ಶುಕ್ರವಾರ, ಜುಲೈ 1, 2022
28 °C
ಉಕ್ಕಿ ಹರಿದ ಕನ್ನಡ ಅಭಿಮಾನ

ರಾಜ್‌ ಕುಮಾರ್‌ ಹುಟ್ಟುಹಬ್ಬ: ಕನ್ನಡದಲ್ಲೇ ಗ್ರಾಹಕ ಸೇವೆಗೆ ಹಕ್ಕೊತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರವು ದಿವಂಗತ ರಾಜ್‌ಕುಮಾರ್‌ ಹುಟ್ಟುಹಬ್ಬವನ್ನು ‘ಕನ್ನಡ ಅಭಿಮಾನ ದಿನ’ವನ್ನಾಗಿ ಆಚರಿಸಲು ನೀಡಿದ್ದ ಕರೆಗೆ ಕನ್ನಡಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಈ ದಿನಾಚರಣೆ ಅಂಗವಾಗಿ ಗ್ರಾಹಕ ಸೇವೆಯನ್ನು ಕನ್ನಡದಲ್ಲೇ ಪಡೆಯಲು ಟ್ವಿಟರ್‌ನಲ್ಲಿ ಹಮ್ಮಿಕೊಂಡ ಅಭಿಯಾನಕ್ಕೂ ಭಾರಿ ಬೆಂಬಲ ವ್ಯಕ್ತವಾಯಿತು.

ಗ್ರಾಹಕ ಸೇವೆಯನ್ನು ಕನ್ನಡದಲ್ಲೇ ನೀಡುವುದರ ಮಹತ್ವವನ್ನು ವಿವರಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು #ಕನ್ನಡ_ಅಭಿಮಾನಿ_ದಿನ ಹಾಗೂ #ಕನ್ನಡದಲ್ಲಿ_ಗ್ರಾಹಕ_ಸೇವೆ ಹ್ಯಾಷ್‌ಟ್ಯಾಗ್‌ ಬಳಸಿ ಸರಣಿ ಟ್ವೀಟ್‌ಗಳನ್ನು ಮಾಡಿತು. ಪ್ರಾಧಿಕಾರದ ಈ ಕರೆಗೆ ಓಗೊಟ್ಟ ಕನ್ನಡ ಹೋರಾಟಗಾರರು ರಾಜ್ಯಾದ್ಯಂತ ಮಾಲ್‌ಗಳು, ಕಂಪನಿಗಳು, ವಾಣಿಜ್ಯ ಮಳಿಗೆಗಳು, ಸೇರಿದಂತೆ ಹಲವು ವ್ಯಾಪಾರಿ ಅಂಗಡಿಗಳಿಗೆ ತೆರಳಿ ಕನ್ನಡಕ್ಕೆ ಆದ್ಯತೆ ನೀಡುವಂತೆ ಹಕ್ಕೊತ್ತಾಯ ಮಂಡಿಸಿದರು.

ಕರ್ನಾಟಕದಲ್ಲಿ ಕನ್ನಡ ಆಯ್ಕೆಯಲ್ಲ ಕಡ್ಡಾಯ. ಕನ್ನಡಿಗರಿಗೆ ಕನ್ನಡದಲ್ಲಿ ಸೇವೆ ನೀಡಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸ್ಪಷ್ಟ ಸಂದೇಶ ಸಾರಿತು. ಕೈಪಿಡಿಗಳು, ಸುರಕ್ಷತಾ ಮಾರ್ಗಸೂಚಿಗಳು ಗ್ರಾಹಕರ ಭಾಷೆಯಲ್ಲೇ ಲಭ್ಯವಿರಬೇಕು. ಭಾರತೀಯ ಅಂಚೆ ಗ್ರಾಹಕ ಸೇವೆಗಳನ್ನು ಎಲ್ಲಾ ಭಾರತೀಯ ಭಾಷೆಗಳಲ್ಲಿ ಒದಗಿಸಬೇಕು ಎಂದು ಪ್ರಾಧಿಕಾರವು ಒತ್ತಾಯಿಸಿತು.

ಅಂಗಡಿ ಮುಂಗಟ್ಟಿನ ನಾಮಫಲಕದಲ್ಲಿ ಕನ್ನಡ ಪ್ರಧಾನವಾಗಿರಲಿ ಎಂದು ವ್ಯಾಪಾರಸ್ಥರನ್ನು ಪ್ರಾಧಿಕಾರವು ಮನವಿ ಮಾಡಿತು. ಇದನ್ನು ಅನುಸರಿಸದ ಅಂಗಡಿ ಮಾಲೀಕರ ವಿರುದ್ಧ ಕ್ರಮಕೈಗೊಳ್ಳುವಂತೆ ಬಿಬಿಎಂಪಿಗೆ ಸೂಚಿಸಿತು. 

ಕನ್ನಡದಲ್ಲಿ ಸೇವೆ ನೀಡದ ಕೆಲವು ಆಸ್ಪತ್ರೆಗಳ ಹೆಸರು ಟ್ಯಾಗ್‌ ಮಾಡಿದ ಪ್ರಾಧಿಕಾರವು, ‘ರೋಗಿಗಳಿಗೆ ನೀವು ದೈವ ಸಮಾನರು. ಅವರಿಗೆ ನೀಡುವ ಚಿಕಿತ್ಸೆ, ಔಷಧಿ ವಿವರಣೆಯನ್ನ ಕನ್ನಡದಲ್ಲೇ ಕೊಡಿ. ಅವರೊಂದಿಗೆ ಕನ್ನಡದಲ್ಲಿ ಮಾತನಾಡಿ. ಕನ್ನಡಾಭಿಮಾನದ ಮೂಲಕ ಇತರರಿಗೆ ಮಾದರಿಯಾಗಿ’ ಎಂದು ಕೋರಿತು. 

ಕನ್ನಡ ಪರ ಹೋರಾಟದಲ್ಲಿ ತೊಡಗಿರುವ ಅನೇಕರು ಕನ್ನಡ ನಾಡಿನಲ್ಲಿ ಕನ್ನಡದಲ್ಲೇ ಸೇವೆ ನೀಡುವುದರ ಅಗತ್ಯವನ್ನು ಸಾರುವ ನೂರಾರು ಸಂದೇಶಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡರು.

‘ಅಡುಗೆ ಅನಿಲದ ಸಿಲಿಂಡರ್ ಮೇಲೆ ಕನ್ನಡದಲ್ಲಿ ಯಾವುದೇ ಮಾಹಿತಿ ಇಲ್ಲ. ಇದು ಕನ್ನಡಲ್ಲಿ ಬೇಡುತ್ತಿರುವ ಸೇವೆ ಅಷ್ಟೇ ಅಲ್ಲ, ಕನ್ನಡಿಗರ ಸುರಕ್ಷತೆ ಮತ್ತು ಜೀವದ ಪ್ರಶ್ನೆ. ಇನ್ನು ಮುಂದೆ ಆದರೂ ಕನ್ನಡದಲ್ಲಿ ಎಲ್ಲ ಸುರಕ್ಷತಾ ಮಾಹಿತಿ ಸಿಗಲಿ’ ಎಂದು ಸಂದೀಪ್‌ ಕಂಬಿ ಒತ್ತಾಯಿಸಿದರು. 

‘ಯಾವುದೇ ಮಾರಾಟಗಾರರು ಗ್ರಾಹಕರನ್ನು ಕಡೆಗಣಿಸಿ ಗೆಲ್ಲಲಾರರು. ಕನ್ನಡಿಗರು ಗ್ರಾಹಕರಾಗಿ ಕನ್ನಡದಲ್ಲಿ ಸೇವೆ ಕೇಳುವುದನ್ನು ರೂಢಿ ಮಾಡಿಕೊಳ್ಳಬೇಕು. ಇದರಿಂದ ಆಗುವ ಬದಲಾವಣೆಗಳು ಅಚ್ಚರಿ ಮೂಡಿಸುವಂತಹವು’ ಎಂದು ಜೆ.ಎಸ್‌. ಪ್ರಶಾಂತ ಟ್ವೀಟ್ ಮಾಡಿದರು.

‘ಮಾರುಕಟ್ಟೆ ಮತ್ತು ವ್ಯವಹಾರದಲ್ಲಿ ಭಾಷೆ ಬಳಕೆಯಲ್ಲಿದ್ದರೆ ಭಾಷೆಗೆ ಉಳಿವು. ನಮ್ಮ ಸುತ್ತ ಕಾಣುವ, ನಾವು ಕೊಳ್ಳುವ ಎಲ್ಲ ಕಡೆ ಕನ್ನಡದಲ್ಲಿ ಸೇವೆಗೆ ಆಗ್ರಹಿಸೋಣ’ ಎಂದು ಅಮರನಾಥ ಶಿವಶಂಕರ್‌ ಒತ್ತಾಯಿಸಿದರು.

‘ಬ್ಯಾಕಿಂಗ್‌ನ ಮೂಲಭೂತ ಸೇವೆಯನ್ನು ಕನ್ನಡದಲ್ಲೇ ಪಡೆಯಲು ಸಾವಿರಾರು ಕನ್ನಡಿಗರು ಪಡಿಪಾಟಲು ಎದುರಿಸುತ್ತಿದ್ದಾರೆ’ ಎಂದು ಗಮನ ಸೆಳೆದ ಕಿರಣ್ ಕೊಡ್ಲಾಡಿ, ಈ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡರು. 

‘ಒಂದು ವಸ್ತು ಅಥವಾ ಸೇವೆ ಪಡೆಯಲು ಹೋದಾಗ ನಮ್ಮನುಡಿಯಲ್ಲಿ ನಮ್ಮ ಊರಲ್ಲೇ ಸೇವೆ ಇಲ್ಲ ಅಂದರೆ ಅಭದ್ರತೆ ಶುರುವಾಗುತ್ತದೆ. ನಮ್ಮ ಊರಲ್ಲಿ ನಾವಿದ್ದೀವಾ ಎಂಬ ಅನುಮಾನ ಕಾಡುತ್ತದೆ. ಸರ್ಕಾರಕ್ಕೆ ಈ ಅನ್ಯಾಯದ ಅರಿವಿಲ್ಲವೇ? ಕಂಡಿತ ಇದೆ. ಸಾಕು ನಿಮ್ಮ ಜಡತ್ವ’ ಎಂದು ಉಮೇಶ್‌ ಶಿವರಾಜು ಆಕ್ರೋಶ ವ್ಯಕ್ತಪಡಿಸಿದರು.

‘ನಮ್ಮ ನುಡಿಯಲ್ಲಿ ಅಗತ್ಯ ಸೇವೆಗಳು ಬೇಕೆಂದು ಅಸಹಾಯಕ ಜನಗಳು ಇನ್ನೂ ಎಷ್ಟು ಕಾಲ ಹೋರಾಡಬೇಕು? ಸರ್ಕಾರ ಏಕೆ ಕಣ್ಣುಮುಚ್ಚಿ ಕೂತಿದೆ? ಕನ್ನಡದಲ್ಲಿ ಗ್ರಾಹಕ ಸೇವೆಯ ಕಾನೂನು ಬೇಕೇ ಬೇಕು’ ಎಂದು ಅವರು ಒತ್ತಾಯಿಸಿದರು.

ಗಮನ ಸೆಳೆದ ಟ್ವೀಟ್‌ಗಳು 

*************

ನಾನು ಇತ್ತೀಚೆಗೆ ಎನ್‌ಪಿಎಸ್ ಖಾತೆಯನ್ನು ತೆರೆದೆ. ಮಾಹಿತಿ ಕೈಪಿಡಿ ಇಂಗ್ಲಿಷ್‌, ಹಿಂದಿಗಳಲ್ಲಿ ಮಾತ್ರ ಇದೆ. ಅವರ ಯೂಟ್ಯೂಬ್‌ ವಿಡಿಯೊಗಳಲ್ಲೂ ಇದೇ ಕತೆ. ಮಾಹಿತಿ ಹಾಗೂ ಸೇವೆಯನ್ನು ಕನ್ನಡ ಹಾಗೂ ಭಾರತದ ಇತರ ಭಾಷೆಗಳಲ್ಲೂ ನೀಡಿ

-ವಿಕಾಸ್ ಹೆಗಡೆ

*****

ಅಣ್ಣಾವ್ರ ಹೆಗ್ಗಳಿಕೆಯನ್ನು ಆಚರಿಸುವ ಅತ್ಯಂತ ಶ್ರೇಷ್ಠ ಮಾರ್ಗವೆಂದರೆ ಸರ್ಕಾರಿ ಹಾಗೂ ಖಾಸಗಿ ರಂಗದ ಎಲ್ಲ ಗ್ರಾಹಕ ಸೇವೆಗಳನ್ನು ಸದಾ ಕನ್ನಡದಲ್ಲೇ ನೀಡುವಂತೆ ಒತ್ತಾಯಿಸುವುದು. ಕನ್ನಡದಲ್ಲಿ ಸೇವೆ ಒದಗಿಸದವರಲ್ಲಿ ವ್ಯಾಪಾರವೂ ಬೇಡ. 

-ಅಭಿನಂದನ್‌

***
ಒಟ್ಟಿನಲ್ಲಿ ನಾವು ಕರ್ನಾಟಕದಲ್ಲಿ ಎಲ್ಲೇ ಹೋದರೂ, ಏನೇ ಕೊಂಡುಕೊಂಡರು ಸರಿ... ನಮಗೆ ಎಲ್ಲೆಡೆ ಕನ್ನಡ ಕಾಣಬೇಕು, ಕೇಳಬೇಕು. ಇದು ಹೀಗಿಲ್ಲದಿದ್ದರೆ ದೂರು ನೀಡೋಣ. ಇ–ಮೇಲ್‌, ಕರೆ, ಓಲೆ... ಏನೇ ಆಗಲಿ ಕನ್ನಡ ಇಲ್ಲದ ಕಡೆ ಕನ್ನಡಕ್ಕೆ ಒತ್ತಾಯಿಸೋಣ. ಕರ್ನಾಟಕದಲ್ಲಿ ದೊರೆಯುವ ಎಲ್ಲ ವಿಮೆ ಪಾಲಿಸಿಗಳಲ್ಲಿ ಕನ್ನಡವಿರಲಿ.

-ನೇಸರ ಬೆಟ್ಟಳಿಯ

***

ನಮ್ಮ ಬೇರು, ನಮ್ಮ ಅಸ್ತಿತ್ವ ಕನ್ನಡ. ಕನ್ನಡಿಗರಲ್ಲಿ ಕನ್ನಡ ಪ್ರಜ್ಞೆಯನ್ನು ಬಡಿದೆಚ್ಚರಿಸಿದ ಅಣ್ಣಾವ್ರಿಗೆ ನಾವು ಗೌರವ ಸಲ್ಲಿಸಬೇಕೆಂದರೆ ಎಲ್ಲೆಡೆ ಕನ್ನಡ ರಾರಾಜಿಸುವಂತೆ ಮಾಡಬೇಕಿದೆ. ಎಲ್ಲಾ ಗ್ರಾಹಕ ಸೇವೆಗಳನ್ನು ಕನ್ನಡದಲ್ಲಿ ಕೇಳಿ ಪಡೆಯೋಣ

-ರಾಮಚಂದ್ರ ಎಂ.

***

ಡಾ. ರಾಜ್ ಅವರು ಎಷ್ಟೇ ಎತ್ತರಕ್ಕೆ ಏರಿದರೂ ತಮಗೆ ಬದುಕು ಕಟ್ಟಿಕೊಟ್ಟ ಕನ್ನಡವನ್ನು ತಮ್ಮ ಕೊನೆ ಉಸಿರಿರುವವರೆಗೂ ಅತ್ಯಂತ ಗೌರವದಿಂದ ಕಂಡವರು. ಕನ್ನಡಕ್ಕೆ ಕಿಂಚಿತ್ತು ಅವಮಾನವಾದರೂ ಸೆಟೆದು ನಿಂತವರು. ಇದು ನಮಗೆಲ್ಲರಿಗೂ ಮಾದರಿ, ಕನ್ನಡಕ್ಕೆ ಎಲ್ಲೆಡೆಯೂ ಗೌರವ ದಕ್ಕುವಂತೆ ಮಾಡುವುದೇ ನಮ್ಮ ಕರ್ತವ್ಯ 

ಗಿರೀಶ್ ಕಾರ್ಗದ್ದೆ

***
ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ ಕನ್ನಡದಲ್ಲಿ ಮಾಹಿತಿ ನೀಡಲು ಜಾಗವಿಲ್ಲವೆಂದು ಕ್ಷುಲ್ಲಕ ಕಾರಣವನ್ನು ನೀಡುವ ಬದಲು ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ಜನರ ನುಡಿಗಳಲ್ಲಿ ಸೇವೆ ಒದಗಿಸಬೇಕು. ಇದು ಜನರ ಜೀವನದ ಪ್ರಶ್ನೆಯಾದ್ದರಿಂದ ಸರ್ಕಾರ ಕಾಲಹರಣಮಾಡಬಾರದು

-ಗೌತಮ್ ಗಣೇಶ್ ಎಂ.ಎಚ್  

***
ಇದುವರೆಗೂ ಕೇಳಿ ಅಭ್ಯಾಸವಿರಲಿಲ್ಲವೇ? ಇಂದಿನಿಂದ ಆರಂಭಿಸಿ. ಎಲ್ಲದಕ್ಕೂ ಒಂದು ಮೊದಲು ಇದ್ದೇ ಇರುತ್ತೆ. ಕನ್ನಡದಲ್ಲಿ ಗ್ರಾಹಕ ಸೇವೆ ಕೇಳಿ ಕೇಳಿ ಪಡೆಯಿರಿ. ಹಠ ಮಾಡಿ. ಕನ್ನಡಿಗರೇ, ನಿಮ್ಮ ಬ್ಯಾಂಕ್ ಜೊತೆ ಇರುವ ಮಾತು, ಬರಹ ಎಲ್ಲವನ್ನೂ ಕನ್ನಡದಲ್ಲಿಯೇ ಇಟ್ಟುಕೊಳ್ಳಿ. ಪ್ರತಿ ಚಕ್, ಚಲನ್, ಅರ್ಜಿಯನ್ನು ಕಡ್ಡಾಯವಾಗಿ ಕನ್ನಡದಲ್ಲಿಯೇ ಬರೆಯಿರಿ.

-ಉಮೇಶ್‌ ಶಿವರಾಜು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು