ಬೆಂಗಳೂರು: ನಮ್ಮ ನಾಯಕ ರಾಹುಲ್ ಗಾಂಧಿ ಅವರು ಹೇಳುವ ಸತ್ಯವನ್ನು ಎದುರಿಸಲಾಗದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ರಾಹುಲ್ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ತನ್ನ ಹೇಡಿತನವನ್ನು ಜಾಹೀರುಗೊಳಿಸಿದೆ. ಭಾರತದ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಇದೊಂದು ಕರಾಳ ದಿನ ಎಂದು ರಾಜ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಭಾರತೀಯ ಜನತಾ ಪಕ್ಷದ ಪಾಪದ ಕೊಡ ತುಂಬಿದೆ. ತನ್ನ ನಾಶದ ಶವದ ಪೆಟ್ಟಿಗೆಗೆ ತಾನೇ ಕೊನೆಯ ಮೊಳೆ ಬಡಿದಿದೆ. ಈ ಫ್ಯಾಸಿಸ್ಟ್ ನಡವಳಿಕೆಗೆ ಹೆದರುವ, ಹಿಂಜರಿಯುವ ಪ್ರಶ್ನೆಯೇ ಇಲ್ಲ. ಈ ಅನ್ಯಾಯದ ವಿರುದ್ಧ ನ್ಯಾಯಾಲಯ ಮತ್ತು ಬೀದಿಗಳಲ್ಲಿ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಇಂದು ಅನಧಿಕೃತವಾಗಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮತ್ತು ಎನ್‌ಡಿಎ ಸರ್ಕಾರದ ವಿರುದ್ಧ ಮಾತನಾಡುವವರಿಗೆಲ್ಲರಿಗೂ ಎಚ್ಚರಿಕೆಯ ರೂಪದಲ್ಲಿ ರಾಹುಲ್ ಗಾಂಧಿ ಅವರ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಿದ್ದಾರೆ.
ಇದು ಕೇವಲ ಕಾಂಗ್ರೆಸ್ ಪಕ್ಷ ಇಲ್ಲವೇ ರಾಹುಲ್ ಗಾಂಧಿ ಅವರಿಗೆ ಅವರಿಗೆ ನೀಡಿರುವ ಬೆದರಿಕೆ ಅಲ್ಲ, ಅನ್ಯಾಯ-ಅಕ್ರಮದ ವಿರುದ್ಧ ದನಿ ಎತ್ತುವ ಎಲ್ಲ ಪ್ರಜಾಪ್ರಭುತ್ವ ಪ್ರೇಮಿಗಳಿಗೆ ಒಡ್ಡಿರುವ ಬೆದರಿಕೆ. ಪಕ್ಷ, ಪಂಥ ಬೇಧ ಮರೆತು ಎಲ್ಲರೂ ಒಟ್ಟಾಗಿ ಇದರ ವಿರುದ್ಧ ಪ್ರತಿಭಟನೆ ನಡೆಸಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.
ನಮ್ಮ ನಾಯಕರಾದ ರಾಹುಲ್ ಗಾಂಧಿ ವಿರುದ್ಧ ಕೈಗೊಳ್ಳಲಾದ ಕ್ರಮದಿಂದ ಕಾಂಗ್ರೆಸ್ ಪಕ್ಷದ ಲಕ್ಷಾಂತರ ಕಾರ್ಯಕರ್ತರ ಮನಸ್ಸಿಗೆ ನೋವಾಗಿರುವುದು ನಿಜವಾದರೂ ಈ ಸಂದರ್ಭದಲ್ಲಿ ಸಂಯಮದಿಂದ ವರ್ತಿಸುವುದು ಅಗತ್ಯ. ಯಾರೂ ಕೂಡಾ ಸಿಟ್ಟು-ಆಕ್ರೋಶದ ಕೈಗೆ ಬುದ್ದಿ ಕೊಡದೆ ಶಾಂತಿಯುತ ಪ್ರತಿಭಟನೆ ನಡೆಸಬೇಕೆಂದು ಕೋರುತ್ತೇನೆ ಎಂದು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.