ಮಂಗಳವಾರ, ಡಿಸೆಂಬರ್ 1, 2020
20 °C
ರಮೇಶ್‌ ಜಾರಕಿಹೊಳಿ ಜತೆ ಶಾಸಕರ ಮಾತುಕತೆ

ಸಂಪುಟ ವಿಸ್ತರಣೆ: ಬಿಎಸ್‌ವೈಗೆ ಶಾಸಕರ ಒತ್ತಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಚಿವ ಸಂಪುಟ ವಿಸ್ತರಣೆಯ ಸುಳಿವು ನೀಡುತ್ತಿದ್ದಂತೆ ಅವರನ್ನು ಭೇಟಿ ಮಾಡಿ, ಒತ್ತಡ ಹೇರುವ ಶಾಸಕರ ಸಂಖ್ಯೆಯೂ ಹೆಚ್ಚಾಗಿದೆ.

ಬುಧವಾರ ಬೆಳಿಗ್ಗೆ ಸುಮಾರು ಆರಕ್ಕೂ ಹೆಚ್ಚು ಶಾಸಕರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಅದಕ್ಕೆ ಮುನ್ನ ಈ ಶಾಸಕರು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿಯನ್ನು ಭೇಟಿ ಮಾಡಿ ಈ ಸಂಬಂಧ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಎಡೆ ಮಾಡಿದೆ.

ಶಾಸಕರಾದ ಮುರುಗೇಶ ನಿರಾಣಿ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌, ಶಾಸಕಿ ಪೂರ್ಣಿಮಾ ಶ್ರೀನಿವಾಸ್‌, ಸಚಿವೆ ಶಶಿಕಲಾ ಜೊಲ್ಲೆ ಮುಂತಾದವರು ರಮೇಶ ಜಾರಕಿಹೊಳಿ ಅವರ ಜತೆ ಮಾತುಕತೆ ನಡೆಸಿದ್ದಾರೆ.

ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ರಾಜುಗೌಡ, ‘ನಾವು ಕೆಲವು ಶಾಸಕರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ್ದೇವೆ. ಈಗಾಗಲೇ ಮುಖ್ಯಮಂತ್ರಿಯವರಿಗೆ ನಮ್ಮ ಆಕಾಂಕ್ಷೆಯನ್ನು ತೋಡಿಕೊಂಡಿದ್ದೇವೆ. ಆದರೆ ಯಾವುದೇ ಕಾರಣಕ್ಕೂ ಸಚಿವ ಸ್ಥಾನಕ್ಕಾಗಿ ಅವರ ಮೇಲೆ ಒತ್ತಡ ಹಾಕುವುದಿಲ್ಲ. ನೀರಾವರಿ ವಿಷಯವೂ ಸೇರಿದಂತೆ ಕ್ಷೇತ್ರದ ವಿಚಾರಗಳ ಬಗ್ಗೆ ಮಾತನಾಡಿದ್ದೇವೆ’ ಎಂದರು.

ಶಾಸಕಿ ಪೂರ್ಣಿಮಾ ಮಾತನಾಡಿ, ‘ಸಚಿವೆಯಾಗಿ ಕೆಲಸ ಮಾಡಲು ನನಗೂ ಆಸೆ ಇದೆ. ಆಕಾಂಕ್ಷಿ ಎನ್ನುವುದಕ್ಕಿಂತ ಪಕ್ಷ ತೀರ್ಮಾನ ಮಾಡಬೇಕು. ಅಂತಿಮವಾಗಿ ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟ ವಿಚಾರ. ಸಚಿವ ಸ್ಥಾನಕ್ಕೆ ನನ್ನ ಹೆಸರು ಕೇಳಿ ಬರುತ್ತಿರುವುದು ನಿಜ. ಅವಕಾಶ ನೀಡಿದರೆ ಅಚ್ಚುಕಟ್ಟಾಗಿ ನಿಭಾಯಿಸುವ ವಿಶ್ವಾಸವಿದೆ’ ಎಂದರು.

ಪುನಾರಚನೆ ಸೂಕ್ತ:

ಈ ಮಧ್ಯೆ ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಅವರು ಮಾತನಾಡಿ, ‘ಮುಂದಿನ ಸಾರ್ವತ್ರಿಕ ಚುನಾವಣೆಗೆ ತಯಾರಿ ನಡೆಸಲು ಸಚಿವ ಸಂಪುಟ ಪುನಾರಚನೆ ಮಾಡುವುದೇ ಸೂಕ್ತ. ಹೊಸ ಮಂತ್ರಿಮಂಡಲದ ಜತೆಗೆ ಹೊಸ ಉತ್ಸಾಹದೊಂದಿಗೆ ಚುನಾವಣೆಗೆ ಸಿದ್ಧವಾಗಬೇಕು’ ಎಂದು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು