಪಡಿಸುತ್ತಾರೆ.

ಪ್ರತಿಕ್ರಿಯೆಗಳು

ಬೇರೆ ಅಸ್ತ್ರ ಉಳಿದಿಲ್ಲ

ಸರ್ಕಾರದ ವಿರುದ್ಧ ಎಂದೂ ಕೇಳರಿಯದ ಆಡಳಿತ ವಿರೋಧಿ ಅಲೆ ಇದೆ. ಚುನಾವಣೆ ಬರುತ್ತಿರುವ ಸಂದರ್ಭದಲ್ಲಿ ಅವರ ಬಳಿ ಬೇರೆ ಅಸ್ತ್ರ ಉಳಿದಿಲ್ಲ. ಜನರ ಗಮನ ಬೇರೆಡೆ ಸೆಳೆಯಲು ಮತ ಧ್ರುವೀಕರಣ ಮಾಡುತ್ತಿದ್ದಾರೆ. ಕರಾವಳಿ–ಮಲೆನಾಡು ಮಾದರಿಯನ್ನು ಎಲ್ಲೆಡೆ ವಿಸ್ತರಿಸಲು ಯತ್ನಿಸುತ್ತಿದ್ದಾರೆ. ಅದಕ್ಕಾಗಿ ಅಂತಿಮವಾಗಿ ಉಳಿದಿರುವ (ಕೋಮುವಾದ) ಒಂದಂಶದ ಕಾರ್ಯಸೂಚಿಯ ಮೊರೆ ಹೋಗಿದ್ದಾರೆ.

–ಮುನೀರ್ ಕಾಟಿಪಳ್ಳ, ಡಿವೈಎಫ್ಐ ರಾಜ್ಯ ಘಟಕದ ಅಧ್ಯಕ್ಷ

 

‘ಸಂಸ್ಕೃತಿ ಉಳಿಸುವ ಉದ್ದೇಶ’

ಸಂಸ್ಕೃತಿ, ಧರ್ಮ, ಗೋವಿನ ವಿಚಾರದಲ್ಲಿ ತೊಂದರೆ ಆದಾಗ ಸಹಜವಾಗಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ. ಅದನ್ನು ಮಾಧ್ಯಮಗಳು ಅನೈತಿಕ ಪೊಲೀಸ್ ಗಿರಿ/ಗೂಂಡಾಗಿರಿ ಎಂದು ಹೇಳುವುದು ಸರಿಯಲ್ಲ. ನಮ್ಮ ಸಂಸ್ಕೃತಿ ಉಳಿಸುವ ಉದ್ದೇಶದಿಂದ ನಾವು ಕಾನೂನಿನ ಚೌಕಟ್ಟಿನಲ್ಲೇ ಜಾಗೃತಿ ಮೂಡಿಸುತ್ತಿದ್ದೇವೆ. ಒಂದೆರಡು ಕಡೆ ಹೊಡೆದಾಟದಂಥ ಘಟನೆ ನಡೆದಿರಬಹುದು. ಇದನ್ನೇ ದೊಡ್ಡ ದುಷ್ಕೃತ್ಯ ಎಂದು ಬಿಂಬಿಸುವುದು ಸರಿಯಲ್ಲ.

–ಶರಣ್ ಪಂಪ್‌ವೆಲ್, ವಿಎಚ್‌ಪಿ ವಿಭಾಗ ಕಾರ್ಯದರ್ಶಿ

 

ಹಿಂಸಾತ್ಮಕ ಸ್ವರೂಪ: ಎಚ್ಚರಿಕೆ ಅಗತ್ಯ

ಒಂದು ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟಾದಾಗ ಪ್ರತಿಕ್ರಿಯೆ ವ್ಯಕ್ತವಾಗುವುದು ಸಹಜ. ಆದರೆ ಸಮುದಾಯದ ನಾಯಕತ್ವ ವಹಿಸಿಕೊಂಡವರು ಅದು ಹಿಂಸಾತ್ಮಕ ಸ್ವರೂಪ ಪಡೆಯದಂತೆ ಎಚ್ಚರ ವಹಿಸಬೇಕು. ಕ್ರಿಯೆಗೆ ಪ್ರತಿಕ್ರಿಯೆ ಕುರಿತು, ಮುಖ್ಯಮಂತ್ರಿ ಯಾವ ಉದ್ದೇಶದಿಂದ ಹೇಳಿದ್ದಾರೋ ಗೊತ್ತಿಲ್ಲ. ಆದರೆ ಸಮಾಜದಲ್ಲಿ ಜನರ ಭಾವನೆಗಳಿಗೆ ಧಕ್ಕೆ ಉಂಟಾದಾಗ ಕ್ರಿಯೆ ಹಾಗೂ ಪ್ರತಿಕ್ರಿಯೆಗಳು ಉಂಟಾಗುವುದು ಸಹಜ. ಆದರೆ ನೈತಿಕ ಪೊಲೀಸ್‌ ಗಿರಿ ಮಾಡುವ ಅಧಿಕಾರ ಯಾರಿಗೂ ಇಲ್ಲ.

–ದತ್ತಾತ್ರೇಯ ಹೊಸಬಾಳೆ, ಆರ್‌ಎಸ್‌ಎಸ್‌ ಸರಕಾರ್ಯವಾಹ

 

ಅಸಾಂವಿಧಾನಿಕ ಬೆಳವಣಿಗೆ

ಈಚೆಗೆ ಮುಖ್ಯಮಂತ್ರಿಯವರು ನೀಡಿದ ಹೇಳಿಕೆಯು (ನೈತಿಕ ಪೊಲೀಸ್‌ಗಿರಿ ಕುರಿತು) ಪ್ರಜಾಪ್ರಭುತ್ವ ಅಥವಾ ಸಂವಿಧಾನವನ್ನು ಕೊನೆಗೊಳಿಸುವಂಥದ್ದು. ಜನರ ಸಾಂವಿಧಾನಿಕ ಸ್ವಾತಂತ್ರ್ಯವನ್ನು ರಕ್ಷಣೆ ಮಾಡಬೇಕಾದ ಮುಖ್ಯಮಂತ್ರಿಯೇ, ಅದನ್ನು ಉಲ್ಲಂಘಿಸುವವರ ಪರ ಹೇಳಿಕೆ ಕೊಟ್ಟಿದ್ದಾರೆ. ಅದು, ಅವರ ಪಕ್ಷದ ರಾಜಕೀಯವನ್ನು ತೋರಿಸಬಹುದು. ಆದರೆ, ಸಂವಿಧಾನಕ್ಕೆ ವಿರುದ್ಧವಾಗಿದೆ.

–ಕೆ.ಫಣಿರಾಜ್, ಚಿಂತಕ

 

ಕಾನೂನು ಕ್ರಮ ನಿಶ್ಚಿತ

ಸ್ವಾತಂತ್ರ್ಯಾ ನಂತರದಲ್ಲಿ ಕೇವಲ ಸೈದ್ಧಾಂತಿಕ ಬಲದ ಮೇಲೆ ಬೆಳೆಯಲು ವಿಫಲವಾದ ಕೆಲವು ರಾಜಕೀಯ ಪಕ್ಷಗಳು ಮತೀಯ ಗೂಂಡಾಗಿರಿ, ಹಿಂಸೆಯನ್ನು ಬೆಂಬಲಿಸುತ್ತಾ ಬಂದಿವೆ. ಆ ಮೂಲಕವೇ ರಾಜಕೀಯವಾಗಿ ಬೆಳೆಯಲು ಪ್ರಯತ್ನಿಸುತ್ತಿವೆ. ನಾನು ಯಾವತ್ತೂ ಮತೀಯ ಹಿಂಸೆಯನ್ನು ಬೆಂಬಲಿಸಿಲ್ಲ. ಯಾವುದೇ ವ್ಯಕ್ತಿ ಮತೀಯ ಹಿಂಸಾಚಾರ, ಗೂಂಡಾಗಿರಿಯಲ್ಲಿ ಭಾಗಿಯಾದರೂ ನೆಲದ ಕಾನೂನಿನ ಅನುಸಾರ ಕಠಿಣ ಕ್ರಮ ಜರುಗಿಸುವುದು ನಿಶ್ಚಿತ.

–ಆರಗ ಜ್ಞಾನೇಂದ್ರ, ಗೃಹ ಸಚಿವ

––––

ಇವನ್ನೂ ಓದಿ

ಪ್ರಜಾವಾಣಿ ಒಳನೋಟ: ಕೋಮುಕಿಡಿಗಾಗಿ ಬೊಮ್ಮಾಯಿಗೆ ಯೋಗಿ ಮಾದರಿಯ ಹಂಗೇಕೆ?

ಪ್ರಜಾವಾಣಿ ಒಳನೋಟ: ಕೋಮುಕಿಡಿ– ಪ್ರಕರಣ ಹಿಂಪಡೆಯಲು ಪೈಪೋಟಿ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು