ಶುಕ್ರವಾರ, ಮೇ 7, 2021
26 °C

ಖಾಸಗಿ ಆಸ್ಪತ್ರೆಗಳಲ್ಲಿನ ಸಿ.ಟಿ ಸ್ಕ್ಯಾನ್‌ಗೆ ದರ ನಿಗದಿ: ಸಚಿವ ಡಾ.ಸುಧಾಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಕೊರೊನಾ ನಿಖರ ತಪಾಸಣೆಗಾಗಿ ತಜ್ಞರ ತಂಡ ಸಿಟಿ ಸ್ಕ್ಯಾನ್‌ ಮಾಡಲು ಸಲಹೆ ನೀಡಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಅಧಿಕ ಶುಲ್ಕ ವಸೂಲಿ‌ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇಂದು ನಿಗದಿತ ದರಗಳನ್ನು ಮಾತ್ರ ಪಡೆಯುವಂತೆ ಆದೇಶ ಹೊರಡಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ‌ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ ತಿಳಿಸಿದರು‌.

ನಗರದ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳೆ ಅಧಿಕ ಶುಲ್ಕ ಪಡೆಯುವಂತಿಲ್ಲ ಎಂದರು‌

2 ಕೋಟಿ ಲಸಿಕೆ: ರಾಜ್ಯದಲ್ಲಿ 2 ಕೋಟಿ‌ ಲಸಿಕೆಗಳನ್ನು ಪಡೆಯಲು ‌ಉದ್ದೇಶಿಸಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಟಲ್ ಬಿಹಾರಿ ವಾಜಪೇಯಿ ಆಸ್ಪತ್ರೆಯಲ್ಲಿ ಲಸಿಕೆಗೆ ಚಾಲನೆ ನೀಡಲಿದ್ದಾರೆ. ಸಾರ್ವತ್ರಿಕ ‌ಲಸಿಕೆ ಯಾವಾಗಿನಿಂದ ಆರಂಭವಾಗಲಿದೆ ಎಂಬುದು ಕಂಪನಿಗಳ ಉತ್ಪಾದನೆ ನೋಡಿಕೊಂಡು ‌ತಿಳಿಸಲಾಗುತ್ತದೆ ಎಂದರು‌.

ಪ್ರಸ್ತುತ ಆರು ಸಾವಿರ ‌ಲಸಿಕಾ ಕೇಂದ್ರಗಳಿದ್ದು, ಅವುಗಳಿಗೆ 3 ಲಕ್ಷ ಲಸಿಕೆ ಅಗತ್ಯವಿದೆ. ಆದರೆ, ಸಾರ್ವತ್ರಿಕ ‌ಲಸಿಕೆ ಆರಂಭವಾದಾಗ ನಿತ್ಯ ಆರು ಲಕ್ಷ‌ ಲಸಿಕೆಯಾದರೂ ಬೇಕಾಗುತ್ತದೆ ಎಂದರು.

ನಾಲ್ಕೈದು ದಿನಕ್ಕೆ ಪರಿಣಾಮವಿಲ್ಲ: ಲಾಕ್ ಡೌನ್ ಜಾರಿಗೆ ಬಂದು ನಾಲ್ಕು ದಿನಗಳಷ್ಟೇ ಆಗಿದ್ದು, ಇದರ ಪರಿಣಾಮ ತಕ್ಷಣಕ್ಕೆ ಗೊತ್ತಾಗುವುದಿಲ್ಲ. ಮಹಾರಾಷ್ಟ್ರದಲ್ಲಿ 44 ದಿನಗಳಿಂದ ಲಾಕ್ ಡೌನ್ ಜಾರಿಯಲ್ಲಿದ್ದು, ಈಗಷ್ಟೇ ಮುಂಬೈನಲ್ಲಿ ನಿಯಂತ್ರಣಕ್ಕೆ ಬರುತ್ತಿದೆ. ಹಾಗಾಗಿ ಲಾಕ್ ಡೌನ್ ಅನಿವಾರ್ಯ. ಆಗಲೂ ‌ನಿಯಂತ್ರಣಕ್ಕೆ ಬರದಿದ್ದರೆ ಕಠಿಣ ನಿಯಮ ಅನಿವಾರ್ಯವಾಗಲಿದೆ ‌ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಚಿಕ್ಕಬಳ್ಳಾಪುರದ ಜನರಿಗೆ ಶೇ 15ರಷ್ಟು ಬೆಂಗಳೂರಿನ ಆಸ್ಪತ್ರೆಗಳಲ್ಲಿ ಹಾಸಿಗೆ ನಿಗದಿಪಡಿಸಿದ್ದು ಅನಿವಾರ್ಯ. ಈ ಸಂದರ್ಭದಲ್ಲಿ ಜನರ ಜೀವ ಉಳಿಸುವುದು ಅಗತ್ಯ ಎಂದು ಸಮರ್ಥಿಸಿಕೊಂಡರು.

ಮೆಡಿಕಲ್ ಕಾಲೇಜುಗಳಿಲ್ಲದ ಚಿಕ್ಕಮಗಳೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಯಾದಗಿರಿ ಜಿಲ್ಲೆಗಳ ಕೋವಿಡ್ ರೋಗಿಗಳನ್ನು ಸಮೀಪದ ನಗರಗಳ ಮೆಡಿಕಲ್ ಕಾಲೇಜು ಹಾಗೂ ಪ್ರಮುಖ ಖಾಸಗಿ‌‌ ಆಸ್ಪತ್ರೆಗಳಿಗೆ ಕಳುಹಿಸಲಾಗುವುದು. ಕಳೆದ ವರ್ಷವೂ ಹೀಗೆ ಮಾಡಿದ್ದೆವು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸಚಿವರಿಗೆ ಮಾಹಿತಿ ಕೊರತೆ ಇದೆ ಎಂದರು.

ರೆಮ್ ಡಿಸಿವಿರ್ ಅಗತ್ಯವಿಲ್ಲ: ಎಲ್ಲ ಕೋವಿಡ್ ರೋಗಿಗಳಿಗೂ ರೆಮ್ ಡಿಸಿವಿರ್ ಇಂಜೆಕ್ಷನ್ ಅಗತ್ಯವಿಲ್ಲ. ಸ್ವಯಂ ನಿರ್ಧಾರ ಮಾಡಿ ಯಾರೂ ‌ತೆಗೆದುಕೊಳ್ಳಬಾರದು. ಯಾವ ರೋಗಿಗಳಿಗೆ ‌ನೀಡಬೇಕು ಎಂಬ ಬಗ್ಗೆ ವೈದ್ಯರಿಗೆ ತಾಂತ್ರಿಕ ‌ಸಮಿತಿ ಸಲಹೆ ನೀಡಲಿದೆ ಎಂದು ಸುಧಾಕರ ತಿಳಿಸಿದರು.

ಕರೆಂಟ್ ಹೋದರೆ ಆರೋಗ್ಯ ಸಚಿವ ಏನು ಮಾಡಬೇಕು? ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ಕರೆಂಟ್ ಹೋದರೆ ಆರೋಗ್ಯ ಸಚಿವ ಏನು ಮಾಡಬೇಕು ಎಂದು ಪ್ರಶ್ನಿಸಿದರು.

ಅಲ್ಲಿ ಆಕ್ಸಿಜನ್ ಸಮಸ್ಯೆಯಿಂದ ರೋಗಿ ತೀರಿಕೊಂಡ ಆರೋಪಗಳ‌ ಬಗ್ಗೆ ಪ್ರಶ್ನಿಸಿದಾಗ ‌ಈ ಬಗ್ಗೆ ವರದಿ ತರಿಸಿಕೊಳ್ಳುತ್ತೇನೆ ಎಂದರು.

ರೆಮ್ ಡಿಸಿವಿರ್ ಹಾಗೂ ಆಕ್ಸಿಜನ್ ಸಿಲಿಂಡರ್ ಗಳನ್ನು ಜನರು ಆತಂಕದಿಂದ ಮುಂಚೆಯೇ ‌ಸಂಗ್ರಹಿಸಿಕೊಳ್ಳುತ್ತಿದ್ದಾರೆ.‌ ಇದರಿಂದಾಗಿ ಕೃತಕ‌ ಅಭಾವ ಸೃಷ್ಟಿಯಾಗಿದೆ‌ ಎಂದರು.

ಸಂಸದ ‌ಡಾ.ಉಮೇಶ ಜಾಧವ, ಶಾಸಕರಾದ ರಾಜಕುಮಾರ ಪಾಟೀಲ ತೆಲ್ಕೂರ, ಡಾ.ಅವಿನಾಶ್ ‌ಜಾಧವ, ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಶಶೀಲ್ ಜಿ. ನಮೋಶಿ, ಬಿಜೆಪಿ ‌ಗ್ರಾಮಾಂತರ ಜಿಲ್ಲಾ‌ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು