ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ಅಕ್ರಮ: 11 ಅಭ್ಯರ್ಥಿಗಳು ನ್ಯಾಯಾಂಗ ಬಂಧನಕ್ಕೆ

ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ; ಐವರ ಪತ್ತೆಗೆ ವಿಶೇಷ ತಂಡ
Last Updated 10 ಮೇ 2022, 4:22 IST
ಅಕ್ಷರ ಗಾತ್ರ

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು ಬಂಧಿಸಿದ್ದ 11 ಅಭ್ಯರ್ಥಿಗಳನ್ನು ಸೋಮವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದೇ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಐವರು ಅಭ್ಯರ್ಥಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.

ಅಕ್ರಮ ಎಸಗಿದ್ದ 22 ಅಭ್ಯರ್ಥಿಗಳ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಏಪ್ರಿಲ್ 30ರಂದು ಪ್ರಕರಣ ದಾಖಲಾಗಿತ್ತು. ಆ ಪೈಕಿ 17 ಅಭ್ಯರ್ಥಿಗಳನ್ನು ಬಂಧಿಸಿದ್ದ ಸಿಐಡಿ ಅಧಿಕಾರಿಗಳು, ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದರು. ಅವಧಿ ಮುಗಿದಿದ್ದರಿಂದ 11 ಅಭ್ಯರ್ಥಿಗಳನ್ನು ನ್ಯಾಯಾಲಯಕ್ಕೆ ಸೋಮವಾರ ಹಾಜರುಪಡಿಸಿದ್ದರು.

‘ಬಂಧಿತ ಅಭ್ಯರ್ಥಿಗಳು ಅಕ್ರಮಕ್ಕೆ ಸಂಬಂಧಪಟ್ಟಂತೆ ಮಾಹಿತಿ ನೀಡಿದ್ದಾರೆ. ಅವರಿಂದ ಲಿಖಿತ ಹೇಳಿಕೆಗಳನ್ನು ಪಡೆಯಲಾಗಿದ್ದು, ವಿಡಿಯೊ ಚಿತ್ರೀಕರಣ ಸಹ ಮಾಡಿಟ್ಟುಕೊಳ್ಳಲಾಗಿದೆ. ತನಿಖೆಯ ಕೆಲಸಂಗತಿಯನ್ನೇ ನ್ಯಾಯಾಲಯಕ್ಕೂ ತಿಳಿಸಲಾಗಿದೆ’ ಎಂದೂ ಸಿಐಡಿ ಮೂಲಗಳು ಹೇಳಿವೆ.

ಸುಳಿವು ಪತ್ತೆಗೆ 90 ಮೊಬೈಲ್ ಪರಿಶೀಲನೆ: ಬಂಧಿತ ಅಭ್ಯರ್ಥಿಗಳು, ಏಜೆಂಟರು ಹಾಗೂ ಅವರ ಜೊತೆ ಒಡನಾಟ ಹೊಂದಿದ್ದವರ 90 ಮೊಬೈಲ್‌ಗಳನ್ನು ಸಿಐಡಿ ಅಧಿಕಾರಿಗಳು ಜಪ್ತಿ ಮಾಡಿದ್ದು, ಪರೀಕ್ಷೆಗೆಂದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಆದರೆ, ಅಕ್ರಮದ ಬಗ್ಗೆ ಮೊಬೈಲ್‌ಗಳ ಮೂಲಕ ಸದ್ಯಕ್ಕೆ ಯಾವುದೇ ಸುಳಿವು ಸಿಕ್ಕಿಲ್ಲ.

‘ಅಕ್ರಮ ಬಯಲಾಗುವ ಭೀತಿಯಲ್ಲಿ ಅಭ್ಯರ್ಥಿಗಳು, ಸಾಕ್ಷ್ಯ ನಾಶ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಮೊಬೈಲ್ ಹೊರತುಪಡಿಸಿ ಇತರೆ ಆಯಾಮದಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಅವುಗಳ ಆಧಾರದಲ್ಲಿ ತನಿಖೆ ಮುಂದುವರಿಸಲಾಗಿದೆ’ ಎಂದೂ ತಿಳಿಸಿವೆ.

ರಾಜಕಾರಣಿಗಳೇ ಮಧ್ಯವರ್ತಿಗಳು: ‘ಬಂಧಿತ ಅಭ್ಯರ್ಥಿಗಳು, ಪರಿಚಯಸ್ಥ ರಾಜಕಾರಣಿಗಳನ್ನು ಮಧ್ಯವರ್ತಿಗಳನ್ನಾಗಿ ಮಾಡಿಕೊಂಡು ಹಣ ನೀಡಿದ್ದ ಸಂಗತಿ ಗೊತ್ತಾಗಿದೆ. ಅಭ್ಯರ್ಥಿಗಳ ಜೊತೆ ಒಡನಾಟ ಹೊಂದಿದ್ದ ರಾಜಕಾರಣಿಗಳ ಪಟ್ಟಿ ಸಿದ್ಧಪಡಿಸಲಾಗಿದ್ದು, ಕೆಲವರನ್ನು ಈಗಾಗಲೇ ಬಂಧಿಸಲಾಗಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಕೆಲ ರಾಜಕಾರಣಿಗಳು ಉನ್ನತ ಹುದ್ದೆಯಲ್ಲಿದ್ದಾರೆ. ಅವರಿಗೆ ನೋಟಿಸ್ ನೀಡಲು ಯೋಚಿಸಲಾಗುತ್ತಿದ್ದು, ಅವರ ಭಾಗಿ ಬಗ್ಗೆ ಪುರಾವೆಗಳನ್ನು ಸಂಗ್ರಹಿಸಲಾಗುತ್ತಿದೆ’ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT