ಮಂಗಳವಾರ, ಮೇ 17, 2022
25 °C

ಪಕ್ಷ ನಿಷ್ಠೆ, ಬದ್ಧತೆಗೆ ಸಿಕ್ಕ ಗೌರವ: ಮಲ್ಲಿಕಾರ್ಜುನ ಖರ್ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಾನು ಪಕ್ಷದ ಸಿದ್ಧಾಂತದ ಮೇಲೆ‌ ನಂಬಿಕೆ ಇಟ್ಟಿರುವವನು. ಪಕ್ಷ ನಿಷ್ಠೆ, ಬದ್ಧತೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ. ಇದನ್ನು ನೋಡಿಯೇ ಪಕ್ಷದ ನಾಯಕರು ಮತ್ತೆ ರಾಜ್ಯಸಭೆಯ ಸದಸ್ಯನಾಗಿ ಮಾಡಿ, ವಿರೋಧ ಪಕ್ಷದ ನಾಯಕನ ಸ್ಥಾನವನ್ನೂ ನೀಡಿದ್ದಾರೆ’ ಎಂದು ಕಾಂಗ್ರೆಸ್ಸಿನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, 'ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನನ್ನ ಮೇಲೆ ವಿಶ್ವಾಸ, ನಂಬಿಕೆ ಇಟ್ಟು ಈ ಹುದ್ದೆ ಕೊಟ್ಟಿದ್ದಾರೆ. ಇದು ನನಗೆ ಕೊಟ್ಟ ಗೌರವ. ಇದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ಹುದ್ದೆಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ಪ್ರಜಾಪ್ರಭುತ್ವ ಉಳಿಸುವ ಕೆಲಸ ಮಾಡುತ್ತೇವೆ’ ಎಂದರು.

‘ಮತ್ತೆ ನೀವು ಬರುವುದಿಲ್ಲ ಎಂದು ನನ್ನನ್ನು ಉದ್ದೇಶಿಸಿ ಮೋದಿ ಹೇಳಿದ್ದರು. ಅವರಲ್ಲಿ ಆ ಅಪೇಕ್ಷೆ ಇತ್ತು. ನಾನು 48 ವರ್ಷಗಳಿಂದ ಚುನಾವಣೆಯಲ್ಲಿ ಗೆದ್ದಿದ್ದೇನೆ. ಕಳೆದ ಚುನಾವಣೆಯಲ್ಲಿ ಸೋಲಾಯಿತು. ನನ್ನ ಸೋಲಿಗೆ ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್, ಬಿಜೆಪಿ ಹೀಗೆ ಬಹಳ ಜನರ ಪ್ರಯತ್ನ ಇತ್ತು. ಅದರ ಬಗ್ಗೆ ನನಗೆ ಯಾವುದೇ ಸಿಟ್ಟು ಇಲ್ಲ’ ಎಂದರು.

‘ಎಲ್ಲರೂ ಒಟ್ಟಾಗಿ ಇರಬೇಕು. ಈ ಹಿಂದೆಯೂ ಈ ಮಾತು ಹೇಳಿದ್ದೇನೆ. ಈಗಲೂ ಅದೇ ಮಾತು ಹೇಳುತ್ತೇನೆ. ಸೋತಾಗ ಮತ್ತೊಬ್ಬರ ಕಡೆ ಬೊಟ್ಟು ಮಾಡುವುದು, ಗೆದ್ದಾಗ ನಾವೇ ಗೆಲ್ಲಿಸಿದೆವು ಎಂದು ಹೇಳುವುದು ಆಗಬಾರದು. ಸೋಲು, ಗೆಲುವು ಪಕ್ಷದ್ದೇ ಆಗಿರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಒಬ್ಬರ ಮೇಲೆ‌ ಒಬ್ಬರು ಆರೋಪ ಮಾಡುವುದು ಸರಿಯಲ್ಲ’ ಎಂದು ಪಕ್ಷದ ನಾಯಕರಿಗೆ ಕಿವಿಮಾತು ಹೇಳಿದರು.

‘ಸಿದ್ದರಾಮಯ್ಯ ನಾಯಕರಾಗಿದ್ದು, ಮುಖ್ಯಮಂತ್ರಿಯಾಗಿದ್ದು ಕಾಂಗ್ರೆಸ್‌ನಿಂದಲೇ. ಡಿ.ಕೆ. ಶಿವಕುಮಾರ್‌ಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದ್ದು ಕಾಂಗ್ರೆಸ್‌ನಿಂದಲೇ. ಸೋನಿಯಾಗಾಂಧಿ, ರಾಹುಲ್ ಗಾಂಧಿ ಹೋರಾಟಕ್ಕೆ ಎಲ್ಲರೂ ಬೆಂಬಲವಾಗಿ ನಿಲ್ಲಬೇಕು. ಯಾರೂ ತಪ್ಪು ಮಾಡಬಾರದು. ಎಲ್ಲರೂ ಒಟ್ಟಿಗೆ ಹೋಗುವುದು ಬಹಳ ಮುಖ್ಯ. ಯಾರಿಗೂ ಯಾರೂ ಹೇಳಿಕೊಡುವ ಪ್ರಶ್ನೆ ಬರುವುದಿಲ್ಲ’ ಎಂದೂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು