ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಹಳ್ಳಿ ಹಳ್ಳಿಗೂ ‘ಮಹಾನಾಯಕ’

Last Updated 12 ಜನವರಿ 2021, 6:11 IST
ಅಕ್ಷರ ಗಾತ್ರ

ಹೊಸಪೇಟೆ: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಮಹಾನಾಯಕ’ ಡಾ.ಬಿ.ಆರ್‌. ಅಂಬೇಡ್ಕರ್‌ ಧಾರಾವಾಹಿ ಈಗ ಕೇವಲ ಧಾರಾವಾಹಿಯಾಗಿ ಉಳಿದಿಲ್ಲ. ಬದಲಾಗಿ ಅದು ಜನರಲ್ಲಿ ಅರಿವು ಮೂಡಿಸುವ ಬಗೆಯಾಗಿ ಬದಲಾಗುತ್ತಿದೆ.

ಬಹಳ ಕಡಿಮೆ ಅವಧಿಯಲ್ಲಿ ರಾಜ್ಯದ ಹಳ್ಳಿ ಹಳ್ಳಿಗೂ ‘ಮಹಾನಾಯಕ’ನ ಪ್ರವೇಶವಾಗಿದೆ. ಜನ ಕೂಡ ಅಷ್ಟೇ ಪ್ರೀತಿಯಿಂದ ‘ಮಹಾನಾಯಕ’ನನ್ನು ಅವರ ಊರಿಗೆ ಬರಮಾಡಿಕೊಳ್ಳುತ್ತಿದ್ದಾರೆ. ದಿನೇ ದಿನೇ ‘ಮಹಾನಾಯಕ’ನ ಪ್ರಭಾವ ಎಲ್ಲೆಡೆ ದಟ್ಟೈಸಿಕೊಳ್ಳುತ್ತಿರುವುದಕ್ಕೆ ಇದು ಸಾಕ್ಷಿ.

ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಕೊಟ್ಟಿರುವ ಮೌಲ್ಯಗಳು, ಅವರು ರಚಿಸಿರುವ ಸಂವಿಧಾನ ಚಿರಕಾಲ ಉಳಿಯಬೇಕೆಂಬ ಮಾತುಗಳು ಎಲ್ಲೆಡೆ ಬಲವಾಗಿ ಕೇಳಿ ಬರುತ್ತಿದೆ. ಅದಕ್ಕೆ ಪೂರಕವಾಗಿ ಸಂವಿಧಾನದ ಪೀಠಿಕೆಯ ಓದು, ಅಂಬೇಡ್ಕರ್‌ ನೆನಪು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ದಲಿತ ಸಂಘರ್ಷ ಸಮಿತಿ, ಪ್ರಗತಿಪರ ಸಂಘಟನೆಗಳು ನಡೆಸುತ್ತಿರುವ ಹೊತ್ತಲ್ಲೇ ‘ಮಹಾನಾಯಕ’ನ ಆಗಮನ ಆಗಿರುವುದು ಅವರಿಗೆ ವರದಾನವಾಗಿ ಪರಿಣಮಿಸಿದೆ. ಒಂದರ್ಥದಲ್ಲಿ ಇದು ಅವರ ಕೆಲಸ ಮತ್ತಷ್ಟು ಸುಲಭಗೊಳಿಸಿದೆ ಎನ್ನಬಹುದು.

ಬಾಬಾ ಸಾಹೇಬರ ಬಾಲ್ಯದ ದಿನಗಳು, ಅವರು ಅನುಭವಿಸಿದ ನೋವು, ಅಪಮಾನ, ಕಷ್ಟ, ಮೇಲು–ಕೀಳು, ಮೌಢ್ಯ, ಕಂದಾಚಾರದ ವಿರುದ್ಧ ಅವರು ನಡೆಸಿದ ಹೋರಾಟ, ಸಮ ಸಮಾಜದ ಕನಸು, ಸಂವಿಧಾನ ರಚನೆ, ಅವರ ಕೊನೆಯ ದಿನಗಳು ಹೀಗೆ ಇಡೀ ಅವರ ಜೀವನ ವೃತ್ತಾಂತ ‘ಮಹಾನಾಯಕ’ ಒಳಗೊಂಡಿದೆ. ಈಗಷ್ಟೇ ಆ ನಾಯಕ ಮಾತನಾಡಲು ಆರಂಭಿಸಿದ್ದಾನೆ. ಆದರೆ, ಆತನ ಪ್ರಭಾವ ದಶದಿಕ್ಕುಗಳಿಗೂ ವ್ಯಾಪಿಸಿದೆ.

ಓದು, ಭಾಷಣದ ಮೂಲಕ ಕೈಗೊಳ್ಳುವ ಜಾಗೃತಿ ಸೀಮಿತವಾಗಿರುತ್ತದೆ. ಆದರೆ, ಧಾರಾವಾಹಿ ರೂಪದಲ್ಲಿ ಪ್ರಸಾರವಾಗುತ್ತಿರುವ ‘ಮಹಾನಾಯಕ’ನನ್ನು ಎಲ್ಲರಿಗೂ ತಲುಪುವಂತೆ ಮಾಡುವುದು ಸುಲಭ ಎಂದು ಮನಗಂಡಿರುವ ಸಂಘಟನೆಗಳ ಮುಖಂಡರು, ಈಗ ಇದರ ಬಗ್ಗೆ ಪ್ರಚಾರ ಮಾಡಿ, ಜನರಿಗೆ ತಪ್ಪದೇ ಧಾರಾವಾಹಿ ನೋಡುವಂತೆ ತಿಳಿಸುತ್ತಿದ್ದಾರೆ. ಅವರ ಕೆಲಸ ಇಷ್ಟಕ್ಕೆ ಸೀಮಿತವಾಗಿಲ್ಲ. ಗ್ರಾಮದ ಪ್ರಮುಖ ಜಾಗದಲ್ಲಿ ‘ಮಹಾನಾಯಕ’ನ ಬೃಹತ್‌ ಫ್ಲೆಕ್ಸ್‌ ಹಾಕಿಸಿ, ಹೆಚ್ಚಿನ ಜನರಿಗೆ ವಿಷಯ ತಿಳಿಸಲು ಶ್ರಮಿಸುತ್ತಿದ್ದಾರೆ. ಅದೀಗ ಅಭಿಯಾನದ ಸ್ವರೂಪ ಪಡೆದುಕೊಂಡಿದೆ.

‘ಅಂಬೇಡ್ಕರ್‌ ಅವರು ಇಡೀ ಮನುಕುಲದ ಒಳಿತಿಗೆ ಶ್ರಮಿಸಿದ್ದಾರೆ. ಅದರಲ್ಲೂ ಶತ ಶತಮಾನಗಳಿಂದ ತುಳಿತಕ್ಕೆ ಒಳಗಾದ ಸಮುದಾಯದವರನ್ನು ಮೇಲಕ್ಕೆ ತರಲು ಜೀವನದುದ್ದಕ್ಕೂ ಕೆಲಸ ಮಾಡಿದ್ದಾರೆ. ಸಂವಿಧಾನದ ಮೂಲಕ ಪ್ರಜಾಪ್ರಭುತ್ವಕ್ಕೆ ಗಟ್ಟಿ ಅಡಿಪಾಯವೂ ಹಾಕಿದ್ದಾರೆ. ಆದರೆ, ಕೆಲವು ಶಕ್ತಿಗಳು ಅವರ ಸಾಧನೆ ಮರೆ ಮಾಚಲು ಪ್ರಯತ್ನಿಸುತ್ತಿವೆ. ಸಂವಿಧಾನವನ್ನು ದುರ್ಬಲಗೊಳಿಸಲು ಮುಂದಾಗಿವೆ. ದುಷ್ಟಶಕ್ತಿಗಳ ಹುನ್ನಾರ ತಿಳಿಸಿ, ಸಂವಿಧಾನದ ಉಳಿವಿಗೆ ನಾಡಿನೆಲ್ಲೆಡೆ ಸಂವಿಧಾನದ ಓದು ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಸಂಘಟಿಸಿದ್ದೆವು. ಆದರೆ, ಅದು ಸೀಮಿತ ಜನರಿಗೆ ತಲುಪಿತ್ತು. ಆದರೆ, ‘ಮಹಾನಾಯಕ’ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಹೀಗಾಗಿಯೇ ಜನರಿಗೆ ಇದನ್ನು ನೋಡುವಂತೆ ತಿಳಿಸುವ ಕೆಲಸ ಮಾಡುತ್ತಿದ್ದೇವೆ. ಈ ಮೂಲಕ ಅಂಬೇಡ್ಕರ್‌ ಅವರ ಚಿಂತನೆಗಳು ಸದಾ ಜೀವಂತವಾಗಿರಬೇಕು ಎನ್ನುವುದು ನಮ್ಮ ಆಶಯ’ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡ ಸೋಮಶೇಖರ್‌ ಬಣ್ಣದಮನೆ ತಿಳಿಸಿದರು.

‘ಬಹುತೇಕ ಹಳ್ಳಿಗಳಲ್ಲಿ ಈಗ ಮಹಾನಾಯಕನ ಫ್ಲೆಕ್ಸ್‌ ಕಾಣಿಸುತ್ತಿವೆ. ಶನಿವಾರ, ಭಾನುವಾರ ಬಂತೆಂದರೆ ಬಹುತೇಕ ಹಳ್ಳಿಗಳಲ್ಲಿ ಜನ ಸಂಜೆ 6.30ರಿಂದ 7.30ರ ವರೆಗೆ ಜೀ ಕನ್ನಡ ವಾಹಿನಿ ನೋಡುತ್ತಿದ್ದಾರೆ. ಈ ಹಿಂದೆ ರಾಮಾಯಣ, ಮಹಾಭಾರತ ಧಾರಾವಾಹಿ ನೋಡಲು ಜನ ಎಲ್ಲ ಕೆಲಸ ಬಿಟ್ಟು ಟಿ.ವಿ. ಮುಂದೆ ಕುಳಿತುಕೊಳ್ಳುತ್ತಿದ್ದರು. ಈಗ ಅಂಥ ವಾತಾವರಣ ‘ಮಹಾನಾಯಕ’ ಧಾರಾವಾಹಿ ಸೃಷ್ಟಿಸಿದೆ. ಈ ಧಾರಾವಾಹಿ ನೋಡಿದ ಕೆಲವರಲ್ಲಾದರೂ ತಿಳಿವಳಿಕೆ, ಬದಲಾವಣೆ ಬಂದರೆ ಸಾಕು. ಆ ಕೆಲಸ ಖಂಡಿತವಾಗುತ್ತದೆ ಎಂಬ ನಂಬಿಕೆ ಇದೆ’ ಎಂದು ಭರವಸೆ ವ್ಯಕ್ತಪಡಿಸಿದರು.

‘ತನುವಾಗಲಿ ಬುದ್ಧ, ಮನವಾಗಲಿ ಬಸವಣ್ಣ, ಜ್ಞಾನವಾಗಲಿ ಅಂಬೇಡ್ಕರ್‌’ ಎಂಬ ಬರಹವುಳ್ಳ ಫ್ಲೆಕ್ಸ್ ಮೇಲೆ ಬುದ್ಧ, ಬಸವ ಹಾಗೂ ಅಂಬೇಡ್ಕರ್‌ ಅವರ ಚಿತ್ರ ಪ್ರಕಟಿಸಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT