ಗುರುವಾರ , ಡಿಸೆಂಬರ್ 3, 2020
23 °C
ರಾಗಿಣಿ, ಸಂಜನಾ ಜಾಮೀನು ಅರ್ಜಿ ಆದೇಶದಲ್ಲಿ ಹೈಕೋರ್ಟ್‌

ರಿಯಾ ಚಕ್ರವರ್ತಿ ಪ್ರಕರಣಕ್ಕೆ ಹೋಲಿಸಲಾಗದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಡ್ರಗ್ಸ್‌ ಪೂರೈಕೆ ಜಾಲದಲ್ಲಿ ಸಕ್ರಿಯರಾಗಿದ್ದ ಆರೋಪದ ಮೇಲೆ ಬಂಧಿತರಾಗಿರುವ ಚಿತ್ರನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಪ್ರಕರಣವನ್ನು ಬಾಲಿವುಡ್‌ ನಟಿ ರಿಯಾ ಚಕ್ರವರ್ತಿ ಪ್ರಕರಣಕ್ಕೆ ಹೋಲಿಕೆ ಮಾಡಿ ಜಾಮೀನು ಮಂಜೂರು ಮಾಡಲಾಗದು’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಪ್ರಕರಣ ಹಾಗೂ ರಿಯಾ ಚಕ್ರವರ್ತಿ ಪ್ರಕರಣಗಳಲ್ಲಿ ಭಿನ್ನತೆ ಇದೆ ಎಂದು ನ್ಯಾಯಮೂರ್ತಿ ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಅವರು ಮಂಗಳವಾರ ಇಬ್ಬರು ನಟಿಯರ ಜಾಮೀನು ಅರ್ಜಿ ತಿರಸ್ಕರಿಸಿರುವ ಆದೇಶದಲ್ಲಿ ಹೇಳಿದ್ದಾರೆ.

ಸಣ್ಣ ಪ್ರಮಾಣದ ಮತ್ತು ಸ್ವಂತ ಬಳಕೆಯ ಉದ್ದೇಶಕ್ಕೆ ಇರಿಸಿಕೊಂಡ ಮಾದಕವಸ್ತುಗಳನ್ನು ವಶಪಡಿಸಿಕೊಂಡ ಎಲ್ಲ ಸಂದರ್ಭಗಳಲ್ಲಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗುತ್ತದೆ. ಅದೇ ಕಾರಣದಿಂದ ಮುಂಬೈ ಹೈಕೋರ್ಟ್‌ ನಟಿ ರಿಯಾ ಚಕ್ರವರ್ತಿಗೆ ಜಾಮೀನು ಮಂಜೂರು ಮಾಡಿದೆ. ಅದರ ಆಧಾರದಲ್ಲೇ ರಾಗಿಣಿ ಮತ್ತು ಸಂಜನಾಗೂ ಜಾಮೀನು ಮಂಜೂರು ಮಾಡಬೇಕು ಎಂದು ಅವರ ಪರ ವಕೀಲರು ವಾದಿಸಿದ್ದರು.

‘ರಿಯಾ ಪ್ರಕರಣದಲ್ಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಲಾಗಿದೆ ಎಂಬುದನ್ನು ಅಲ್ಲಗಳೆಯಲಾಗದು. ಆದರೆ, ವಾಸ್ತವಿಕ ಸಂಗತಿಗಳ ಆಧಾರದಲ್ಲಿ ನ್ಯಾಯಾಲಯ ತೀರ್ಮಾನ ಕೈಗೊಂಡಿದೆ. ಮಾದಕವಸ್ತು ನಿಯಂತ್ರಣ ಕಾಯ್ದೆಯ ಸೆಕ್ಷನ್ 27(ಎ) ಅಡಿಯಲ್ಲಿ ಕ್ರಮ ಜರುಗಿಸುವಾಗ ವಶಕ್ಕೆ ಪಡೆದ ಮಾದಕವಸ್ತುವಿನ ಪ್ರಮಾಣವನ್ನು ಮಾತ್ರ ಆಧರಿಸಿ ತೀರ್ಮಾನಕ್ಕೆ ಬರುವುದಿಲ್ಲ’ ಎಂದು ನ್ಯಾಯಾಲಯ ಹೇಳಿದೆ.

‘ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಸಲ್ಲಿಸಿರುವ ‘ಕೇಸ್‌ ಡೈರಿ’ಯನ್ನು ಪರಿಶೀಲಿಸಲಾಗಿದೆ. ತನಿಖಾಧಿಕಾರಿಯು ಸಂಗ್ರಹಿಸಿರುವ ಸಾಕ್ಷ್ಯಗಳನ್ನು ಗಮನಿಸಿದರೆ ಆರೋಪಿಗಳ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಹೇಳು ಸಾಧ್ಯವೇ ಇಲ್ಲ. ಕೆಲವು ಆರೋಪಿಗಳು ನಿರಂತರವಾಗಿ ಡ್ರಗ್ಸ್ ಪೆಡ್ಲರ್‌ಗಳ ಜತೆ ಸಂಪರ್ಕದಲ್ಲಿದ್ದರು ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ. ಮೂತ್ರ ಪರೀಕ್ಷೆಗೆ ಮಾದರಿ ಸಂಗ್ರಹಿಸುವ ಸಂದರ್ಭದಲ್ಲಿ ರಾಗಿಣಿ ಮೂತ್ರದ ಬದಲಿಗೆ ನೀರು ತುಂಬಿಸಿ ಕೊಟ್ಟಿದ್ದರು ಎಂದು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ತಿಳಿಸಿದ್ದಾರೆ. ಅದು ನಿಜವೇ ಆಗಿದ್ದಲ್ಲಿ, ಅವರು ತನಿಖೆಯನ್ನು ದಿಕ್ಕು ತಪ್ಪಿಸಲು ಯತ್ನಿಸುತ್ತಿರುವುದಕ್ಕೆ ಸಾಕ್ಷ್ಯ ಒದಗಿಸುತ್ತದೆ’ ಎಂದು ನ್ಯಾ. ಶ್ರೀನಿವಾಸ್‌ ಹರೀಶ್‌ ಕುಮಾರ್‌ ಹೇಳಿದ್ದಾರೆ.

‘ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುವಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿ ನಿರೀಕ್ಷಣಾ ಜಾಮೀನು ಕೋರಿದರೆ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸಮಾಜದ ಹಿತ ಎರಡನ್ನೂ ಕಣ್ಣ ಮುಂದೆ ಇರಿಸಿಕೊಂಡು ತೀರ್ಮಾನಕ್ಕೆ ಬರಬೇಕಾಗುತ್ತದೆ’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಮಾದಕವಸ್ತುಗಳ ಬಳಕೆಯ ವ್ಯಸನವು ಯುವಜನರನ್ನು ನಾಶ ಮಾಡುತ್ತಿದೆ. ಅದು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹಾಳು ಮಾಡುವುದಲ್ಲದೇ ಇಡೀ ಸಮಾಜದ ಮೇಲೆ ತನ್ನ ಕರಾಳ ಛಾಯೆಯನ್ನು ಬೀರುತ್ತಿದೆ. ಜಾಮೀನು ಅರ್ಜಿಯ ಇತ್ಯರ್ಥದ ಸಂದರ್ಭದಲ್ಲಿ ನ್ಯಾಯಾಲಯವು ಇಂತಹ ಪಿಡುಗಿನ ದುಷ್ಪರಿಣಾಮಗಳನ್ನು ಉಪೇಕ್ಷಿಸಲಾಗದು ಎಂದು ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವ ಆದೇಶದಲ್ಲಿ ನ್ಯಾಯಾಲಯ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು