ಬುಧವಾರ, ಸೆಪ್ಟೆಂಬರ್ 28, 2022
27 °C
2021–22ರಲ್ಲಿ ಅರ್ಜಿ ಸಲ್ಲಿಸಿದವರ ಸಂಖ್ಯೆ 50 ಸಾವಿರಕ್ಕೂ ಹೆಚ್ಚು

ನೋಂದಣಿ ಲೋಪ: ಶುಲ್ಕ ಹಿಂಪಡೆಯಲು ಪರದಾಟ

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುದ್ರಾಂಕ ಕಾಗದ ಖರೀದಿ, ನೋಂದಣಿ ಶುಲ್ಕ ಪಾವತಿಯಲ್ಲಿನ ಲೋಪಗಳಿಂದ ರಾಜ್ಯದ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಆಸ್ತಿಗಳ ನೋಂದಣಿ ಸಾಧ್ಯವಾಗದೆ ಇರುವವರು ಹಣ ಹಿಂಪಡೆಯಲು ವರ್ಷಗಟ್ಟಲೆ ಬೆಂಗಳೂರಿಗೆ ಅಲೆದಾಡುವಂತಾಗಿದೆ.

ನೋಂದಣಿ ಸಮಯದ ಸಣ್ಣ, ಪುಟ್ಟ ಲೋಪಗಳ ಪರಿಣಾಮ 2021–22ನೇ ಸಾಲಿನಲ್ಲಿ ಹಣ ಮರಳಿಸುವಂತೆ ಅರ್ಜಿ ಸಲ್ಲಿಸಿದವರ ಸಂಖ್ಯೆ 50 ಸಾವಿರಕ್ಕೂ ಹೆಚ್ಚು. ಸರ್ಕಾರ ಮರುಪಾವತಿಸಬೇಕಾದ ಮೊತ್ತ ₹100 ಕೋಟಿಗೂ ಅಧಿಕ. ಎರಡು ವರ್ಷಗಳ ಹಿಂದೆ ಸಲ್ಲಿಕೆಯಾಗಿದ್ದ ಅರ್ಜಿಗಳು ಇನ್ನೂ ಇತ್ಯರ್ಥವಾಗಿಲ್ಲ. ಸುಮಾರು ₹300 ಕೋಟಿಗೂ ಅಧಿಕ ಮೊತ್ತ ಬಾಕಿ ಉಳಿದಿದೆ.

ಮನೆ, ನಿವೇಶನ, ಜಮೀನು, ವಾಣಿಜ್ಯ ಕಟ್ಟಡ ಸೇರಿ ಯಾವುದೇ ಸ್ಥಿರಾಸ್ತಿಗಳ ಖರೀದಿ, ಮಾರಾಟ ಒಪ್ಪಂದ, ಉಯಿಲು, ದಾನಪತ್ರಗಳ ನೋಂದಣಿಗೆ ಸಾರ್ವಜನಿಕರು ನಿಗದಿತ ಮದ್ರಾಂಕ, ನೋಂದಣಿ, ಸ್ಕ್ಯಾನಿಂಗ್ ಶುಲ್ಕ ಪಾವತಿಸಿ ನೋಂದಣಿ ಮಾಡಿಸಬೇಕು. ಗ್ರಾಮೀಣ ಪ್ರದೇಶದ ಆಸ್ತಿಗಳ ನೋಂದಣಿಗೆ ಆಸ್ತಿ ಮೌಲ್ಯದ ಶೇ 6.65, ನಗರ ಪ್ರದೇಶಗಳಿಗೆ ಶೇ 6.60ರಷ್ಟು ಶುಲ್ಕ ಪಾವತಿಸಬೇಕು.

ಶುಲ್ಕ ಪಾವತಿಸುವಾಗ ಆಯಾ ವ್ಯಾಪ್ತಿಯ ಉಪ ನೋಂದಣಾಧಿಕಾರಿ ಕಚೇರಿ ಖಾತೆಗೆ ಹಣ ಜಮೆ ಮಾಡಬೇಕು. ಪ್ರತಿ ಖಾತೆಗೂ  ಪ್ರತ್ಯೇಕ 16 ಸಂಖ್ಯೆಗಳು ಇರುತ್ತವೆ. ಒಂದು ಸಂಖ್ಯೆ ವ್ಯತ್ಯಾಸವಾದರೂ ಬೇರೆ ಉಪ ನೋಂದಣಾಧಿಕಾರಿ ಖಾತೆಗೆ ಜಮೆಯಾಗುತ್ತದೆ. ಜಮೆಯಾದ ಕಚೇರಿ ವ್ಯಾಪ್ತಿಯಲ್ಲಿ ಆಸ್ತಿ ಇರದ ಕಾರಣ ನೋಂದಣಿ ಆಗದು. ಆಗ ನೋಂದಣಿಗೆ ಮತ್ತೆ ಶುಲ್ಕ ಪಾವತಿಸಬೇಕು.

ನೋಂದಣಿದಾರರ ಹೆಸರು,  ಸರ್ವೆ ನಂಬರ್ ವ್ಯತ್ಯಾಸಗಳು ಮತ್ತಿತರ ಕಾರಣಗಳಿಗೂ ನೋಂದಣಿ ಪ್ರಕ್ರಿಯೆ ವ್ಯತ್ಯಯವಾಗಲಿದೆ. ಇಂತಹ ಪ್ರಕರಣಗಳಲ್ಲಿ ಹಣ ಮರಳಿ ಪಡೆಯಲು ಜಿಲ್ಲಾ ನೋಂದಣಾಧಿಕಾರಿಗೆ ಅರ್ಜಿ ಸಲ್ಲಿಸಬೇಕು. ದಾಖಲೆ ಪರಿಶೀಲನೆ ನಂತರ ಬೆಂಗಳೂರಿನ ನೋಂದಣಿ ಮಹಾ ಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರಿಗೆ ಕಳುಹಿಸಲಾಗುತ್ತಿದೆ. ಅಲ್ಲಿಂದ ಅನುಮತಿ ದೊರೆತ ನಂತರ ಸಂಬಂಧಿಸಿದವರ ಖಾತೆಗೆ ಹಣ ಜಮೆಯಾಗುತ್ತದೆ. ಈ ಪ್ರಕ್ರಿಯೆ ವಿಳಂಬದಿಂದ ಜನರು ಹೈರಾಣಾಗುತ್ತಿದ್ದಾರೆ.

‘ಬೆಂಗಳೂರಿನ ಪದ್ಮನಾಭನಗರದಲ್ಲಿ ಈಚೆಗೆ ಮನೆ ಖರೀದಿಸಿದ್ದೆವು. ಮುದ್ರಾಂಕ, ನೋಂದಣಿ ಶುಲ್ಕ ₹ 7.85 ಲಕ್ಷ ಪಾವತಿಸುವಾಗ ಸಿಬ್ಬಂದಿ ಮಾಡಿದ ತಪ್ಪಿನಿಂದ ಹಣ ಜಿಲ್ಲಾ ನೋಂದಣಾಧಿಕಾರಿ ಖಾತೆಗೆ ಜಮೆಯಾಗಿತ್ತು. ಮತ್ತೆ ಅಷ್ಟು ಹಣ ಹೊಂದಿಸಲು ಸಾಧ್ಯವಾಗದೆ ನೋಂದಣಿ ಮುಂದೂಡಿದೆವು. 16 ತಿಂಗಳ ಸತತ ಅಲೆದಾಟದ ನಂತರ ಕೊನೆಗೂ ಜಮೆಯಾಗಿದೆ. ಇಂತಹ ಸಮಸ್ಯೆಗೆ ತಕ್ಷಣ ಪರಿಹಾರ ದೊರಕುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ವೈದ್ಯರಾದ ಡಾ.ನಾಗರಾಜ್‌.

ಶೇ 20ರಷ್ಟು ಹಣ ಕಡಿತ

ನೋಂದಣಿ ಪ್ರಕ್ರಿಯೆ ರದ್ದಾದವರ ಮುದ್ರಾಂಕ ಶುಲ್ಕ ಮರಳಿಸುವಾಗ ಶೇ 20ರಷ್ಟು ಸರ್ಕಾರದ ಕಮಿಷನ್‌ ಕಡಿತಗೊಳಿಸಲಾಗುತ್ತಿದೆ. ಹಣಕ್ಕಾಗಿ ವರ್ಷಗಳವರೆಗೆ ಕಚೇರಿಗೆ ಅಲೆಯುವುದರ ಜತೆಗೆ, ಹಣವನ್ನೂ ಕಳೆದುಕೊಳ್ಳಬೇಕು. ಮೊದಲೇ ನೋಂದಣಿ ಶುಲ್ಕ ಅಧಿಕವಾಗಿದೆ ಎನ್ನುವುದು ನೋಂದಣಿದಾರರ ಅಳಲು.

ಸಾಕಾರಗೊಳ್ಳದ ಏಕಗವಾಕ್ಷಿ ಯೋಜನೆ

ರಾಜ್ಯದ ಯಾವುದೇ ಭಾಗದ ಆಸ್ತಿಯನ್ನು ಯಾವುದೇ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಲು ಅನುಕೂಲವಾಗುವಂತೆ ಏಕಗವಾಕ್ಷಿ ಯೋಜನೆ ಜಾರಿಗೆ ತರುವ ಸರ್ಕಾರದ ಯೋಜನೆ ಸಾಕಾರಗೊಂಡಿಲ್ಲ. ಬೆಂಗಳೂರಿನ ಶಿವಾಜಿನಗರ, ರಾಜಾಜಿನಗರ, ಜಯನಗರ, ಬಸವನಗುಡಿ, ಗಾಂಧಿನಗರ ವ್ಯಾಪ್ತಿಯಲ್ಲಿನ ಆಯಾ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಮಾತ್ರ ಈ ಸೌಲಭ್ಯ ಜಾರಿಯಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು