ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್ಐ ನೇಮಕಾತಿ ಅಕ್ರಮ: ಅಫಜಲಪುರ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ಬಂಧನ

Last Updated 22 ಏಪ್ರಿಲ್ 2022, 11:26 IST
ಅಕ್ಷರ ಗಾತ್ರ

ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದಲ್ಲಿ ಭಾಗಿಯಾದ ಆರೋಪದಡಿ ಅಫಜಲಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಾಂತೇಶ ಪಾಟೀಲ ಎಂಬುವವರನ್ನು ಶುಕ್ರವಾರ ಬಂಧಿಸಲಾಗಿದೆ. ಇದರೊಂದಿಗೆ ಇಡೀ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

‘ಪ್ರಕಣದಲ್ಲಿ ಗುರುವಾರ ಬಂಧಿಸಲಾದ ಅಫಜಲಪುರ ಶಾಸಕ ಎಂ.ವೈ. ಪಾಟೀಲ ಅವರ ಗನ್‌ಮ್ಯಾನ್‌ ಹಯ್ಯಾಳಿ ದೇಸಾಯಿ ಅವರಿಗೆ ಸಹಾಯ ಮಾಡಿದ ಆರೋಪ ಮಹಾಂತೇಶ ಮೇಲಿದೆ. ಜೊತೆಗೆ, ಮಹಾಂತೇಶ ಅವರ ತಮ್ಮ ಆರ್‌.ಡಿ. ಪಾಟೀಲ ಅವರ ಕೈವಾಡ ಈ ಪ್ರಕರಣದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆದ ಬಗ್ಗೆ ಸಿಐಡಿ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ. ಆರ್‌.ಡಿ. ಪಾಟೀಲ ತಲೆಮರೆಸಿಕೊಂಡಿದ್ದು, ಅವರೊಂದಿಗೆ ಕೈಜೋಡಿಸಿದ ಅಣ್ಣ ಮಹಾಂತೇಶ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ’ ಎಂದು ಮೂಲಗಳು ಖಚಿತಪಡಿಸಿವೆ.

ಇದನ್ನೂ ಓದಿ:ಪಿಎಸ್ಐ ನೇಮಕಾತಿ ಅಕ್ರಮ: ಸಿಐಡಿ ಎದುರು ಅಭ್ಯರ್ಥಿಗಳು ಹಾಜರು ​

ಅಫಜಲಪುರ ಪೊಲೀಸರು ಬಂಧಿಸಲು ಹೋದಾಗ ಆರೋಪಿಗಳು ತೀವ್ರ ವಿರೋಧ ವ್ಯಕ್ತಪಡಿಸಿದರು. ಕೊನೆಗೆ ಸಿಐಡಿ ಅಧಿಕಾರಿಗಳೇ ಸ್ಥಳಕ್ಕೆ ಹೋಗಿ, ಮಹಾಂತೇಶ ಅವರ ಕಾರಿನಲ್ಲೇ ಅವರನ್ನು ವಶಕ್ಕೆ ಪಡೆದು, ಕಲಬುರಗಿಗೆ ಕರೆತಂದರು.

ಅಫಜಪುರ ತಾಲ್ಲೂಕಿನ ಸೊನ್ನ ಗ್ರಾಮದ ನಿವಾಸಿಯಾದ ಮಹಾಂತೇಶ, ಹಲವು ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ನಾಲ್ಕು ವರ್ಷಗಳಿಂದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದಾರೆ. ಎರಡು ಬಾರಿ ಜಿಲ್ಲಾ ಪಂಚಾಯಿತಿಯ ಬಡದಾಳ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಆರ್‌.ಡಿ. ಪಾಟೀಲ ಕೂಡ ಗೌರ–ಬಿ ಗ್ರಾಮ ಪಂಚಾಯಿತಿಗೆ ಈ ಹಿಂದಿನ ಒಂದು ಅವಧಿಯ ಅಧ್ಯಕ್ಷರಾಗಿದ್ದರು ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ.

ಮಹಾಂತೇಶ ಬಂಧನದೊಂದಿಗೆ ಪ್ರಕರಣ ಹೊಸ ರೂಪ ಪಡೆದಿದ್ದು, ಕಾಂಗ್ರೆಸ್‌ ನಾಯಕರು ಮುಜುಗರ ಅನುಭವಿಸುವಂತಾಗಿದೆ. ‘ಹಗರಣದ ಮುಖ್ಯ ಆರೋಪಿ ದಿವ್ಯಾ ಹಾಗರಗಿ ಅವರು ಬಿಜೆಪಿ ನಾಯಕಿ, ಬಿಜೆಪಿಯ ಹಲವು ನಾಯಕರೇ ಇದರಲ್ಲಿ ಭಾಗಿಯಾಗಿದ್ದಾರೆ. ಪ್ರಕರಣ ನ್ಯಾಯಾಂಗ ತನಿಖೆಗೆ ವಹಿಸಬೇಕು’ ಎಂದು ಕೆಪಿಸಿಸಿ ಉಪಾಧ್ಯಕ್ಷ ಡಾ.ಶರಣಪ್ರಕಾಶ ಪಾಟೀಲ ಸೇರಿದಂತೆ ಹಲವು ಕಾಂಗ್ರೆಸ್‌ ಮುಖಂಡರು ಪದೇಪದೇ ಹೋರಾಟ ಮಾಡಿದ್ದರು.

ಸಾಮೂಹಿಕ ವಿವಾಹಕ್ಕೆ ಅಡಚಣೆ
ಬಂಧಿಸಲಾದ ಮಹಾಂತೇಶ ಪಾಟೀಲ ಹಾಗೂ ಆರ್.ಡಿ. ಪಾಟೀಲ ಅಫಜಲಪುರದಲ್ಲಿ ಶನಿವಾರ (ಏ.23) 101 ಉಚಿತ ಸಾಮೂಹಿಕ ವಿವಾಹ ಏರ್ಪಡಿಸಿದ್ದಾರೆ.

ಪ್ರಕರಣದಲ್ಲಿ ಅಣ್ಣ ಬಂಧಿತನಾಗಿದ್ದು, ತಮ್ಮ ಪರಾರಿಯಾಗಿದ್ದಾರೆ. ಇದರಿಂದ ಶನಿವಾರ ನಡೆಯಬೇಕಿದ್ದ ಸಾಮೂಹಿಕ ವಿವಾಹಕ್ಕೆ ಅಡಚಣೆ ಉಂಟಾಗಿದೆ.

‘ಸಿಐಡಿ ಅಧಿಕಾರಿಗಳು ಮೊದಲು ಆರ್.ಡಿ.ಪಾಟೀಲ ಅವರನ್ನು ಬಂಧಿಸಲು ತೆರಳಿದಾಗ ಅವರು ಮನೆಯಲ್ಲಿ ಇರಲಿಲ್ಲ. ವಿವಾಹಕ್ಕೆ ಸಿದ್ಧತೆ ನಡೆಸಿದ ಸ್ಥಳಕ್ಕೆ ತೆರಳಿದ ಅಧಿಕಾರಿಗಳು, ಅಲ್ಲಿದ್ದ ಮಹಾಂತೇಶ ಅವರನ್ನು ವಶಕ್ಕೆ ಪಡೆದರು. ಆಗ ಫೋನ್ ಮೂಲಕ ಅಧಿಕಾರಿಗಳೊಂದಿಗೆ ಮಾತನಾಡಿದ ಆರ್.ಡಿ.ಪಾಟೀಲ, ‘ಸಾಮೂಹಿಕ ವಿವಾಹ ಮುಗಿಯುವವರೆಗೆ ಸಮಯ ಕೊಡಿ. ಸಮಾರಂಭ ಮುಗಿಸಿದ ಬಳಿಕ ವಿಚಾರಣೆಗೆ ಖುದ್ದಾಗಿ ಹಾಜರಾಗುತ್ತೇನೆ’ಎಂದರು.

ಇದಕ್ಕೆ ಅಧಿಕಾರಿಗಳು ಒಪ್ಪಲಿಲ್ಲ. ಇದರಿಂದ ರೊಚ್ಚಿಗೆದ್ದ ಆರ್.ಡಿ. ಪಾಟೀಲ ಫೋನ್ ಮೂಲಕವೇ ಅಧಿಕಾರಿಗಳೊಂದಿಗೆ ಏರುದನಿಯಲ್ಲಿ ಮಾತನಾಡಿದ. ಕೊನೆಗೆ ಸ್ಥಳದಲ್ಲಿದ್ದ ಮಹಾಂತೇಶ ಅವರನ್ನು ಬಂಧಿಸಿದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT