ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಮಾಹಿತಿ ಕಳವು: ಚಿಲುಮೆ ಸಂಸ್ಥಾಪಕ ರವಿಕುಮಾರ್ 12 ದಿನ ಪೊಲೀಸ್ ವಶಕ್ಕೆ

* ಚಿಲುಮೆ’ ಸಂಸ್ಥೆ ಸಂಸ್ಥಾಪಕ ರವಿಕುಮಾರ್ ಪೊಲೀಸ್ ಕಸ್ಟಡಿಗೆ * ಹೊರ ಜಿಲ್ಲೆಗಳಲ್ಲೂ ಮತದಾರರ ಸಮೀಕ್ಷೆ
Last Updated 21 ನವೆಂಬರ್ 2022, 19:33 IST
ಅಕ್ಷರ ಗಾತ್ರ

ಬೆಂಗಳೂರು: ಮತದಾರರ ವೈಯಕ್ತಿಕ ಮಾಹಿತಿ ಕಳವು ಹಾಗೂ ದುರ್ಬಳಕೆ ಆರೋಪದಡಿ ಬಂಧಿಸಲಾಗಿರುವ ‘ಚಿಲುಮೆ’ ಸಂಸ್ಥೆಯ ಸಂಸ್ಥಾಪಕ ರವಿಕುಮಾರ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ 12 ದಿನ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.

ಹಲಸೂರು ಗೇಟ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರು, ಲಾಲ್‌ಬಾಗ್ ಉದ್ಯಾನ ಬಳಿ ರವಿಕುಮಾರ್ ಅವರನ್ನು ಭಾನುವಾರ ರಾತ್ರಿ ಬಂಧಿಸಿದ್ದರು. ಸೋಮವಾರ ಬೆಳಿಗ್ಗೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಪೊಲೀಸರ ಮನವಿ ಮೇರೆಗೆ ಆರೋಪಿಯನ್ನು ಕಸ್ಟಡಿಗೆ ನೀಡಿತು.

ಸಂಸ್ಥೆ ಮಾಹಿತಿ ಬಾಯ್ಬಿಟ್ಟ ರವಿ ಕುಮಾರ್: ‘ಚಿಲುಮೆ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ವಿರುದ್ಧ ದೂರು ನೀಡಿದ್ದ ಬಿಬಿಎಂಪಿ ವಿಶೇಷ ಆಯುಕ್ತ (ಆಡಳಿತ ಹಾಗೂ ಚುನಾವಣೆ) ರಂಗಪ್ಪ, ಕೆಲ ದಾಖಲೆಗಳನ್ನು ಒದಗಿಸಿದ್ದಾರೆ. ಅವುಗಳನ್ನು ಮುಂದಿಟ್ಟು ಕೊಂಡು ರವಿಕುಮಾರ್ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸ್ಟೇಷನರಿ ಹಾಗೂ ಸ್ವಚ್ಛತಾ ಸಾಮಗ್ರಿ ಪೂರೈಸುತ್ತಿದ್ದ ರವಿಕುಮಾರ್ ಹಾಗೂ ಇತರರು, ಹಲವು ವರ್ಷಗಳ ಹಿಂದೆಯೇ ಬಿಬಿಎಂಪಿ ಅಧಿಕಾರಿಗಳನ್ನು ಪರಿಚಯಿಸಿಕೊಂಡಿದ್ದರು. ಬಿಬಿಎಂಪಿ ಕಚೇರಿಗಳಿಗೆ ಸ್ಟೇಷನರಿ ಹಾಗೂ ಸ್ವಚ್ಛತಾ ಸಾಮಗ್ರಿ ಪೂರೈಸುವ ಗುತ್ತಿಗೆ ಗಿಟ್ಟಿಸಿಕೊಂಡಿದ್ದರು. ಈ ಮೂಲಕ ಚಿಲುಮೆ ಸಂಸ್ಥೆ ಕೆಲಸಗಳು ಆರಂಭವಾಗಿದ್ದವು. ಬಿಬಿಎಂಪಿಯಲ್ಲಿ ಯಾವೆಲ್ಲ ಕೆಲಸಗಳಿಗೆ ಗುತ್ತಿಗೆ ನೀಡಲಾಗುತ್ತದೆ ಎಂಬುದನ್ನು ತಿಳಿದುಕೊಂಡು ಶಾಮಿಯಾನ, ಆಹಾರ ಪೂರೈಕೆ (ಕ್ಯಾಟರಿಂಗ್), ಐಟಿ ಸೇವೆ ಸಹ ಶುರು ಮಾಡಿದ್ದರು’ ಎಂದೂ ಮೂಲಗಳು ತಿಳಿಸಿವೆ.

ಚುನಾವಣೆ ಕೆಲಸಗಳ ಮೇಲೂ ಕಣ್ಣು: ‘ವಿಧಾನಸಭೆ, ಲೋಕಸಭೆ, ಬಿಬಿಎಂಪಿ ಚುನಾವಣೆ ಕೆಲಸಗಳ ಬಗ್ಗೆಯೂ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದ ರವಿಕುಮಾರ್ ಹಾಗೂ ಇತರರು, ಅಂಥ ಕೆಲಸಗಳನ್ನು ಗುತ್ತಿಗೆ ಪಡೆಯಲು ಮುಂದಾಗಿದ್ದರು. ಇದಕ್ಕೆ ಹಲವು ಅಧಿಕಾರಿಗಳು ಸಹಕಾರ ನೀಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಚಿಲುಮೆ ಸಂಸ್ಥೆಯಡಿ ‘ಚುನಾವಣೆ ನಿರ್ವಹಣೆ’ ವಿಭಾಗ ತೆರೆದಿದ್ದ ಆರೋಪಿ ಗಳು, ಮತ ಎಣಿಕೆ ಕೇಂದ್ರ, ಮಸ್ಟರಿಂಗ್ ಹಾಗೂ ಡಿ–ಮಸ್ಟರಿಂಗ್ ಕೇಂದ್ರಗಳ ಕೆಲಸದ ಗುತ್ತಿಗೆಯನ್ನೂ ತಮ್ಮದಾಗಿಸಿಕೊಳ್ಳುತ್ತಿದ್ದರು. ಈ ಮೂಲಕ ಆರೋಪಿಗಳು, ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗಲಾರಂಭಿಸಿದ್ದರು. ನಂತರ, ರಿಯಲ್ ಎಸ್ಟೇಟ್ ಸಹ ಮಾಡಲಾರಂಭಿಸಿದ್ದರು’ ಎಂದೂ ತಿಳಿಸಿವೆ.

ಮತ ಪಟ್ಟಿ ಪರಿಷ್ಕರಣೆ: ‘ಬಿಬಿಎಂಪಿ ವ್ಯಾಪ್ತಿಯ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡುವ ಕೆಲಸ ಕೈಗೊಳ್ಳಲು ಚಿಲುಮೆ ಸಂಸ್ಥೆಗೆ ಅನುಮತಿ ನೀಡಲಾಗಿತ್ತು. ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಹಾಗೂ ಮತದಾರರ ನೋಂದಣಾಧಿಕಾರಿ ಸಹಯೋಗದಲ್ಲಿ ಕೆಲಸ ಮಾಡಲು ಷರತ್ತು ವಿಧಿಸಲಾಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಷರತ್ತು ಉಲ್ಲಂಘಿಸಿದ್ದ ಸಂಸ್ಥೆಯ ಸಿಬ್ಬಂದಿ, ನಕಲಿ ಗುರುತಿನ ಚೀಟಿ ಇಟ್ಟುಕೊಂಡು ಮತದಾರರ ವೈಯಕ್ತಿಕ ಮಾಹಿತಿ ಸಂಗ್ರಹಿಸಿ ಮೊಬೈಲ್ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದರು. ಹೀಗೆ, ಸಂಗ್ರಹಿಸಿದ ಮಾಹಿತಿಯನ್ನೇ ಅವರು ಹಲವು ರಾಜಕಾರಣಿಗಳಿಗೆ ಮಾರುತ್ತಿದ್ದರು. ಈ ಸಂಗತಿ ಗೊತ್ತಾಗುತ್ತಿದ್ದಂತೆ ಅನುಮತಿ ರದ್ದುಪಡಿಸಿದ್ದ ಬಿಬಿಎಂಪಿ ಅಧಿಕಾರಿಗಳು, ಪೊಲೀಸ್ ಠಾಣೆಗೆ ದೂರು ನೀಡಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಕೆಲ ಅಧಿಕಾರಿ–ರಾಜಕಾರಣಿಗಳಿಗೆ ಬೇನಾಮಿ’

‘ಸರ್ಕಾರದ ವಿವಿಧ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಕೆಲ ಅಧಿಕಾರಿಗಳು ಹಾಗೂ ವಿವಿಧ ಪಕ್ಷಗಳ ಕೆಲ ರಾಜಕಾರಣಿಗಳು, ಚಿಲುಮೆ ಸಂಸ್ಥೆ ಮೂಲಕ ಬೇನಾಮಿ ವ್ಯವಹಾರ ನಡೆಸುತ್ತಿದ್ದ ಮಾಹಿತಿ ಇದೆ. ಈ ಸಂಬಂಧ ಪುರಾವೆಗಳನ್ನು ಸಂಗ್ರಹಿಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಲೋಕೇಶ್, ದಿವ್ಯಾ ಪತ್ತೆಗಾಗಿ ವಿಶೇಷ ತಂಡ’

‘ಸಂಸ್ಥೆಯಡಿ ಕೆಲಸ ಮಾಡುತ್ತಿದ್ದ ಕೆ.ಎಂ. ಲೋಕೇಶ್, ದಿವ್ಯಾ ಹಾಗೂ ಇತರೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗಾಗಿ ವಿಶೇಷ ತಂಡಗಳು ತನಿಖೆ ಚುರುಕುಗೊಳಿಸಿವೆ’ ಎಂದು ಪೊಲೀಸ್ ಮೂಲಗಳು ಹೇಳಿವೆ. ‘ಕೃತ್ಯಕ್ಕೆ ಸಹಕಾರಿ ಆಗುವ ರೀತಿಯಲ್ಲಿ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದ್ದ ಸಂಜೀವ್ ಶೆಟ್ಟಿ ಅವರನ್ನು ಈಗಾಗಲೇ ಬಂಧಿಸ ಲಾಗಿದೆ. ಆರೋಪಿ ದಿವ್ಯಾ, ಸಂಸ್ಥೆಯ ಜಾಲತಾಣ ಅಭಿವೃದ್ಧಿಪಡಿಸಿದ್ದರು’ ಎಂದೂ ತಿಳಿಸಿವೆ.

‘ಹಲವು ಕ್ಷೇತ್ರಗಳಲ್ಲಿ ಸಮೀಕ್ಷೆ’

‘ಹುಬ್ಬಳ್ಳಿ, ಕನಕಗಿರಿ, ದಾವಣಗೆರೆ ಹಾಗೂ ಇತರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೂ ವಿವಿಧ ಸಂಸ್ಥೆಗಳ ಮೂಲಕ ಮತದಾರರ ಸಮೀಕ್ಷೆ ಮಾಡಿಸಿರುವ ಮಾಹಿತಿ ಲಭ್ಯವಾಗಿದೆ. ಈ ಕ್ಷೇತ್ರದ ಮತದಾರರ ಮಾಹಿತಿ ದುರ್ಬಳಕೆ ಆಗಿದೆಯಾ? ಎಂಬುದನ್ನು ತಿಳಿಯಲು ಪ್ರತ್ಯೇಕ ತಂಡ ತನಿಖೆ ಆರಂಭಿಸಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಕೆಲ ಅಧಿಕಾರಿ, ರಾಜಕಾರಣಿಗಳಿಗೆ ಚಿಲುಮೆ ಸಂಸ್ಥೆ ಬೇನಾಮಿ’

‘ಸರ್ಕಾರದ ವಿವಿಧ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಕೆಲವು ಅಧಿಕಾರಿಗಳು ಹಾಗೂ ವಿವಿಧ ಪಕ್ಷಗಳ ಕೆಲ ರಾಜಕಾರಣಿಗಳು, ಚಿಲುಮೆ ಸಂಸ್ಥೆ ಮೂಲಕ ಬೇನಾಮಿ ವ್ಯವಹಾರ ನಡೆಸುತ್ತಿದ್ದ ಮಾಹಿತಿ ಇದೆ. ಈ ಸಂಬಂಧ ಪುರಾವೆಗಳನ್ನು ಸಂಗ್ರಹಿಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT