ಸೋಮವಾರ, ಆಗಸ್ಟ್ 8, 2022
24 °C

ರಮೇಶ ಜಾರಕಿಹೊಳಿ ಸಿ.ಡಿ ಬ್ಲ್ಯಾಕ್‌ಮೇಲ್: ಆರೋಪಿಗಳು ಹಾಜರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಮೇಶ ಜಾರಕಿಹೊಳಿ ಸಿಡಿ ಪ್ರಕರಣ–ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಯುವತಿ ಜೊತೆಗಿನ ದೃಶ್ಯಗಳಿದ್ದ ಸಿ.ಡಿ ಇಟ್ಟುಕೊಂಡು ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಬ್ಲ್ಯಾಕ್‌ಮೇಲ್ ಮಾಡಿದ್ದ ಪ್ರಕರಣದ ಆರೋಪಿಗಳು ವಿಶೇಷ ತನಿಖಾ ತಂಡದ (ಎಸ್‌ಐಟಿ) ಎದುರು ಶನಿವಾರ ಹಾಜರಾದರು.

‘ಕೆಲಸದ ಆಮಿಷವೊಡ್ಡಿದ್ದ ರಮೇಶ ಜಾರಕಿಹೊಳಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ’ ಎಂದು ಆರೋಪಿಸಿ ಯುವತಿ ಕಬ್ಬನ್ ಪಾರ್ಕ್‌ ಠಾಣೆಗೆ ದೂರು ನೀಡಿದ್ದರು. ಅದಕ್ಕೆ ಪ್ರತಿಯಾಗಿ ಸದಾಶಿವನಗರ ಠಾಣೆಗೆ ದೂರು ಕೊಟ್ಟಿದ್ದ ರಮೇಶ ಜಾರಕಿಹೊಳಿ, ‘ಸಿ.ಡಿ ಸೃಷ್ಟಿಸಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿರುವ ಕೆಲವರು, ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದರು.

ಎರಡೂ ಪ್ರಕರಣಗಳ ತನಿಖೆ ನಡೆಸುತ್ತಿರುವ ಎಸ್‌ಐಟಿ, ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆ ಹಾಗೂ ರಮೇಶ ಅವರನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆ ಪಡೆದಿದೆ. ಬ್ಲ್ಯಾಕ್‌ಮೇಲ್‌ ಪ್ರಕರಣದಲ್ಲಿ ಆರೋಪಿಗಳಾಗಿದ್ದ ನರೇಶ್ ಗೌಡ ಹಾಗೂ ಶ್ರವಣ್ ತಲೆಮರೆಸಿಕೊಂಡಿದ್ದರು. ಅವರಿಗಾಗಿ ಎಸ್‌ಐಟಿ ಶೋಧ ನಡೆಸುತ್ತಿತ್ತು.

ಇದರ ನಡುವೆಯೇ ಆರೋಪಿಗಳು, ವಕೀಲರ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಷರತ್ತು ವಿಧಿಸಿತ್ತು.

ಪ್ರಕರಣ ಬೆಳಕಿಗೆ ಬಂದಿದ್ದ ಮಾ. 2ರಿಂದಲೇ ಅಜ್ಞಾತ ಸ್ಥಳದಲ್ಲಿದ್ದ ಆರೋಪಿಗಳು, ವಕೀಲರ ಸಮೇತ ಆಡುಗೋಡಿಯಲ್ಲಿರುವ ಎಸ್‌ಐಟಿ ಕಚೇರಿಗೆ ಶನಿವಾರ ಹಾಜರಾದರು. ಎಸ್‌ಐಟಿ  ತನಿಖಾಧಿಕಾರಿ ಧರ್ಮೇಂದ್ರ ನೇತೃತ್ವದ ತಂಡ, ಮಧ್ಯಾಹ್ನ 12 ಗಂಟೆಯಿಂದ ಸಂಜೆಯವರೆಗೂ ಆರೋಪಿಗಳ ವಿಚಾರಣೆ ನಡೆಸಿತು.

‘ಆರೋಪಿಗಳ ಹೇಳಿಕೆ ಪಡೆಯಲಾಗಿದೆ. ಅದನ್ನು ಪರಿಶೀಲಿಸಿ, ಪುನಃ ವಿಚಾರಣೆ ಅಗತ್ಯವಿದ್ದರೆ ಆರೋಪಿಗಳನ್ನು ಕರೆಸಲಾಗು
ವುದು’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

ಅಮಾಯಕರೆಂದ ಆರೋಪಿಗಳು: ‘ಸುದ್ದಿ ವಾಹಿನಿಗಳಲ್ಲಿ ಕೆಲಸ ಮಾಡುತ್ತಿದ್ದ ನಮ್ಮ ಬಳಿ ಯುವತಿ ನ್ಯಾಯ ಕೋರಿ ಬಂದಿದ್ದಳು. ವೈಯಕ್ತಿಕ ಕೆಲಸಗಳಿಂದ ಅವರಿಗೆ ಸಹಾಯ ಮಾಡಲು ಆಗಲಿಲ್ಲ. ಇದರ ನಡುವೆಯೇ ವಿಡಿಯೊ ಎಲ್ಲೆಡೆ ಹರಿದಾಡಿದೆ. ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಪ್ರಕರಣದಲ್ಲಿ ನಾವು ಅಮಾಯಕರು’ ಎಂದು ಆರೋಪಿಗಳು ಹೇಳಿರುವುದಾಗಿ ಗೊತ್ತಾಗಿದೆ.

‘ದೂರುದಾರ ಪ್ರಭಾವಿ ವ್ಯಕ್ತಿ. ಅವರ ಒತ್ತಡದಿಂದ ಪೊಲೀಸರು ನಮ್ಮನ್ನು ಬಂಧಿಸಬಹುದೆಂಬ ಭಯದಲ್ಲಿ ಅಜ್ಞಾತ ಸ್ಥಳದಲ್ಲಿದ್ದೆವು. ನ್ಯಾಯಾಲಯದ ಜಾಮೀನು ಪಡೆದು ಈಗ ವಿಚಾರಣೆಗೆ ಬಂದಿದ್ದೇವೆ. ತನಿಖೆಗೆ ಸಂಪೂರ್ಣ ಬೆಂಬಲ ನೀಡುತ್ತೇವೆ’ ಎಂದೂ ಆರೋಪಿಗಳು ತಿಳಿಸಿರುವುದಾಗಿ ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು