ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ: ಒಳನೋಟ ಲೇಖನಕ್ಕೆ ಪ್ರತಿಕ್ರಿಯೆಗಳು

Last Updated 4 ಸೆಪ್ಟೆಂಬರ್ 2022, 12:41 IST
ಅಕ್ಷರ ಗಾತ್ರ

‘ಶಿಕ್ಷಣ: ಲಂಚವೇ ಭೂಷಣ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ (ಸೆಪ್ಟೆಂಬರ್ 4) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರು ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.

***

‘ಉದ್ಯಮವಾಗುತ್ತಿರುವ ಶಿಕ್ಷಣ ಕ್ಷೇತ್ರ’
ಸರ್ಕಾರದ ಇತರ ಇಲಾಖೆಗಳಿಗಿಂತಲೂ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ, ಉಪ ನಿರ್ದೇಶಕರ ಕಚೇರಿ, ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ ಮಿತಿಮೀರಿದ ಭ್ರಷ್ಟಾಚಾರ ನಡೆಯುತ್ತದೆ. ಈ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಮತ್ತು ಬೋಧಕೇತರ ನೌಕರರು ಕನಿಷ್ಠ ಐದು ವರ್ಷ ಸೇವೆ ಮುಕ್ತಾಯವಾದ ನಂತರ ಶಾಲೆಗೆ ಹಿಂತಿರುಗಿ ತಮ್ಮ ಕಾರ್ಯವನ್ನು ಮುಂದುವರಿಸಬೇಕು. ಬಿಇಒ, ಡಿಡಿಪಿಐಗಳಾಗಿ ಕೆಲಸ ಮಾಡಿದ ಅಧಿಕಾರಿಗಳು ಮೂರು ವರ್ಷಗಳ ನಂತರ ’ಡಯಟ್‌’ನಲ್ಲಿ ಕೆಲಸ ಮಾಡುವಂತಾಗಬೇಕು. ಆದರೆ ಜಾತಿ ಮತ್ತು ದುಡ್ಡಿನ ಪ್ರಭಾವದಿಂದ ಡಿಡಿಪಿಐ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಅದೇ ಜಾಗದಲ್ಲಿ ಮುಂದುವರಿಯುತ್ತಿರುವುದು ಶಿಕ್ಷಣ ಕ್ಷೇತ್ರದಲ್ಲಿ ಭ್ರಷ್ಟಾಚಾರ ಹೆಚ್ಚಾಗಲು ಕಾರಣ. ಸರ್ಕಾರದ ಎಲ್ಲ ಅನುದಾನಗಳು ಅರ್ಹ ಫಲಾನುಭವಿಗಳನ್ನು ತಲುಪದಿರುವ ಪರಿಣಾಮ ಶಿಕ್ಷಣ ವಲಯ ಹಿಂದುಳಿಯಲು ಕಾರಣವಾಗಿದೆ. ಉತ್ತಮ ಸಮಾಜದ ನಿರ್ಮಾಣಕ್ಕೆ ಪೂರಕವಾಗಬೇಕಿದ್ದ ಶಿಕ್ಷಣ ವಲಯ ಇಂದು ಉದ್ಯಮವಾಗಿ ಬೆಳೆಯುತ್ತಿರುವುದು ಬೇಸರದ ಸಂಗತಿ.
–ಅರ್ಚನಾ ಆರ್, ಜಯನಗರ, ಬೆಂಗಳೂರು

**

‘ಲಂಚದ ಮುಖವಾಡ ಕಳಚಿ’
ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸರ್ಕಾರ ಮತ್ತು ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿರುವುದು ದುರಂತವೇ ಸರಿ. ಶಿಕ್ಷಕರ ನೇಮಕಾತಿ, ವರ್ಗಾವಣೆ, ಟೆಂಡರ್‌ಗಳಲ್ಲಿ, ಕಟ್ಟಡ ನಿರ್ಮಾಣ, ಮಾನವ ಸಂಪನ್ಮೂಲ ಸೇವೆಗಳಲ್ಲಿ ಭ್ರಷ್ಟಾಚಾರ ಸಾಮಾನ್ಯ. ಈ ವ್ಯವಸ್ಥೆ ಕೆಲವೇ ಜನರಿಗೆ ಸೀಮಿತವಾಗಿದ್ದು, ಕೋವಿಡ್‌ ನಂತರ ಬಯೋಮೆಟ್ರಿಕ್ ವ್ಯವಸ್ಥೆ ಮಾಯವಾಗಿ ಕೇವಲ ಮೋಜು ಮಸ್ತಿಯಲ್ಲಿ ತೊಡಗಿಸಿಕೊಂಡವರ ಹೆಡೆಮುರಿ ಕಟ್ಟುವುದು ಇಂದಿನ ಅನಿವಾರ್ಯ.
–ಜಿ ಬಿ ಹೊಳೆಮ್ಮನವರ್, ಸವಣೂರ ಹಾವೇರಿ ಜಿಲ್ಲೆ

**

‘ಶಿಕ್ಷಣ ಇಲಾಖೆಯಲ್ಲೂ ಭ್ರಷ್ಟಾಚಾರ’
ಕಾಮಗಾರಿ ಗುತ್ತಿಗೆಯಲ್ಲಿ ಶೇ 40ರಷ್ಟು ಲಂಚದ ಆರೋಪ ಸರ್ಕಾರವನ್ನು ಮುಜುಗರಕ್ಕೆ ತಂದಿದೆ. ಜತೆಗೆ ಶಿಕ್ಷಣ ಇಲಾಖೆಯಲ್ಲಿಯೂ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಸರ್ಕಾರ ಎಚ್ಚೆತ್ತುಕೊಂಡು ತನಿಖೆ ನಡೆಸಬೇಕು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಂತದಲ್ಲಿ ಲಂಚದ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೊಸ ಶಾಲೆಗಳ ಅನುಮತಿಗೆ ಆಯೋಗ ರಚನೆ ಮಾಡಬೇಕು. ಸರ್ಕಾರಿ ಶಾಲೆಯ ಶಿಕ್ಷಕರು ತರಗತಿಗಳ ಪರಿಶೀಲನೆ, ವಿದ್ಯಾರ್ಥಿಗಳ ಹಾಜರಾತಿಯ ನಿಖರ ಮಾಹಿತಿ ನೀಡಬೇಕು. ಈ ಕುರಿತು ಗಂಭೀರ ಚಿಂತನೆ ಅಗತ್ಯ.
–ರಾಘವೇಂದ್ರ ಎಸ್. ಭಕ್ರಿ, ಸುರಪುರ ತಾಲ್ಲೂಕು, ಯಾದಗಿರಿ ಜಿಲ್ಲೆ

‘ಅಂಗೈ ಹುಣ್ಣಿಗೆ ಕನ್ನಡಿ ಬೇಕೆ’
ಶಿಕ್ಷಣ ಇಲಾಖೆಯಲ್ಲಿ ಲಂಚ ಕೇಳಿಬರುತ್ತಿರುವುದು ಹೊಸತೇನಲ್ಲ. ಈಗ ಕಮಿಷನ್ ಹೆಚ್ಚಾಗಿದೆ ಅಷ್ಟೇ. ರುಪ್ಸಾ ಆರೋಪ ಆಧಾರ ರಹಿತವಾಗಿದ್ದು, ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ ಎಂಬ ಶಿಕ್ಷಣ ಸಚಿವರ ಹೇಳಿಕೆ ಹಾಸ್ಯಾಸ್ಪದ.

ನಿವೃತ್ತಿ ಪಡೆದ ಶಿಕ್ಷಕರ ಪಿಂಚಣಿ, ನಿವೃತ್ತಿ ವೇತನ ಪಡೆಯಲು ಕೂಡ ಲಂಚ ಕೊಡಬೇಕಾಗುರುವುದು ನಾಚಿಕೆಗೇಡಿನ ಸಂಗತಿ. ಲಂಚದ ವಿಷಯ ಮಾತಾಡುವಾಗ ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎಂಬಂತಾಗಿದೆ.
–ಸಿದ್ರಾಮಪ್ಪ ದಿನ್ನಿ, ಬೆಂಗಳೂರು

**

‘ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಿ’
ಶಾಲೆಗಳಲ್ಲಿ ಭ್ರಷ್ಟಾಚಾರ, ಲಂಚ ಮತ್ತು ಕಮಿಷನ್ ನಿರ್ಮೂಲನೆ ಮಾಡಲು ಸರ್ಕಾರ ಯೋಗ್ಯ ಪೊಲೀಸ್ ಅಧಿಕಾರಿಗಳನ್ನು ನೇಮಿಸಲಿ. ಅಧಿಕಾರಿಗಳು ತಾವು ಮಾಡುವ ಕೆಲಸದ ಬಗ್ಗೆ ಆನ್‌ಲೈನ್ ಮೂಲಕ ಜನರಿಗೆ ತಲುಪಿಸುವ ಕೆಲಸವಾಗಬೇಕು. ಇದರಿಂದ ವಿನಾಕಾರಣ ವರ್ಗಾವಣೆ ಮಾಡುವುದು ತಪ್ಪುತ್ತದೆ.
–ದಿವ್ಯಶ್ರೀ.ವಿ, ಬೆಂಗಳೂರು

**

‘ಶಿಕ್ಷಣ ಕ್ಷೇತ್ರದಲ್ಲೂ ಲಂಚ’
ಶಿಕ್ಷಣ ಕ್ಷೇತ್ರದಲ್ಲಿ ರಾಜಕಾರಣಿಗಳು ಮತ್ತು ಮಠಾಧಿಪತಿಗಳ ಹಸ್ತಕ್ಷೇಪವನ್ನು ತಡೆಗಟ್ಟಬೇಕು. ರಾಜಕೀಯ ಮತ್ತು ಜಾತಿ ವ್ಯವಸ್ಥೆ ಶಿಕ್ಷಣದಲ್ಲಿ ಬೇರೂರುತ್ತಿದೆ. ಸಚಿವರು ಮತ್ತು ಆಯಾ ಸಮುದಾಯದ ಮಠಾಧಿಪತಿಗಳು ತಮ್ಮ ಸಮುದಾಯದ ಗುತ್ತಿಗೆದಾರರನ್ನು ಮತ್ತು ಶಿಕ್ಷಕರನ್ನು ಬೆಳೆಸಲು ಪ್ರಭಾವ ಬೀರುತ್ತಿದ್ದಾರೆ. ರಾಜಕಾರಣಿಗಳ ಸಂಬಂಧಿಕರಿಗೆ ಟೆಂಡರ್ ನೀಡಿ ಕಮಿಷನ್ ಪಡೆಯಲಾಗುತ್ತಿದೆ.
–ಮೇಘರಾಜ್ ಕಬ್ಬಳ್ಳಿ, ವಿಜಯನಗರ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT