ನವದೆಹಲಿ: ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ವಿಷಯವಾಗಿ ಕಾಂಗ್ರೆಸ್‌ನ ಕರ್ನಾಟಕ ಘಟಕದಲ್ಲಿ ಸೃಷ್ಟಿಯಾಗಿರುವ ಆಂತರಿಕ ಕಚ್ಚಾಟಕ್ಕೆ ಅಂತ್ಯ ಹಾಡಲು, ಉಸ್ತುವಾರಿಯಾದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್ ಸುರ್ಜೇವಾಲಾ ಅವರು ಶೀಘ್ರವೇ ಆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.
‘ಸುರ್ಜೇವಾಲಾ ಅವರು ಕರ್ನಾಟಕಕ್ಕೆ ಭೇಟಿ ನೀಡುವ ದಿನಾಂಕ ಇನ್ನೂ ಅಂತಿಮವಾಗಿಲ್ಲ. ರಾಜ್ಯ ಪ್ರವಾಸದ ವಿವರಗಳನ್ನು ಶೀಘ್ರವೇ ತಿಳಿಸುವುದಾಗಿ ಅವರು ಮಾಹಿತಿ ನೀಡಿದ್ದಾರೆ’ ಎಂದು ಕಾಂಗ್ರೆಸ್ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ರ‍್ಯಾಲಿ ಆಯೋಜಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಆ ಮೂಲಕ ಅವರು ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆದಷ್ಟು ಶೀಘ್ರವೇ ರಾಜ್ಯಕ್ಕೆ ಭೇಟಿ ನೀಡಿ, ಆಂತರಿಕ ಕಚ್ಚಾಟವನ್ನು ಬಗೆಹರಿಸಬೇಕು ಎಂಬುದಾಗಿ ರಾಜ್ಯದ ಕೆಲವು ಮುಖಂಡರು ಸುರ್ಜೇವಾಲಾ ಅವರಿಗೆ ಮನವಿ ಮಾಡಿದ್ದಾರೆ’ ಎಂದು ಇವೇ ಮೂಲಗಳು ತಿಳಿಸಿವೆ.
ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಕುರಿತು ಯಾರೂ ಚರ್ಚಿಸಬಾರದು ಎಂದು ಕಾಂಗ್ರೆಸ್ ಹೈಕಮಾಂಡ್ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆದರೂ, ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಬೆಂಬಲಿಗರು ತಮ್ಮ ನಾಯಕರ ಪರವಾಗಿಯೇ ಬಹಿರಂಗ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಿಲ್ಲ. ಈ ಹಿನ್ನೆಲೆಯಲ್ಲಿ ಸುರ್ಜೇವಾಲಾ ಅವರ ಭೇಟಿಗೆ ಮಹತ್ವದ ಬಂದಿದೆ.
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ, ಬಿಬಿಎಂಪಿ ಚುನಾವಣೆಗಳು ಸಮೀಪಿಸುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಘಟಕವನ್ನು ಪುನರ್‌ರಚಿಸಬೇಕು ಎಂಬುದು ಹಿರಿಯ ನಾಯಕರ ಬೇಡಿಕೆಯಾಗಿದೆ. ಈ ಸಂಬಂಧ ಅವರು ಮುಖಂಡರೊಂದಿಗೆ ಚರ್ಚಿಸುವ ಸಾಧ್ಯತೆಗಳು ಇವೆ ಎನ್ನಲಾಗಿದೆ.
ಪಕ್ಷದಲ್ಲಿ ಹಳಬರು ಹಾಗೂ ಹೊಸಬರು ಎಂಬ ಕಂದಕ ಸೃಷ್ಟಿಯಾಗಿರುವುದು ಸಹ ಹೈಕಮಾಂಡ್‌ನ ತಲೆನೋವನ್ನು ಹೆಚ್ಚಿಸಿದೆ. ಕೋವಿಡ್ ಹಿನ್ನೆಲೆಯಲ್ಲಿ ಬಡವರಿಗೆ ದಿನಸಿ ಕಿಟ್‌ಗಳನ್ನು ವಿತರಿಸುವ ಕಾರ್ಯಕ್ರಮಗಳಲ್ಲಿ ಸಿದ್ದರಾಮಯ್ಯ ಮಾತ್ರ ಪಾಲ್ಗೊಳ್ಳುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಈ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಳ್ಳುತ್ತಿರುವುದು ಸಹ ಹೈಕಮಾಂಡ್ ಗಮನಕ್ಕೆ ಬಂದಿದೆ ಎಂದು ಮೂಲಗಳು ಹೇಳಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.