ಭಾನುವಾರ, ಜುಲೈ 3, 2022
25 °C
ರಾಜ್ಯಕ್ಕಿಲ್ಲ ಅಪಾಯ: ಹವಾಮಾನ ಇಲಾಖೆ

‘ಆಸನಿ’ ಚಂಡಮಾರುತ: ರಾಜ್ಯದಲ್ಲಿ ಇದೇ 24ರವರೆಗೆ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಂಡಮಾನ್‌ ಮತ್ತು ನಿಕೋಬಾರ್ ಭಾಗದಲ್ಲಿ ಅಪ್ಪಳಿಸಲಿರುವ ‘ಆಸನಿ’ ಚಂಡಮಾರುತದಿಂದ ರಾಜ್ಯಕ್ಕೆ ಹೆಚ್ಚಿನ ಅಪಾಯ ಇರುವುದಿಲ್ಲ. ಆದರೆ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಇದೇ 24ರವರೆಗೆ ಮಳೆಯಾಗುವ ಮುನ್ಸೂಚನೆ ಇರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. 

‘ಬಂಗಾಳ ಕೊಲ್ಲಿಯಲ್ಲಿ ಸಂಭವಿಸಿರುವ ಪ್ರಬಲ ವಾಯುಭಾರ ಕುಸಿತವು ಸೋಮವಾರ (ಮಾ.21) ಸಂಜೆ ವೇಳೆ ಮತ್ತಷ್ಟು ತೀವ್ರಗೊಂಡು ಚಂಡಮಾರುತವಾಗಿ ಪರಿವರ್ತನೆಗೊಳ್ಳಲಿದೆ. ಚಂಡಮಾರುತ ರಾಜ್ಯಕ್ಕೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಕೆಲವೆಡೆ ಗುಡುಗು, ಸಿಡಿಲು ಸಹಿತ ಮಳೆಯಾಗಬಹುದು’ ಎಂದು ಹವಾಮಾನ ಇಲಾಖೆಯ ತಜ್ಞ ಸದಾನಂದ ಅಡಿಗ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಆಗ್ನೇಯ ಬಂಗಾಳಕೊಲ್ಲಿ ಹಾಗೂ ದಕ್ಷಿಣ ಅಂಡಮಾನ್‌ ಪ್ರದೇಶದಲ್ಲಿ ವಾಯುಭಾರ ಕುಸಿತ ಪ್ರಬಲಗೊಂಡಿದೆ. ಮುಂದಿನ 24 ಗಂಟೆಗಳಲ್ಲಿ ಇದರ ತೀವ್ರತೆ ಹೆಚ್ಚಾಗಲಿದೆ. ಬಳಿಕ ಚಂಡಮಾರುತವಾಗಿ ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್ ಕರಾವಳಿಯತ್ತ ಸಾಗುವ ಸಾಧ್ಯತೆ ಇದೆ’ ಎಂದು ಹೇಳಿದರು.

‘ಮತ್ತೊಂದೆಡೆ ಮಧ್ಯಪ್ರದೇಶದಿಂದ ರಾಜ್ಯದ ಉತ್ತರ ಒಳನಾಡಿನವರೆಗೆ ಮೇಲ್ಮೈ ಸುಳಿಗಾಳಿ ವ್ಯಾಪಿಸಿದೆ. ಇವುಗಳ ಪರಿಣಾಮ ರಾಜ್ಯದಲ್ಲಿ ಎರಡು ದಿನಗಳಿಂದ ಮಳೆಯಾಗುತ್ತಿದೆ. ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳ ಹಲವೆಡೆ ಮುಂದಿನ ಐದು ದಿನಗಳವರೆಗೆ ಮಳೆಯಾಗುವ ಮುನ್ಸೂಚನೆ ಇದೆ’ ಎಂದರು.

ಮಳೆ ಎಲ್ಲಿ, ಎಷ್ಟು?: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಹಾಗೂ ಮೈಸೂರು ಭಾಗದಲ್ಲಿ ಭಾನುವಾರ 4 ಸೆಂ.ಮೀ ಮಳೆ ಸುರಿದಿದೆ. ಚಿಕ್ಕೋಡಿ, ಎಚ್.ಡಿ.ಕೋಟೆ 3, ಪುತ್ತೂರು, ಧರ್ಮಸ್ಥಳ, ನಿಪ್ಪಾಣಿ, ಧಾರವಾಡ, ರಾಯಚೂರು ಹಾಗೂ ಬೆಳಗಾವಿಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ರಾಯಚೂರಿನಲ್ಲಿ 40 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ಹಾಗೂ ದಾವಣಗೆರೆಯಲ್ಲಿ 16 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದೆ. 

**


ವಿಜಯಪುರ ಜಿಲ್ಲೆ ತಿಕೋಟಾ ತಾಲ್ಲೂಕಿನ ತಾಜಪುರ ಗ್ರಾಮದ ತೋಟದಲ್ಲಿ ಹಣ್ಣಾದ ದ್ರಾಕ್ಷಿ ಪಡದ ಸಾಲುಗಳು ಶನಿವಾರ ರಾತ್ರಿ ಧರೆಗುರುಳಿವೆ

ತಿಕೋಟಾ: ಭಾರಿ ಬಿರುಗಾಳಿಗೆ ಧರೆಗುರಿಳಿದ ದ್ರಾಕ್ಷಿ ಪಡ 
ತಿಕೋಟಾ (ವಿಜಯಪುರ ಜಿಲ್ಲೆ):
ತಾಲ್ಲೂಕಿನ ತಾಜಪುರ ಗ್ರಾಮದ ಸುತ್ತಮುತ್ತಲಿರುವ ಆರೇಳು ರೈತರ ದ್ರಾಕ್ಷಿ ತೋಟದಲ್ಲಿ ಕಟಾವಿಗೆ ಬಂದ ಹಣ್ಣಾದ ದ್ರಾಕ್ಷಿ ಪಡದ ಸಾಲುಗಳು ಭಾರಿ ಬಿರುಗಾಳಿ ಸಹಿತ ಅಕಾಲಿಕ ಮಳೆಗೆ ಶನಿವಾರ ರಾತ್ರಿ ನೆಲಕ್ಕುರುಳಿ ಬಿದ್ದಿವೆ. 

‘ಪ್ರಜಾವಾಣಿ’ ಯೊಂದಿಗೆ ಮಾತನಾಡಿದ ರೈತ ಮಡ್ಡೆಪ್ಪಾ ಕುಮಟಗಿ, ‘ಏಕಾಏಕಿ ಜೋರಾಗಿ ಗಾಳಿ ಬೀಸಿದ್ದರಿಂದ ದ್ರಾಕ್ಷಿ ಪಡದ ಸಾಲುಗಳು ನೆಲಕ್ಕೆ ಬಿದ್ದಿವೆ. ಗಾಳಿಯೊಂದಿಗೆ ಮಳೆ ಕೂಡ ಬಂದಿದ್ದರಿಂದ ಹಣ್ಣಾದ ದ್ರಾಕ್ಷಿ ಗೊಂಚಲುಗಳು ನೆಲಕ್ಕೆ ಬಿದ್ದವು. ಸಾಲ ಮಾಡಿ ಕಷ್ಟದಿಂದ ದ್ರಾಕ್ಷಿ ಪಡ ತಯಾರು ಮಾಡಿದ್ದೆವು. ಈಗ ನೆಲಕ್ಕುರುಳಿದ ಸಾಲುಗಳನ್ನು ನಿಲ್ಲಿಸಲು ಮತ್ತಷ್ಟು ಖರ್ಚು ಮಾಡಬೇಕಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಹಶೀಲ್ದಾರ್‌, ತೋಟಗಾರಿಕಾ ಅಧಿಕಾರಿಗಳು ರೈತರ ತೋಟಗಳಿಗೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈಗಾಗಲೇ ದ್ರಾಕ್ಷಿ ಕಟಾವು ಮಾಡಿ ರ‍್ಯಾಕ್‌ (ಒಣದ್ರಾಕ್ಷಿ ಘಟಕ) ನಲ್ಲಿ ಹಾಕಿದ್ದರೂ ಒಣದ್ರಾಕ್ಷಿ ಕಪ್ಪಾಗಿ ದರ ಕುಸಿಯುವ ಆತಂಕ ರೈತರಿಗೆ ಎದುರಾಗಿದೆ.

**

ಸಿಡಿಲು ಬಡಿದು ಮಹಿಳೆ ಸಾವು
ಹೊಳೆನರಸೀಪುರ:
ತಾಲ್ಲೂಕಿನ ಹಳ್ಳಿಮೈಸೂರು ಹೋಬಳಿಯ ಕಲ್ಲಹಳ್ಳಿಯಲ್ಲಿ ಶನಿವಾರ ಸಂಜೆ ಜಮೀನಿನಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ವಿನೋದಾ (35) ಮೃತಪಟ್ಟಿದ್ದಾರೆ.

ಗ್ರಾಮಕ್ಕೆ ಭಾನುವಾರ ಭೇಟಿ ನೀಡಿದ್ದ ಶಾಸಕ ಎ.ಟಿ.ರಾಮಸ್ವಾಮಿ, ₹ 5 ಲಕ್ಷ ಪರಿಹಾರದ ಚೆಕ್‌ ವಿತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು