ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ: ಎಎಸ್‌ಐಗೆ 20 ವರ್ಷ ಕಠಿಣ ಶಿಕ್ಷೆ

Last Updated 31 ಜನವರಿ 2022, 19:56 IST
ಅಕ್ಷರ ಗಾತ್ರ

ತುಮಕೂರು: ಐದು ವರ್ಷದ ಹಿಂದೆ ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದ ಸಹಾಯಕ ಸಬ್‌ಇನ್ಸ್‌ಪೆಕ್ಟರ್ ಆಗಿದ್ದ ಎಸ್‌.ಉಮೇಶ್‌ಗೆ ಇಲ್ಲಿಯ ಎರಡನೇ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯವು ಸೋಮವಾರ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಿದೆ.

ದಂಡದ ಮೊತ್ತವನ್ನು ಮೇಲ್ಮನವಿ ಅವಧಿ ಮುಗಿದ ಬಳಿಕ ಸಂತ್ರಸ್ತೆಗೆ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಪರಿಹಾರ ನಿಗದಿಪಡಿಸಲು ಪ್ರಕರಣದ ಕಡತವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದೆ.

ಘಟನೆಯ ನಂತರ ಉಮೇಶ್‌ನನ್ನು ಬಂಧಿಸಲಾಗಿದ್ದು, ಅಂದಿನಿಂದ ಜೈಲಿನಲ್ಲೇ ಇದ್ದಾನೆ. ಜೈಲಿನಲ್ಲಿ ಇರುವ ಅವಧಿಯನ್ನು ಕಳೆದು ಉಳಿದ ಅವಧಿಯ ಶಿಕ್ಷೆ ಅನುಭವಿಸಬೇಕಿದೆ.

ವಿವರ: 2017ರ ಜನವರಿ 15ರಂದು ನಸುಕಿನ ಜಾವ ನಗರದ ಅಂತರಸನಹಳ್ಳಿ ಸೇತುವೆ ಬಳಿ ನಡೆದುಕೊಂಡು ಹೊರಟಿದ್ದ ಮಹಿಳೆಯನ್ನು ಆಕೆಯ ಮನೆಗೆ ಬಿಡುವ ನೆಪದಲ್ಲಿ ಅತ್ಯಾಚಾರ ನಡೆಸಿದ್ದ. ಈ ಘಟನೆ ರಾಜ್ಯಮಟ್ಟದಲ್ಲಿ ಸದ್ದು ಮಾಡಿತ್ತು.

ಸಂಕ್ರಾಂತಿ ಹಬ್ಬದ ದಿನ ರಾತ್ರಿ ಮಹಿಳೆ ಕೋಟೆ ಆಂಜನೇಯ ದೇವಸ್ಥಾನಕ್ಕೆ ಬಂದಿದ್ದರು. ಮನೆಯಿಂದ ನಡೆದುಕೊಂಡು ಬರುವಷ್ಟರಲ್ಲಿ ದೇವಸ್ಥಾನ ಮುಚ್ಚಿದ್ದರಿಂದ ಸುಸ್ತಾಗಿ ಮೆಟ್ಟಿಲುಗಳ ಮೇಲೆ ಮಲಗಿದ್ದರು. ಎಚ್ಚರವಾದಾಗ ಕತ್ತಲೆಯಲ್ಲಿ ಯಾವ ಕಡೆಗೆ ಹೋಗಬೇಕು ಎಂಬುದು ತಿಳಿಯದೆ ಮಹಿಳೆ ಶಿರಾ ರಸ್ತೆಯಲ್ಲಿ ಹೊರಟಿದ್ದರು. ಅಂತರಸನಹಳ್ಳಿ ಸೇತುವೆ ಬಳಿ ರಾತ್ರಿ ಗಸ್ತಿನಲ್ಲಿದ್ದ ಗ್ರಾಮಾಂತರ ಠಾಣೆ ಎಎಸ್‌ಐ ಉಮೇಶ್ ಗಮನಿಸಿದ್ದ.

ಅಲ್ಲೇ ಬೈಕ್ ನಿಲ್ಲಿಸಿ, ಮಧುಗಿರಿ ಕಡೆಯಿಂದ ಬಂದ ವಾಹನದಲ್ಲಿದ್ದ ಮೂವರನ್ನು ಕೆಳಗೆ ಇಳಿಸಿದ್ದಾನೆ. ನಂತರ ಮಹಿಳೆಯನ್ನು ವಾಹನದಲ್ಲಿ ಹತ್ತಿಸಿಕೊಂಡು ನಗರದಲ್ಲಿ ಸುತ್ತಾಟ ನಡೆಸಿ, ವಾಹನದಲ್ಲೇ ಅತ್ಯಾಚಾರ ನಡೆಸಿದ್ದ. ನಂತರ ಮಹಿಳೆಯ ಮನೆಯವರಿಗೆ ಕರೆಮಾಡಿ, ಆಕೆಯನ್ನು ಬಿಟ್ಟು ಹೋಗಿದ್ದ. ಮನೆಯವರಿಗೆ ಮಹಿಳೆ ಅತ್ಯಾಚಾರದ ವಿಚಾರ ತಿಳಿಸಿದ್ದರು.

ನಂತರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಘಟನೆಯನ್ನು ಮುಚ್ಚಿಹಾಕುವ ಪ್ರಯತ್ನ ಕೂಡ ನಡೆದಿತ್ತು. ರಾಜ್ಯಮಟ್ಟದಲ್ಲಿ ಸುದ್ದಿಯಾಗಿದ್ದರಿಂದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.

ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಈ ಆದೇಶ ನೀಡಿದ್ದಾರೆ. ಸರ್ಕಾರಿ ವಕೀಲರಾದ ವಿ.ಎ.ಕವಿತ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT