ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಡಾಳ್‌ ವಿರುದ್ಧ ಮತ್ತೊಂದು ಪ್ರಕರಣಕ್ಕೆ ಸಿದ್ಧತೆ

ಆದಾಯಕ್ಕಿಂತ ಹೆಚ್ಚು ಆಸ್ತಿ: ಅಂತಿಮ ಹಂತದಲ್ಲಿ ಪ್ರಾಥಮಿಕ ತನಿಖೆ
Last Updated 29 ಮಾರ್ಚ್ 2023, 20:18 IST
ಅಕ್ಷರ ಗಾತ್ರ

ಬೆಂಗಳೂರು: ಲಂಚ ಪ್ರಕರಣದಲ್ಲಿ ಬಂಧಿತರಾಗಿರುವ ಚನ್ನಗಿರಿ ಬಿಜೆಪಿ ಶಾಸಕ ಕೆ. ಮಾಡಾಳ್‌ ವಿರೂಪಾಕ್ಷಪ್ಪ ಮತ್ತು ಅವರ ಕುಟುಂಬದ ಇತರ ಸದಸ್ಯರ ವಿರುದ್ಧ ಆದಾಯಕ್ಕಿಂತ ಹೆಚ್ಚುಆಸ್ತಿ ಹೊಂದಿರುವ ಆರೋಪದಡಿ ಪ್ರತ್ಯೇಕ ಕ್ರಿಮಿನಲ್‌ ಪ್ರಕರಣ ದಾಖಲಿ
ಸಲು ಲೋಕಾಯುಕ್ತ ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್‌ಡಿಎಲ್‌) ಅಧ್ಯಕ್ಷರಾಗಿದ್ದ ವಿರೂಪಾಕ್ಷಪ್ಪ ಮತ್ತು ಅವರ ಮಗ, ಬೆಂಗಳೂರು ಜಲಮಂಡಳಿ ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ್‌ ಮಾಡಾಳ್‌ ವಿರುದ್ಧ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಡಿ ಲೋಕಾ
ಯುಕ್ತ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು. ₹40 ಲಕ್ಷ ಲಂಚ ಪಡೆಯುತ್ತಿದ್ದ ಪ್ರಶಾಂತ್‌ ಅವರನ್ನು ಮಾರ್ಚ್‌ 2ರಂದು ಬಂಧಿಸಲಾಗಿತ್ತು. ವಿರೂಪಾಕ್ಷಪ್ಪ ಅವರ ಬೆಂಗಳೂರಿನ ಮನೆ ಹಾಗೂ ಚನ್ನಗಿರಿ ತಾಲ್ಲೂಕಿನ ಚನ್ನೇಶಪುರದ ಮನೆಗಳ ಮೇಲೂ ದಾಳಿಮಾಡಿ ಶೋಧ ನಡೆಸಲಾಗಿತ್ತು.

ವಿರೂ‍ಪಾಕ್ಷಪ್ಪ ವಿರುದ್ಧ ಒಂದು ಹಾಗೂ ಪ್ರಶಾಂತ್‌ ಮತ್ತು ಇತರರ ವಿರುದ್ಧ ಮೂರು ಪ್ರಕರಣಗಳನ್ನು ಈವರೆಗೆ ದಾಖಲಿಸಲಾಗಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಕುರಿತು ಲೋಕಾಯುಕ್ತ ಪೊಲೀಸರು ಪ್ರಾಥಮಿಕ ತನಿಖೆ ಆರಂಭಿಸಿದ್ದರು. ದಾಳಿ ವೇಳೆ ವಶಕ್ಕೆ ಪಡೆದ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಮುಕ್ತ ವಿಚಾರಣೆಯನ್ನೂ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಪ್ರಾಥಮಿಕ ತನಿಖೆ ಅಂತಿಮ ಹಂತ ತಲುಪಿದೆ ಎಂದು ಮೂಲಗಳು ತಿಳಿಸಿವೆ.

‘ಅಡಿಕೆ ಮಂಡಿ, ಕ್ರಷರ್‌, ಗುಟ್ಕಾ ತಯಾರಿಕಾ ಕಾರ್ಖಾನೆ ಮತ್ತು ರಿಯಲ್‌ ಎಸ್ಟೇಟ್‌ ಉದ್ಯಮಗಳಲ್ಲಿ ಬೃಹತ್‌ ಪ್ರಮಾಣದ ಹೂಡಿಕೆ ಮಾಡಿರುವುದಕ್ಕೆ ದಾಖಲೆಗಳು ಸಿಕ್ಕಿವೆ. ಲಂಚದ ಹಣವನ್ನು ಪರಿವರ್ತಿಸಿಕೊಳ್ಳಲು ಈ ಉದ್ಯಮಗಳನ್ನು ನಡೆಸುತ್ತಿರುವ ಸಂಶಯವೂ ಇದೆ. ವಿರೂಪಾಕ್ಷಪ್ಪ ಅವರ ಕುಟುಂಬದ ಅಧಿಕೃತ ಆದಾಯ ಮತ್ತು ಅವರು ಹೊಂದಿರುವ ಆಸ್ತಿಯ ನಡುವೆ ಭಾರಿ ಅಂತರ ಕಂಡುಬಂದಿದೆ’ ಎಂದು ಮೂಲಗಳು ಹೇಳಿವೆ.

ವಿರೂಪಾಕ್ಷಪ್ಪ ಕೆಎಸ್‌ಡಿಎಲ್ ಅಧ್ಯಕ್ಷರಾದ ಬಳಿಕ ಅವರ ಕುಟುಂಬವು ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳು ಮತ್ತು ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಹಲವು ಸ್ಥಿರಾಸ್ತಿಗಳನ್ನು ಖರೀದಿಸಿರುವ ದಾಖಲೆಗಳು ತನಿಖಾ ತಂಡಕ್ಕೆ ಲಭಿಸಿವೆ.

ಮುಂದುವರಿದ ವಿಚಾರಣೆ

ಕೆಎಸ್‌ಡಿಎಲ್‌ ಟೆಂಡರ್‌ನಲ್ಲಿ ಅಕ್ರಮ ಮತ್ತು ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಇಡೀ ದಿನ ವಿಚಾರಣೆ ನಡೆಸಿದರು.

ಸೋಮವಾರ ರಾತ್ರಿ ಶಾಸಕರನ್ನು ಬಂಧಿಸಲಾಗಿತ್ತು. ಮಂಗಳವಾರ ಇಡೀ ದಿನ ವಿಚಾರಣೆ ನಡೆಸಲಾಗಿತ್ತು. ಬುಧವಾರವೂ ತನಿಖಾಧಿಕಾರಿಗಳು ಹಲವು ಬಾರಿ ಅವರನ್ನು ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT