ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆ ಚುನಾವಣೆ: ನಾಲ್ಕನೇ ಸ್ಥಾನಕ್ಕೆ ತೀವ್ರ ಹಣಾಹಣಿ

Last Updated 31 ಮೇ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜೂನ್‌ 10 ರಂದು ನಡೆಯುವರಾಜ್ಯಸಭಾ ಚುನಾವಣೆ ಯಲ್ಲಿ ನಾಲ್ಕನೇ ಸ್ಥಾನಕ್ಕೆ ಮೂರು ಪಕ್ಷ ಗಳೂ ತಲಾ ಒಬ್ಬ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರುವುದರಿಂದ ತೀವ್ರ ಹಣಾಹಣಿ ಏರ್ಪಟ್ಟಿದೆ.

ಒಟ್ಟು ನಾಲ್ಕು ಸ್ಥಾನಗಳಲ್ಲಿ ಬಿಜೆಪಿ 2 ಮತ್ತು ಕಾಂಗ್ರೆಸ್‌ 1 ಸ್ಥಾನವನ್ನು ಅನಾಯಾಸವಾಗಿ ಗೆದ್ದುಕೊಳ್ಳುವ ಸಾಧ್ಯತೆ ಇದೆ. ನಾಲ್ಕನೇ ಸ್ಥಾನಕ್ಕೆ ಮೂವರು ಅಭ್ಯರ್ಥಿಗಳು ಕಣದಲ್ಲಿ ಇರುವುದರಿಂದ, ನಾಮಪತ್ರ ಹಿಂದಕ್ಕೆ ಪಡೆಯದೇ ಇದ್ದರೆ ಮತದಾನ
ಅನಿವಾರ್ಯವಾಗಲಿದೆ.

ಬಿಜೆಪಿಯಲ್ಲಿ ಇಬ್ಬರು ಅಭ್ಯರ್ಥಿ ಗಳಿಗೆ ತಲಾ 45 ಮತಗಳನ್ನು ಚಲಾ ಯಿಸಿದ (ಒಟ್ಟು 90 ಮತಗಳು) ನಂತರ 32 ಮತಗಳು ಹೆಚ್ಚುವರಿಯಾಗಿ ಉಳಿಯುತ್ತವೆ. ಕಾಂಗ್ರೆಸ್‌ನ ಒಬ್ಬ ಅಭ್ಯರ್ಥಿಗೆ 45 ಮತಗಳನ್ನು ನೀಡಿದ ನಂತರ 25 ಹೆಚ್ಚುವರಿ ಮತಗಳು ಉಳಿಯುತ್ತವೆ. ಜೆಡಿಎಸ್‌ ಬಳಿ 32 ಮತಗಳು ಮಾತ್ರ ಇವೆ. ಆಂಗ್ಲೊ ಇಂಡಿ ಯನ್‌ ಸದಸ್ಯೆಗೆ ಮತದಾನದ ಹಕ್ಕು ಇಲ್ಲ. ನಾಲ್ಕನೇ ಅಭ್ಯರ್ಥಿಯ ಗೆಲುವಿಗೆ ಎಷ್ಟು ಮತ ಅಗತ್ಯ ಎಂಬುದನ್ನು ಮತ ಗಳ ಚಲಾವಣೆ ಬಳಿಕ ತೀರ್ಮಾನಿಸಲಾಗುತ್ತದೆ.

ಬಿಜೆಪಿಯಿಂದ ಲಹರ್‌ ಸಿಂಗ್‌ ಸಿರೋಯಾ, ಕಾಂಗ್ರೆಸ್‌ನಿಂದ ಮನ್ಸೂರ್‌ ಅಲಿ ಖಾನ್‌ ಮತ್ತು ಜೆಡಿಎಸ್‌ನಿಂದ ಕುಪೇಂದ್ರರೆಡ್ಡಿ ನಾಲ್ಕನೇ ಅಭ್ಯರ್ಥಿಯಾಗಿ ಆಯ್ಕೆಯಾಗಲು ಜಿದ್ದಾಜಿದ್ದಿನ ಪೈಪೋಟಿ ನಡೆಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ ಎರಡನೇ ಪ್ರಾಶಸ್ಯ್ತದ ಮತಗಳನ್ನು ಚಲಾಯಿಸಬಹುದು.

ಕಾಂಗ್ರೆಸ್‌ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ ಜೆಡಿಎಸ್‌ನ ಜಾತ್ಯತೀತ ನಿಲುವಿಗೆ ಸವಾಲು ಹಾಕಿತ್ತು. ಜೆಡಿಎಸ್‌ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೇ ಮುಸ್ಲಿಂ ಅಭ್ಯರ್ಥಿಯನ್ನು ಬೆಂಬಲಿಸಬೇಕು. ಒಂದು ವೇಳೆ ಬಿಜೆಪಿಯ ಅಭ್ಯರ್ಥಿಯನ್ನು ಬೆಂಬಲಿಸಿದರೆ, ಬಿಜೆಪಿಯ ‘ಬಿ’ ಟೀಂ ಎಂದು ಬಿಂಬಿಸಲು ಸಿದ್ದರಾಮಯ್ಯ ಬಣ ರಣತಂತ್ರ ಹೆಣೆದಿತ್ತು. ಇದಕ್ಕಾಗಿ ಡಿ.ಕೆ.ಶಿವಕುಮಾರ್‌ ಒಪ್ಪಿಗೆ ಪಡೆದೇ ಮನ್ಸೂರ್‌ ಖಾನ್‌ ಅವರನ್ನು ಕಣಕ್ಕೆ ಇಳಿಸಿತ್ತು ಎಂದು ಮೂಲಗಳು ಹೇಳಿವೆ.

ಆದರೆ, ಜೆಡಿಎಸ್‌ ಬೇರೆಯದೇ ಲೆಕ್ಕಾಚಾರ ಹಾಕಿಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕೆ ಇಳಿಸಲು ತೀರ್ಮಾ ನಿಸಿದೆ. ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕೆ ಇಳಿಸಲು ಎಚ್‌.ಡಿ.ದೇವೇಗೌಡರೇ ಹೆಚ್ಚಿನ ಉತ್ಸಾಹ ತೋರಿದ್ದರು. ಈ ಸಂಬಂಧ ದೆಹಲಿಯಲ್ಲಿರುವ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರ ಬೆಂಬಲವನ್ನೂ ಕೋರಿದ್ದರು ಎನ್ನ ಲಾಗಿದೆ. ಆದರೆ, ಸ್ಥಳೀಯ ಕಾಂಗ್ರೆಸ್‌ ನಾಯಕರು ಬೇರೆಯದೇ ತಂತ್ರ ಹೆಣೆದು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರು. ಇದರಿಂದ ಜೆಡಿಎಸ್‌ ಅಭ್ಯರ್ಥಿ ಯಾವ ತಂತ್ರ ಅನುಸರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಕುಪೇಂದ್ರ ರೆಡ್ಡಿ ಅವರೂ ವೈಯಕ್ತಿಕ ನೆಲೆಯಲ್ಲಿ ಕಾಂಗ್ರೆಸ್‌ನಿಂದ ಒಂದಷ್ಟು ಮತಗಳನ್ನು ಸೆಳೆಯಲು ಸಿದ್ಧತೆ ನಡೆಸಿಕೊಂಡಿದ್ದಾರೆ. ಕಾಂಗ್ರೆಸ್‌ಗೆ ಈಗ ಜೈರಾಂ ರಮೇಶ್‌ ಅವರನ್ನು ಗೆಲ್ಲಿಸಿಕೊಳ್ಳುತ್ತದೆಯೋ, ಮುಸ್ಲಿಂ ಅಭ್ಯರ್ಥಿ ಮನ್ಸೂರ್‌ ಖಾನ್‌ ಅವರನ್ನು ಗೆಲ್ಲಿಸಿಕೊಂಡು ಅಲ್ಪಸಂಖ್ಯಾತರ ಪರ ನಿಲ್ಲುತ್ತದೋ ಎಂಬುದನ್ನು ಸಾಬೀತು ಮಾಡುವ ಹೊಣೆಗಾರಿಕೆ ಕಾಂಗ್ರೆಸ್‌ಗಿದೆ ಎನ್ನುತ್ತಾರೆ ಜೆಡಿಎಸ್‌ ನಾಯಕರು.

ಬಿಜೆಪಿಯಿಂದ ಮೂರನೇ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಲಹರ್‌ ಸಿಂಗ್ ಅವರು, ‘ಬಿಜೆಪಿ ಮಾತ್ರವಲ್ಲ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳಲ್ಲೂ ನನಗೆ ಹಲವರು ಮಿತ್ರರಿದ್ದಾರೆ. ಇವರೆಲ್ಲರ ನೆರವಿನಿಂದ ಚುನಾವಣೆಯಲ್ಲಿ ಗೆದ್ದೇ ತಿರುತ್ತೇನೆ’ ಎಂದು ಹೇಳಿಕೊಂಡಿದ್ದಾರೆ.

ಯಾರ ಬಳಿ ಎಷ್ಟು ಮತ?

ಗೆಲುವಿಗೆ ಒಬ್ಬ ಅಭ್ಯರ್ಥಿಗೆ ತಲಾ 45 ಮತಗಳು ಬೇಕು. ವಿಧಾನಸಭೆಯಲ್ಲಿ ಬಿಜೆಪಿಗೆ 121 ಮತ್ತು ಕಾಂಗ್ರೆಸ್‌ಗೆ 69 ಶಾಸಕರ ಬಲವಿದೆ. ಜೆಡಿಎಸ್‌ 32 ಸ್ಥಾನಗಳನ್ನು ಹೊಂದಿದೆ (ಇಬ್ಬರು ಪಕ್ಷೇತರ ಶಾಸಕರ ಪೈಕಿ ಎನ್‌.ಮಹೇಶ್ ಬಿಜೆಪಿ ಜತೆಗೂ, ಶರತ್‌ ಬಚ್ಚೇಗೌಡ ಕಾಂಗ್ರೆಸ್‌ ಜತೆ ಗುರುತಿಸಿಕೊಂಡಿದ್ದಾರೆ. ಇದರಿಂದ ಬಿಜೆಪಿ ಬಲ 122 ಮತ್ತು ಕಾಂಗ್ರೆಸ್‌ ಬಲ 70 ಆಗುತ್ತದೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT