ಸೋಮವಾರ, ಮಾರ್ಚ್ 27, 2023
22 °C

ಬೆಳಗಾವಿ | ನಾಳೆ ರಾಹುಲ್‌ ಆಗಮನ: ಯುವ ಕ್ರಾಂತಿ ರ್‍ಯಾಲಿಯಲ್ಲಿ ಭಾಷಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ನಗರಕ್ಕೆ ಮಾರ್ಚ್‌ 20ರಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆಗಮಿಸಲಿದ್ದು, ಇಲ್ಲಿನ ಸಿಪಿಇಡಿ ಮೈದಾನದಲ್ಲಿ ಬೆಳಿಗ್ಗೆ 11.30ಕ್ಕೆ ನಡೆಯಲಿರುವ ‘ಯುವ ಕ್ರಾಂತಿ ರ್‍ಯಾಲಿಯಲ್ಲಿ ಭಾಗವಹಿಸಲಿದ್ದಾರೆ.

ರಾಜ್ಯದ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಯುವಕರು ಬರಲಿದ್ದು, ಕಾರ್ಯಕ್ರಮಕ್ಕೆ ಭವ್ಯ ವೇದಿಕೆ ಸಿದ್ಧಪಡಿಸಲಾಗಿದೆ. 80 ಸಾವಿರಕ್ಕೂ ಅಧಿಕ ಜನರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತಿತರ ಹಿರಿಯ ನಾಯಕರು ಭಾಗವಹಿಸಲಿದ್ದಾರೆ.

ರಾಹುಲ್‌ ಗಾಂಧಿ ಅವರಿಗೆ ಸ್ವಾಗತ ಕೋರಿ ನಗರದ ಮುಖ್ಯರಸ್ತೆಗಳಲ್ಲಿ ಪಕ್ಷದ ಸ್ಥಳೀಯ ನಾಯಕರು ಹಲವು ಕಟೌಟ್‌ಗಳನ್ನು‌ ಹಾಕಿದ್ದಾರೆ. ರಸ್ತೆಬದಿ ಕಾಂಗ್ರೆಸ್‌ ಧ್ವಜಗಳನ್ನು ಕಟ್ಟಿದ್ದಾರೆ. ರಾಹುಲ್‌ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.


ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಸ್ವಾಗತ ಕೋರಿ ಬೆಳಗಾವಿಯಲ್ಲಿ ಅಳವಡಿಸಿದ ಕಟೌಟ್‌ಗಳು/‌ಪ್ರಜಾವಾಣಿ ಚಿತ್ರ:ಏಕನಾಥ ಅಗಸಿಮನಿ

ಗ್ರಹಣಕ್ಕೆ ಮುಕ್ತಿ ಸಿಗಲಿದೆ:

ಸಿಪಿಇಡಿ ಮೈದಾನಕ್ಕೆ ಭಾನುವಾರ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ‘ಭರವಸೆಗಳನ್ನು ನೀಡಿ, ಯುವಕರಿಗೆ ಉದ್ಯೋಗ ನೀಡದ ಬಿಜೆಪಿ ಸರ್ಕಾರವನ್ನು ಬೇರು ಸಮೇತವಾಗಿ ಕಿತ್ತುಹಾಕಲು ಯುವಜನತೆ ಮುಂದಾಗಬೇಕು’ ಎಂದು ಕರೆ ನೀಡಿದರು.

‘ರಾಜ್ಯ ಸರ್ಕಾರ ಹಲವು ವರ್ಷಗಳಿಂದ ಉದ್ಯೋಗ ಸೃಷ್ಟಿಸಿಲ್ಲ. ಇದರಿಂದಾಗಿ ಯುವಕ–ಯುವತಿಯರ ಭವಿಷ್ಯಕ್ಕೆ ಹಿಡಿದಿರುವ ಗ್ರಹಣಕ್ಕೆ ಯುವ ಕ್ರಾಂತಿ ರ್‍ಯಾಲಿಯಿಂದ ಮುಕ್ತಿ ಸಿಗಲಿದೆ’ ಎಂದು ತಿಳಿಸಿದರು.

‘ಈ ರ್‍ಯಾಲಿಯಲ್ಲಿ ಹಿರಿಯ ನಾಯಕರು ರಾಜ್ಯದ ಯುವಕರ ಬದುಕು ಉಜ್ವಲಗೊಳಿಸುವಂತಹ ಗ್ಯಾರಂಟಿ ಕಾರ್ಡ್ ಅನಾವರಣಗೊಳಿಸಲಿದ್ದಾರೆ’ ಎಂದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಕೇವಲ ಸುಳ್ಳು ಹೇಳುತ್ತಿದ್ದಾರೆ. ರಾಜ್ಯಕ್ಕೆ ಬರಬೇಕಿದ್ದ ಹಲವು ಉದ್ಯಮ ಬೇರೆ ರಾಜ್ಯಗಳ ಪಾಲಾಗುತ್ತಿವೆ’ ಎಂದು ಆಪಾದಿಸಿದರು.

ಗೊಂದಲದ ಪ್ರಶ್ನೆಯಲ್ಲ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕ್ಷೇತ್ರ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಸುರ್ಜೇವಾಲಾ, ‘ವಿವಿಧ ಕ್ಷೇತ್ರಗಳಿಂದ ಕಣಕ್ಕಿಳಿಯುವಂತೆ ಇಬ್ಬರಿಗೂ ಕಾರ್ಯಕರ್ತರಿಂದ ಆಹ್ವಾನ ಬಂದಿದೆ. ಇದು ಅವರ ಜನಪ್ರಿಯತೆಗೆ ಸಾಕ್ಷಿಯೇ ಹೊರತು, ಗೊಂದಲದ ಪ್ರಶ್ನೆಯಲ್ಲ. ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ಸ್ವತಃ ಅವರೇ ನಿರ್ಧರಿಸುತ್ತಾರೆ’ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಇತರರಿದ್ದರು. 
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು