ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಿಣಿಯರಿಗೆ ಕೋವಿಡ್ ಲಸಿಕೆ ಸುರಕ್ಷಿತ: ಆರೋಗ್ಯ ಇಲಾಖೆ

Last Updated 7 ಜುಲೈ 2021, 14:28 IST
ಅಕ್ಷರ ಗಾತ್ರ

ಬೆಂಗಳೂರು: ಗರ್ಭಿಣಿಯರು ಕೋವಿಡ್ ಲಸಿಕೆ ಪಡೆದುಕೊಳ್ಳುವುದು ಸುರಕ್ಷಿತವಾಗಿದ್ದು, ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳುವುದಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕೆಲ ದಿನಗಳ ಹಿಂದಷ್ಟೇ ಕೇಂದ್ರ ಆರೋಗ್ಯ ಸಚಿವಾಲಯವು ಗರ್ಭಿಣಿಯರಿಗೆ ಲಸಿಕೆ ಒದಗಿಸುವ ಸಂಬಂಧ ಮಾರ್ಗಸೂಚಿಯನ್ನು ಹೊರಡಿಸಿದೆ. ಮಗು ಮತ್ತು ತಾಯಿಯ ಆರೋಗ್ಯದ ದೃಷ್ಟಿಯಿಂದ ಲಸಿಕೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಸೂಚಿಸಿತ್ತು. ಆದರೂ ರಾಜ್ಯದಲ್ಲಿ ಕೆಲ ಗರ್ಭಿಣಿಯರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವ ಕಾರಣ ಆರೋಗ್ಯ ಇಲಾಖೆಯು ಈ ಬಗ್ಗೆ ಸ್ಪಷ್ಟನೆ ನೀಡಿದೆ.

‘ಗರ್ಭಿಣಿಯರೂ ಒಳಗೊಂಡಂತೆ 18 ವರ್ಷ ಮೇಲ್ಪಟ್ಟ ಎಲ್ಲರೂ ಕೋವಿಡ್ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ. ಕೊರೊನಾ ಸೋಂಕಿತ ಗರ್ಭಿಣಿಯರು ಗಂಭೀರ ಸ್ವರೂಪದ ಕಾಯಿಲೆಗಳನ್ನು ಎದುರಿಸುವ ಸಂಭವ ಹೆಚ್ಚು. ಭ್ರೂಣದ ಮೇಲೂ ಪರಿಣಾಮ ಬೀರಬಹುದು. ಆದ್ದರಿಂದ ಗರ್ಭಿಣಿಯರು ಕೋವಿಡ್ ಲಸಿಕೆ ಪಡೆದುಕೊಳ್ಳುವಂತೆ ಶಿಫಾರಸು ಮಾಡಲಾಗಿದೆ’ ಎಂದು ಇಲಾಖೆ ತಿಳಿಸಿದೆ.

‘35 ವರ್ಷ ಮೇಲ್ಪಟ್ಟವರು, ಅಧಿಕ ತೂಕ ಹೊಂದಿರುವವರು, ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು, ರಕ್ತ ಹೆಪ್ಪುಗಟ್ಟುವ ಅಪಾಯ ಇರುವ ಗರ್ಭಿಣಿಯರಿಗೆ ಕೊರೊನಾ ಸೋಂಕು ಅಪಾಯವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ. ಕೋವಿಡ್ ಪೀಡಿತ ಗರ್ಭಿಣಿಯರಿಗೆ ಅವಧಿಪೂರ್ವ ಹೆರಿಗೆ, ಶಿಶುವಿನ ತೂಕ 2.5 ಕೆ.ಜಿ.ಗಿಂತ ಕಡಿಮೆ, ಅಪರೂಪದ ಸನ್ನಿವೇಶದಲ್ಲಿ ಜನಿಸಿದ ಶಿಶು ಮರಣ ಹೊಂದುವ ಸಾಧ್ಯತೆ ಇರುತ್ತದೆ. ಕೋವಿಡ್ ಲಸಿಕೆಯನ್ನು ಗರ್ಭಾವಸ್ಥೆಯ ಯಾವುದೇ ಸಮಯದಲ್ಲಾದರೂ ಪಡೆದುಕೊಳ್ಳಬಹುದು. ಆದರೆ, ಸಾಧ್ಯವಾದಷ್ಟು ಬೇಗ ಪಡೆದುಕೊಳ್ಳುವುದು ಒಳಿತು’ ಎಂದು ಹೇಳಲಾಗಿದೆ.

ಸಹಜ ಲಕ್ಷಣ ಗೋಚರ: ‘ಲಸಿಕೆ ಪಡೆದ ಜಾಗದಲ್ಲಿ ನೋವು, ಮೂರು ದಿನಗಳವರೆಗೆ ಅಸ್ವಸ್ಥತೆಯಂತಹ ಲಕ್ಷಣಗಳು ಲಸಿಕೆ ಪಡೆದ ಬಳಿಕ ಸಹಜವಾಗಿ ಕಾಣಿಸಿಕೊಳ್ಳುತ್ತವೆ. ಇವು ಲಸಿಕೆಯ ಅಡ್ಡ ಪರಿಣಾಮಗಳಲ್ಲ. ಲಸಿಕೆಯಿಂದ ಭ್ರೂಣ ಹಾಗೂ ಮಗುವಿನ ಮೇಲೆ ಉಂಟಾಗಬಹುದಾದಂತಹ ದೀರ್ಘಾವಧಿ ಅಡ್ಡ ಪರಿಣಾಮಗಳು ಮತ್ತು ಅಸುರಕ್ಷತೆ ಕುರಿತಂತೆ ಇದುವರೆಗೂ ಯಾವುದೇ ವರದಿಯಾಗಿಲ್ಲ’ ಎಂದು ತಿಳಿಸಲಾಗಿದೆ.

‘ಒಂದು ವೇಳೆ ಕೋವಿಡ್ ಲಸಿಕೆ ಪಡೆದ ಬಳಿಕ ಉಸಿರಾಟದಲ್ಲಿ ತೊಂದರೆ, ಎದೆನೋವು, ಸಣ್ಣ ಸಣ್ಣ ಕೆಂಪು ಮಚ್ಚೆಗಳು, ಲಸಿಕೆ ಪಡೆದ ಜಾಗದಲ್ಲಿ ಚರ್ಮದ ಮೆಲೆ ತರಚು ಗಾಯಗಳು, ತೀವ್ರ ತಲೆನೋವು, ವಾಂತಿ ಅಥವಾ ಹೊಟ್ಟೆನೋವು, ಕಣ್ಣು ಮಂಜಾಗುವುದು ಸೇರಿದಂತೆ ವಿವಿಧ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ಆಸ್ಪತ್ರೆಗೆ ಭೇಟಿ ನೀಡಿ, ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ಇಲಾಖೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT