ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಿನ ಪ್ರತಿಷ್ಠಿತ ಮಠವೊಂದರ ಸ್ವಾಮೀಜಿಯಿಂದ ನಿರಂತರ ಲೈಂಗಿಕ ಕಿರುಕುಳ: ದೂರು

Last Updated 27 ಆಗಸ್ಟ್ 2022, 6:25 IST
ಅಕ್ಷರ ಗಾತ್ರ

ಮೈಸೂರು: ನಾಡಿನ ಪ್ರತಿಷ್ಠಿತ ಮಠವೊಂದರ ಸ್ವಾಮೀಜಿ, ಮಠದ ಉಚಿತ ಹಾಸ್ಟೆಲ್‌ನಲ್ಲಿರುವ ಪ್ರೌಢಶಾಲೆ ವಿದ್ಯಾರ್ಥಿನಿಯರ ಮೇಲೆ ನಿರಂತರ ಲೈಂಗಿಕ ದೌರ್ಜನ್ಯವೆಸಗುತ್ತಿದ್ದಾರೆ ಎಂದು ಆರೋಪಿಸಿ, ದೌರ್ಜನ್ಯಕ್ಕೆ ಒಳಗಾದವರೆನ್ನಲಾದ ವಿದ್ಯಾರ್ಥಿನಿಯರಿಬ್ಬರು ನಗರದ ಮಹಿಳಾ ಸಾಂತ್ವನ ಮತ್ತು ಮಕ್ಕಳ ವಸತಿ ಕೇಂದ್ರವಾದ ಒಡನಾಡಿ ಸಂಸ್ಥೆಗೆ ಶುಕ್ರವಾರ ದೂರು ನೀಡಿದ್ದಾರೆ.

ದೂರು ಪಡೆದು, ಆಪ್ತ ಸಮಾಲೋಚನೆ ನಡೆಸಿರುವ ಸಂಸ್ಥೆಯು ಮಧ್ಯಾಹ್ನವೇ ಈ ಬಾಲಕಿಯರನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿದೆ.

‘ಮಠ ನಡೆಸುವ ಪ್ರೌಢಶಾಲೆಯಲ್ಲೇ ಓದುತ್ತಿರುವ ವಿದ್ಯಾರ್ಥಿನಿಯರು ಸರದಿಯಂತೆ ಸ್ವಾಮೀಜಿ ಬಳಿಗೆ ಹೋಗಲು ಒಪ್ಪದಿದ್ದರೆ, ಹಾಸ್ಟೆಲ್‌ ವಾರ್ಡನ್‌ ಸೇರಿ ಕೆಲ ಸಿಬ್ಬಂದಿ ಅವಾಚ್ಯವಾಗಿ ನಿಂದಿಸಿ, ಕಿರುಕುಳ ನೀಡುತ್ತಾರೆ. ವಿದ್ಯಾರ್ಥಿನಿಯರು ಕಡ್ಡಾಯವಾಗಿ ಸ್ವಾಮೀಜಿ ಬೆಡ್‌ರೂಂಗೆ ಹೋಗಬೇಕು’ ಎಂದು ವಿದ್ಯಾರ್ಥಿನಿಯರು ಆಪ್ತ ಸಮಾಲೋಚನೆ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.

ನೆರವಿನ ನೆಪ: ವಾರಕ್ಕೊಮ್ಮೆ ‘ಹಣ್ಣು ಮತ್ತು ಸಿಹಿಯ ಆಶೀರ್ವಾದ’ದ ನೆಪದಲ್ಲಿ ಏಕಾಂತಕ್ಕೆ ಕರೆಸಿಕೊಳ್ಳುವ ಸ್ವಾಮೀಜಿಯು, ಬಾಲಕಿಯರ ಕುಟುಂಬದ ಮಾಹಿತಿಯನ್ನು ಪಡೆಯುತ್ತಾರೆ. ಪೋಷಕರಿಗೆ ಕಷ್ಟವಿದ್ದರೆ ಅಗತ್ಯ ನೆರವು ಒದಗಿಸುವುದಾಗಿಯೂ ಭರವಸೆ ನೀಡುತ್ತಾರೆ. ನಂತರ ಲೈಂಗಿಕ ಉದ್ದೇಶಕ್ಕೆ ಬಳಸಿಕೊಳ್ಳುತ್ತಾರೆ’ ಎಂದೂ ವಿದ್ಯಾರ್ಥಿನಿಯರು ದೂರಿದ್ದಾರೆ.

‘ಕೈಮುಗಿದರೂ, ಕಾಲಿಗೆ ಬಿದ್ದರೂ ಸ್ವಾಮೀಜಿ ಬಿಡುವುದಿಲ್ಲ. ಖಾಸಗಿ ಅಂಗಗಳನ್ನು ಮುಟ್ಟುತ್ತಾರೆ. ದೌರ್ಜನ್ಯದ ಬಗ್ಗೆ ಯಾರಿಗಾದರೂ ತಿಳಿಸಿದರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಾರೆ. ಅನಾರೋಗ್ಯದ ನೆಪ ಹೇಳಿಕೆಲವರು ದೌರ್ಜನ್ಯದಿಂದ ತಪ್ಪಿಸಿಕೊಂಡಿದ್ದಾರೆ. ಕೆಲವರಿಗೆ ಹಣ್ಣು, ಸಿಹಿಯಲ್ಲಿ ಮತ್ತು ಬರಿಸುವ ಔಷಧಿ ಬೆರೆಸಿ, ಅವರು ಅರೆಪ್ರಜ್ಞಾವಸ್ಥೆಯಲ್ಲಿರುವಾಗಲೇ ಅತ್ಯಾಚಾರ ನಡೆಸಲಾಗಿದೆ’ ಎಂದೂ ದೂರಿದ್ದಾರೆ.

‘ಬಲವಂತದ ಲೈಂಗಿಕ ಕ್ರಿಯೆ ಮುಗಿದ ಬಳಿಕ ಸ್ವಾಮೀಜಿ ಸ್ವಚ್ಛತೆಗಾಗಿ ಟಿಶ್ಯು ಬಳಸುತ್ತಿದ್ದರು. ವಿದ್ಯಾರ್ಥಿನಿಯರಿಗೆ ಸ್ನಾನಗೃಹವನ್ನು ಬಳಸುವಂತೆ ಹೇಳುತ್ತಿದ್ದರು’ ಎಂಬ ಮಾಹಿತಿಯನ್ನೂ ನೀಡಿದ್ದಾರೆ.

‘ಕಿರುಕುಳವನ್ನು ಪ್ರಶ್ನಿಸಿದ ಕಾರಣಕ್ಕೇ ನಮ್ಮನ್ನು ಜುಲೈ ಕೊನೆಯ ವಾರ ಹಾಸ್ಟೆಲ್‌ನಿಂದ ಹೊರದಬ್ಬಿದರು. ನಾವು ಮನೆಗೂ ಹೋಗದೆ, ಬೆಂಗಳೂರಿನ ಸಂಬಂಧಿಕರ ಮನೆಗೆ ಹೋಗಿ ಮಾಹಿತಿ ನೀಡಲು ನಿರ್ಧರಿಸಿದೆವು. ಆದರೆ ಬೆಂಗಳೂರಿಗೆ ಹೋದ ಬಳಿಕ ಸಂಬಂಧಿಕರ ಬಳಿಗೆ ಹೋಗಲಿಲ್ಲ. ಆಟೊ ಚಾಲಕರೊಬ್ಬರು, ಕಾಟನ್‌ಪೇಟೆ ಪೊಲೀಸ್‌ ಠಾಣೆಗೆ ಕರೆದೊಯ್ದರು. ಅಲ್ಲಿಂದ ನಮ್ಮನ್ನು ಮತ್ತೆ ಪೋಷಕರ ಬಳಿಗೆ ಕಳಿಸಿದರು. ಪೋಷಕರು ಸ್ಥಳೀಯ ಜನಪ್ರತಿನಿಧಿಯೊಬ್ಬರನ್ನು ಭೇಟಿ ಮಾಡಿ ಅಲವತ್ತುಕೊಂಡರು. ಅವರ ಮೂಲಕ ಒಡನಾಡಿ ಸಂಸ್ಥೆಗೆ ಬಂದೆವು’ ಎಂದು ಬಾಲಕಿಯರು ಹೇಳಿದ್ದಾರೆ.

ಎಸ್‌ಪಿಗೂ ಮಾಹಿತಿ: ‘ರಾಜ್ಯದ ಗೌರವಾನ್ವಿತ ಮಠವೊಂದರ ಸ್ವಾಮೀಜಿ ಮೇಲೆ ಬಾಲಕಿಯರು ಆರೋಪ ಮಾಡಿದ್ದಾರೆ. ಈ ಕುರಿತು ಆ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ’ ಎಂದು ಒಡನಾಡಿ ಸಂಸ್ಥೆಯ ಪರಶುರಾಂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT