ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಂವಾದ | ನೈತಿಕ ಶಕ್ತಿ ಕಳೆದುಕೊಂಡ ಬಿಜೆಪಿ

ಫೇಸ್‌ಬುಕ್‌ ಲೈವ್‌ ಸಂವಾದದಲ್ಲಿ ಕಾಂಗ್ರೆಸ್‌, ಎಎಪಿ ಆರೋಪ
Last Updated 23 ನವೆಂಬರ್ 2021, 20:00 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಸರ್ಕಾರಿ ಕಾಮಗಾರಿಗಳಿಗೆ ಬಿಡುಗಡೆಯಾಗುವ ಅನುದಾನದಲ್ಲಿ ಶೇಕಡ 40ರಷ್ಟು ಮೊತ್ತ ಲಂಚದ ರೂಪದಲ್ಲಿ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ಜೇಬು ಸೇರುತ್ತಿದೆ ಎಂದು ಆರೋಪಿಸಿ ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ನೀಡಿದ್ದಾರೆ. ರಾಜ್ಯಪಾಲರು, ಮುಖ್ಯಮಂತ್ರಿ ಸೇರಿದಂತೆ ಹಲವರಿಗೆ ಇದೇ ದೂರನ್ನು ಸಲ್ಲಿಸಿ, ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ವಿಷಯ ಈಗ ರಾಜ್ಯ ರಾಜಕೀಯದಲ್ಲಿ ಆರೋಪ– ಪ್ರತ್ಯಾರೋಪಗಳಿಗೆ ನಾಂದಿಹಾಡಿದೆ. ಈ ಕುರಿತು ‘ಪ್ರಜಾವಾಣಿ’ ಮಂಗಳವಾರ ಆಯೋಜಿಸಿದ್ದ ಫೇಸ್‌ ಬುಕ್‌ ಲೈವ್‌ ಸಂವಾದದಲ್ಲಿ ಕಾಂಗ್ರೆಸ್, ಬಿಜೆಪಿ, ಆಮ್ ಆದ್ಮಿ ಪಕ್ಷಗಳ ಪ್ರತಿನಿಧಿಗಳು ವ್ಯಕ್ತಪಡಿಸಿದ ಅಭಿಪ್ರಾಯಗಳ ಸಂಕ್ಷಿಪ್ತ ರೂಪ ಇಲ್ಲಿದೆ.

ಸಂವಾದವನ್ನು ವೀಕ್ಷಿಸಲು https://m.facebook.com/prajavani.net/videos/433154954837031/ ಲಿಂಕ್‌ ಬಳಸಬಹುದು.

‘ಕೇಶವ ಕೃಪಾ’ದಲ್ಲಿ ಅಪಪ್ರಚಾರದ ತರಬೇತಿ

ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಬಿಜೆಪಿ ಸರ್ಕಾರದ ಮೇಲೆ ಮಾಡಿರುವ ಲಂಚದ ಆರೋಪದ ಬಗ್ಗೆ ಸ್ವತಂತ್ರ ನ್ಯಾಯಾಂಗ ತನಿಖೆ ಆಗಬೇಕು. ‘ನಾನು ತಿನ್ನಲ್ಲ, ತಿನ್ನೋಕೆ ಬಿಡಲ್ಲ’ ಎಂಬುದು ಈ ಹಿಂದಿನ ಎರಡು ಚುನಾವಣೆಗಳಲ್ಲಿ ಪ್ರಧಾನಿಯವರ ಘೋಷಣೆಯಾಗಿತ್ತು. ಆದರೆ, ಈಗ ಕೇಂದ್ರ, ರಾಜ್ಯ ಸರ್ಕಾರಗಳು ‘ನನಗೆ ತಿನ್ನಿಸು, ನೀನೂ ತಿನ್ನು’ ಎಂಬ ಮಟ್ಟಕ್ಕೆ ಇಳಿದಿವೆ. ಬಿಜೆಪಿ ಈಗ ‘ಭ್ರಷ್ಟಾಚಾರ ಜನತಾ ಪಕ್ಷ’ವಾಗಿದೆ. ಬಿಜೆಪಿ ಹಾಗೂ ಈ ಪಕ್ಷಕ್ಕೆ ಪರೋಕ್ಷ ಬೆಂಬಲ ನೀಡುತ್ತಿರುವ ಆರ್‌ಎಸ್‌ಎಸ್ ನೈತಿಕ ಶಕ್ತಿ ಕಳೆದುಕೊಂಡಿವೆ. ಭ್ರಷ್ಟಾಚಾರ ಪ್ರಶ್ನಿಸುವ ಸಿದ್ದರಾಮಯ್ಯ ವಿರುದ್ಧ ಅಪಪ್ರಚಾರ ನಡೆಸುವ ಕುರಿತು ಕೇಶವಕೃಪಾದಲ್ಲೇ ತರಬೇತಿ ನೀಡಲಾಗುತ್ತಿದೆ.

ಹೆಚ್ಚು ಅನುದಾನ ಇರುವ ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಭ್ರಷ್ಟಾಚಾರದ ವಿರುದ್ಧ ಮಾತನಾಡಿದರೆ ಅದಕ್ಕೆ ಕಾಂಗ್ರೆಸ್ ಪಕ್ಷವನ್ನು ತಳಕು ಹಾಕುವ ಜಾಯಮಾನ ಬಿಜೆಪಿಯದ್ದು. ಬಿಟ್‌ಕಾಯಿನ್‌ ಹಾಗೂ ಲಂಚ ಆರೋಪದ ಬಗ್ಗೆ ಸಮಗ್ರ ಮಾಹಿತಿ ಕಲೆಹಾಕಿದ್ದೇವೆ. ಎರಡೂ ವಿಷಯಗಳಲ್ಲಿ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಬಿಜೆಪಿಯ ವಿರುದ್ಧ ಪ್ರಬಲ ಹೋರಾಟ ನಡೆಸುತ್ತೇವೆ.

- ರಮೇಶ್ ಬಾಬು, ಕಾಂಗ್ರೆಸ್ ರಾಜ್ಯ ಘಟಕದ ವಕ್ತಾರ

****

ಭ್ರಷ್ಟಾಚಾರ ಪರಿಚಯಿಸಿದ್ದೇ ಕಾಂಗ್ರೆಸ್

ಈ ದೇಶಕ್ಕೆ ಭ್ರಷ್ಟಾಚಾರ ಪರಿಚಯಿಸಿದ್ದೇ ಕಾಂಗ್ರೆಸ್ ಪಕ್ಷ. ಬಿಜೆಪಿ ನೀಡುತ್ತಿರುವ ಉತ್ತಮ ಆಡಳಿತ ಸಹಿಸಿಕೊಳ್ಳಲಾಗದೆ, ವಿನಾಕಾರಣ ಆಪಾದನೆ ಮಾಡುತ್ತಿದೆ. ಗುತ್ತಿಗೆದಾರರ ಆರೋಪಗಳು ಕಾಂಗ್ರೆಸ್‌ ಪ್ರೇರಿತವಾಗಿವೆ. ಲಂಚ ಕೊಡುವುದೂ ತಪ್ಪು, ತೆಗೆದುಕೊಳ್ಳುವುದೂ ತಪ್ಪೇ. ಆದ್ದರಿಂದ ಯಾರಿಗೆ ಹಣ ಕೊಟ್ಟಿದ್ದೇವೆ ಎಂಬುದನ್ನು ಗುತ್ತಿಗೆದಾರರ ಸಂಘದವರು ಸ್ಪಷ್ಟಪಡಿಸಬೇಕು.

ಸರ್ಕಾರ ₹100 ಬಿಡುಗಡೆ ಮಾಡಿದರೆ ₹15 ಮಾತ್ರ ಫಲಾನುಭವಿಗೆ ತಲುಪುತ್ತದೆ ಎಂದು ರಾಜೀವ್‌ ಗಾಂಧಿ ಹಿಂದೆಯೇ ಹೇಳಿದ್ದರು. ಆ ಬಗ್ಗೆ ಕಾಂಗ್ರೆಸ್‌ ಏನು ಹೇಳುತ್ತದೆ? ಬಿಟ್‌ಕಾಯಿನ್‌ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಪುತ್ರನ ಹೆಸರು ಮುನ್ನೆಲೆಗೆ ಬರುತ್ತಿದ್ದಂತೆ ಕಾಂಗ್ರೆಸ್‌ ಮೌನವಹಿಸಿದ್ದೇಕೆ? ₹8,000 ಕೋಟಿಯ ಎತ್ತಿನಹೊಳೆ ಯೋಜನೆಯನ್ನು ಸಿದ್ದರಾಮಯ್ಯ ಅವಧಿಯಲ್ಲಿ ₹12,000 ಕೋಟಿಗೆ ಹೆಚ್ಚಿಸಿದ್ದೇಕೆ?

ಸರ್ಕಾರದ ಮೇಲೆ ಗೂಬೆ ಕೂರಿಸುವುದು, ಎಲ್ಲದಕ್ಕೂ ಸಂಘ ಪರಿವಾರವನ್ನು ಎಳೆದು ತರುವುದು ಕಾಂಗ್ರೆಸ್‌ಗೆ ರೂಢಿಯಾಗಿದೆ. ಕಾಂಗ್ರೆಸ್‌ ತನ್ನ ಅಧಿಕಾರಾವಧಿಯಲ್ಲಿ ನಡೆದ ಭ್ರಷ್ಟಾಚಾರ ಬಯಲಿಗೆ ಬರಬಹುದೆಂಬ ಭೀತಿಯಲ್ಲಿ ಲೋಕಾಯುಕ್ತದ ಕತ್ತು ಹಿಸುಕಿದೆ. ಭ್ರಷ್ಟಾಚಾರದ ಬಗ್ಗೆ ದಾಖಲೆಗಳಿದ್ದರೆ ಬಹಿರಂಗಪಡಿಸಬೇಕು. ಆಧಾರರಹಿತ ಆರೋಪ ಮಾಡುವುದು ಸರಿಯಲ್ಲ.

- ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಎಸ್‌ಸಿ, ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ

****
ಶೇ 40ರಷ್ಟು ‘ಬಿಜೆಪಿ ಟ್ಯಾಕ್ಸ್’

ಹಿಂದೆ ಕಾಂಗ್ರೆಸ್ ಆಡಳಿತದಲ್ಲಿ ‘ಶೇ 10ರ ಸರ್ಕಾರ’ ಇದ್ದರೆ, ಸಮ್ಮಿಶ್ರ ಸರ್ಕಾರದಲ್ಲಿ ಅದು ಶೇ 15ರಿಂದ 20ಗೆ ಏರಿಕೆಯಾಯಿತು. ಬಿಜೆಪಿ ಸರ್ಕಾರದಲ್ಲಿ ಇದು ಶೇ 40ರಿಂದ 52ಕ್ಕೆ ತಲುಪಿದೆ. ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಪರಸ್ಪರ ಆರೋಪ ಮಾಡುತ್ತಿವೆಯೇ ವಿನಾ ತನಿಖೆಗೆ ಮುಂದಾಗುತ್ತಿಲ್ಲ. ಜನರು ನೀಡುತ್ತಿರುವ ತೆರಿಗೆಯ ಹಣ ಲಂಚದ ರೂಪದಲ್ಲಿ ಬಿಜೆಪಿ ಪಾಲಾಗುತ್ತಿದೆ. ಗುತ್ತಿಗೆದಾರರ ಮೂಲಕ ಸರ್ಕಾರಕ್ಕೆ ಶೇ 40ರಷ್ಟು ‘ಬಿಜೆಪಿ ಟ್ಯಾಕ್ಸ್’ ತಲುಪುತ್ತಿದೆ.

ಕಾಮಗಾರಿಗಳ ಟೆಂಡರ್ ಅಧಿಸೂಚನೆ ಪ್ರಕಟಿಸುವುದಕ್ಕೂ ಲಂಚ ನೀಡಬೇಕಾದ ಪರಿಸ್ಥಿತಿ ರಾಜ್ಯದಲ್ಲಿ ಇದೆ. ಮೂರೂ ಪಕ್ಷಗಳ ಭ್ರಷ್ಟಾಚಾರದ ಬಗ್ಗೆ ಆಮ್ ಆದ್ಮಿ ಪಾರ್ಟಿ ಜನಜಾಗೃತಿ ಅಭಿಯಾನ ನಡೆಸುತ್ತಿದೆ. ಸಾಮಾಜಿಕ ಸಮೀಕ್ಷೆ ಮೂಲಕ ಕಳಪೆ ಕಾಮಗಾರಿಗಳನ್ನು ಬೆಳಕಿಗೆ ತಂದು ಮತದಾರರನ್ನು ಎಚ್ಚರಿಸುವ ಕೆಲಸ ಮಾಡುತ್ತೇವೆ.

- ಉಷಾ ಮೋಹನ್, ಆಮ್ ಆದ್ಮಿ ಪಾರ್ಟಿ ವಕ್ತಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT