ಬುಧವಾರ, ಆಗಸ್ಟ್ 17, 2022
25 °C
ನುಡಿ ನಮನ

ಆರ್.ಎನ್.ಶೆಟ್ಟಿ ತಾವೂ ಬೆಳೆದರು, ಸಮುದಾಯವನ್ನೂ ಬೆಳೆಸಿದರು

ಡಾ.ಜಿ.ವಿ. ಜೋಶಿ Updated:

ಅಕ್ಷರ ಗಾತ್ರ : | |

Prajavani

ದೇಶದ ವಿವಿಧ ಭಾಷಿಕ ಸಮುದಾಯಗಳಿಗೆ ಹೋಲಿಸಿದರೆ ಕನ್ನಡ ಭಾಷಿಕ ಸಮುದಾಯದಲ್ಲಿ ಔದ್ಯಮಿಕ ಮನಸ್ಸುಗಳು ಕಡಿಮೆ ಎಂಬ ಮಾತು ಇದೆ. ಒಂದು ಹಂತದ ಮಟ್ಟಿಗೆ ಇದು ನಿಜವೂ ಹೌದು. ಆದರೆ, ಅಚ್ಚ ಕನ್ನಡದ ಪುಟ್ಟ ಹಳ್ಳಿಯೊಂದರಲ್ಲಿ ಜನಿಸಿ ನಾಡಿನ ದೊಡ್ಡ ಉದ್ಯಮಿಯಾಗಿ ಬೆಳೆದುನಿಂತ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು ರಾಮ ನಾಗಪ್ಪ ಶೆಟ್ಟಿ.

ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರ, ಶೆಟ್ಟಿ ಅವರ ಹುಟ್ಟೂರು. ಇಂದು ಅದು ನಾಡಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ ಎಂದಾದರೆ ಅದಕ್ಕೆ ಮುಖ್ಯ ಕಾರಣ ಶೆಟ್ಟಿ ಅವರ ಕರ್ತೃತ್ವ ಶಕ್ತಿ. ಆರ್‌.ಎನ್‌. ಶೆಟ್ಟಿ ಸಮೂಹದ ಮೂಲಕ ಶೆಟ್ಟಿ ಅವರು ಉದ್ಯೋಗವನ್ನೂ ನೀಡಿದರು, ಆ ಸಮೂಹದ ಮೂಲಕ ದುಡಿದ ಹಣವನ್ನು ಸಮಾಜಕ್ಕೆ ದಾನದ ರೂಪದಲ್ಲಿಯೂ ಕೊಟ್ಟರು. ಕನ್ನಡ ನಾಡಿನಲ್ಲಿ ಉದ್ಯಮಿಯಾಗಿ, ಉದ್ಯೋಗಶೀಲ ವ್ಯಕ್ತಿಯಾಗಿ, ಉದ್ಯೋಗದಾತರಾಗಿ, ಉದ್ಯೋಗಾರ್ಹತೆ ನೀಡಬಲ್ಲ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುವವರಾಗಿ, ವಾಸ್ತುಶಿಲ್ಪಿಯಾಗಿ ದೊಡ್ಡ ಹೆಸರು ಮಾಡಿದವರು ಶೆಟ್ಟಿ ಅವರು. ಅವರು ಬೆಳೆದು ನಿಂತ ಪರಿ ‘ಹನುಮದ್ವಿಕಾಸಕ್ಕೆ ಎಣೆ ಎಲ್ಲಿ’ ಎಂಬ ಮಾತನ್ನು ನೆನಪಿಸುವಂತೆ ಇದೆ. ಶೆಟ್ಟಿ ಅವರು ಈಗ ಕಣ್ಮರೆಯಾಗಿದ್ದಾರಾದರೂ, ನಾಡಿನ ಕಣ್ಮಣಿಯಾಗಿ ಖಂಡಿತ ಉಳಿಯಲಿದ್ದಾರೆ. ಏಕೆಂದರೆ, ಇಡೀ ರಾಜ್ಯದ ಯುವಸಮೂಹಕ್ಕೆ ಒಂದು ಮಾದರಿಯನ್ನು ಕಟ್ಟಿಕೊಟ್ಟ ವ್ಯಕ್ತಿ ಅವರು.

1970ರ ದಶಕದ ಪೂರ್ವಾರ್ಧದಲ್ಲಿ ನಾನು ಕಾರವಾರದಲ್ಲಿ ಪತ್ರಿಕಾ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾಗ ಶೆಟ್ಟಿ ಅವರಿಗೆ ಹತ್ತಿರದವನಾಗಿದ್ದೆ. ಸಮಾಜಮುಖಿ ಚಿಂತನೆಯೊಂದಿಗೆ, ವಿನಯಶೀಲರಾಗಿ ಅವರು ಏರಿದ ಎತ್ತರವನ್ನು ನೆನಪಿಸಿಕೊಂಡಾಗ ಹೆಮ್ಮೆಯ ಭಾವ ಮೂಡುತ್ತದೆ.

ಇಂದಿನ ಹೂಡಿಕೆದಾರರು ತಾವು ಹಣ ಹೂಡುವ ಕಂಪನಿಯು ವೈವಿಧ್ಯಮಯ ಕ್ಷೇತ್ರಗಳಲ್ಲಿ ವಹಿವಾಟು ಹೊಂದಿರಬೇಕು ಎಂದು ಬಯಸುತ್ತಾರೆ. ಸಾಮಾಜಿಕ ಕಾಳಜಿಯನ್ನೂ ಆ ಉದ್ಯಮ ಹೊಂದಿರಬೇಕು ಎಂದು ಬಯಸುವುದಿದೆ. ಈ ಎರಡು ಪ್ರಮುಖ ಗುಣಗಳನ್ನು ಆರ್.ಎನ್. ಶೆಟ್ಟಿ ಸಮೂಹ ಬಹಳ ಹಿಂದಿನಿಂದಲೂ ಮೈಗೂಡಿಸಿಕೊಂಡು ಬಂದಿದೆ. ನಿರ್ಮಾಣ ಕಾರ್ಯ, ಹೋಟೆಲ್ ಮತ್ತು ಆತಿಥ್ಯ ಉದ್ಯಮ, ಆರೋಗ್ಯ ಸೇವಾ ಉದ್ಯಮ, ಶಿಕ್ಷಣ, ಹೆಂಚು ಉದ್ಯಮ, ಸೆರಾಮಿಕ್‌ ತಯಾರಿಕೆ, ವಾಹನ ಮಾರಾಟ ಕ್ಷೇತ್ರ... ಹೀಗೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ಹಣ ಹೂಡಿಕೆ ಮಾಡಿ, ಸ್ಪರ್ಧೆಯನ್ನು ಎದುರಿಸಿ ಗೆದ್ದು ತೋರಿಸಿದ ಉದ್ಯಮಿ ಶೆಟ್ಟಿ.

ತಮ್ಮ ಅಪ್ರತಿಮ ಸಾಮರ್ಥ್ಯದಿಂದಲೇ ವಾರಾಹಿ ಜಲವಿದ್ಯುತ್ ಯೋಜನೆಯ ನಿರ್ಮಾಣ ಕೆಲಸಗಳನ್ನು ಪೂರೈಸಿ, ಗೇರುಸೊಪ್ಪೆ, ಸೂಪಾ ಜಲಾಶಯಗಳನ್ನು ನಿರ್ಮಿಸಿ ಶೆಟ್ಟಿ ಅವರು ಹೆಸರು ಮಾಡಿದ್ದರು. ಸೋಲದ ಬುದ್ಧಿಬಲವನ್ನು ಬಳಸಿಕೊಂಡು ಪಶ್ಚಿಮ ಕರಾವಳಿಯ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸುವ ಸವಾಲು ಸ್ವೀಕರಿಸಿದ್ದರು. ಇದೇ ಹೆದ್ದಾರಿಯ ಸನಿಹದಲ್ಲಿ ಸಾಗುವ ಕೊಂಕಣ ರೈಲು ಮಾರ್ಗಕ್ಕೆ ಅಗತ್ಯ ಸುರಂಗಗಳನ್ನು ನಿರ್ಮಿಸಿದ್ದರು. ಚಿಂತನೆಯಲ್ಲೂ, ಸಾಧನೆಯಲ್ಲೂ ವೈವಿಧ್ಯ ಮೆರೆದ ಶೆಟ್ಟಿ ಅವರು ಕಠಿಣ ಪರಿಶ್ರಮಕ್ಕೆ ಪರ್ಯಾಯ ಇಲ್ಲವೆಂಬುದನ್ನು ತೋರಿಸಿಕೊಟ್ಟ ಕೆಲವೇ ವ್ಯಕ್ತಿಗಳಲ್ಲಿ ಒಬ್ಬರು.

ಈಗ ಪ್ರಸಿದ್ಧ ಯಾತ್ರಾಸ್ಥಳವೂ ಪ್ರವಾಸಿ ಸ್ಥಳವೂ ಆಗಿ ಬೆಳೆದಿರುವ ಮುರ್ಡೇಶ್ವರವೊಂದೇ ಸಾಕು ಅವರ ಸಾಧನೆಗಳಿಗೆ ಪುರಾವೆ ಒದಗಿಸಲಿಕ್ಕೆ. ಮುರ್ಡೇಶ್ವರದಲ್ಲಿ ಅವರು ಮಾಡಿದ ಕೆಲಸಗಳು ಸಮಾಜಮುಖಿ ಚಿಂತನೆಯ ಮಹತ್ವವನ್ನು ಸಾರಿ ಹೇಳುತ್ತವೆ. ಅಲ್ಲಿ ಅವರು ಸೃಷ್ಟಿಸಿದ ಆಸ್ತಿ, ಅಲ್ಲಿನ ಸಮುದಾಯದ ನೆರವಿಗೆ ಬರುತ್ತಿದೆ. ಅಲ್ಲಿನವರ ಬದುಕಿಗೆ ಆಸರೆಯಾಗಿದೆ. ಮುರ್ಡೇಶ್ವರ ದೇವಾಲಯ ಅಸಂಖ್ಯಾತ ಭಕ್ತರನ್ನು ಆಕರ್ಷಿಸುತ್ತಿದೆ. ಅದು ಹಾಗೆ ಬೆಳೆಯುವುದರ ಹಿಂದೆ ಶೆಟ್ಟಿ ಅವರ ಶ್ರಮವಿದೆ. ಮುರ್ಡೇಶ್ವರದಲ್ಲಿರುವ 249 ಅಡಿಯ ರಾಜಗೋಪುರ ಏಷ್ಯಾದಲ್ಲೇ ಅತಿ ಎತ್ತರದ ಗೋಪುರ! ಇದು ಸಹಸ್ರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. 123 ಅಡಿ ಎತ್ತರದ ಶಿವನ ವಿಗ್ರಹ ದೇಶದಲ್ಲೇ ಅತಿ ಎತ್ತರದ್ದು. ಇದೂ ಕೂಡ ಪ್ರವಾಸಿ ಆಕರ್ಷಣೆಯ ಕೇಂದ್ರ. ಶೆಟ್ಟಿ ಅವರು ಧರ್ಮಭೀರು. ಧಾರ್ಮಿಕ ಉದ್ದೇಶದಿಂದ ಅವರು ಸೃಷ್ಟಿಸಿದ ಈ ಎಲ್ಲ ಆಸ್ತಿಗಳು, ತಮ್ಮ ಸುತ್ತಲಿನ ಸಮುದಾಯದ ಆರ್ಥಿಕ ಅಗತ್ಯಗಳನ್ನು ಪೊರೆಯುತ್ತಿವೆ. ಇದು ಉದ್ಯಮಿಯೊಬ್ಬ ತನ್ನ ಸುತ್ತಲಿನ ಸಮುದಾಯವನ್ನು ಬೆಳೆಸುವುದಕ್ಕೆ ಇರುವ ಉದಾಹರಣೆ. ಹುಟ್ಟೂರಿಗೆ ಹೇಗೆ ನೆರವಾಗಬೇಕೆನ್ನುವುದನ್ನು ಅವರು ತೋರಿಸಿ ಹೋಗಿದ್ದಾರೆ. ಔದಾರ್ಯ ಇರುವುದು ಹೇಳಲಿಕ್ಕೆ ಮಾತ್ರವೇ ಅಲ್ಲ; ಪಾಲಿಸಲಿಕ್ಕೆ ಕೂಡ ಎಂಬುದನ್ನು ಕೃತಿಯ ಮೂಲಕ ತಿಳಿಸಿಕೊಟ್ಟಿದ್ದಾರೆ.

ಶೆಟ್ಟಿ ಅವರು ಪ್ರಾರಂಭಿಸಿದ ಮಂಗಳೂರು ಟೈಲ್ಸ್, ಮುರ್ಡೇಶ್ವರ ಸೆರಾಮಿಕ್ಸ್, ಹುಬ್ಬಳ್ಳಿಯಲ್ಲಿ ಅತ್ಯಾಧುನಿಕ ಕಾರ್ಯಾಗಾರವನ್ನು ಹೊಂದಿದ ನವೀನ್ ಸ್ಟ್ರಕ್ಚರಲ್ ಆ್ಯಂಡ್ ಎಂಜಿನಿಯರಿಂಗ್ ಕಂಪನಿ ಉದ್ಯೋಗಾವಕಾಶ ಒದಗಿಸುತ್ತಿವೆ.

ಇದನ್ನೂ ಓದಿ... ಆರ್.ಎನ್.ಎಸ್. ಶಿಕ್ಷಣ ಮತ್ತು ಉದ್ಯಮ ಸಮೂಹಗಳ ಸ್ಥಾಪಕ ಆರ್.ಎನ್. ಶೆಟ್ಟಿ ನಿಧನ

1967ರಲ್ಲಿ ಏಳು ಗುತ್ತಿಗೆದಾರರ ಜತೆಗೆ ಅವರು ನವೀನ್ ಮೆಕೆನಾಯ್ಡ್ ಕನ್‌ಸ್ಟ್ರಕ್ಷನ್ ಕಂಪನಿ ಸ್ಥಾಪಿಸಿದರು. ಬೆಳಗಾವಿ ಜಿಲ್ಲೆಯ ಹಿಡ್ಕಲ್ ಅಣೆಕಟ್ಟು ನಿರ್ಮಿಸುವ ಗುತ್ತಿಗೆಯನ್ನು ಅದು ಪಡೆದಿತ್ತು. ಆದರೆ ಆ ಕಂಪನಿ ಮುಂದೆ ನಷ್ಟ ಅನುಭವಿಸಿತು. ಕಂಪನಿ ಹೆಚ್ಚು ಕಾಲ ಉಳಿಯುವ ಸ್ಥಿತಿ ಇರಲಿಲ್ಲ. ಕಂಪನಿಯನ್ನು ಉಳಿಸಲು ಇತರ ಪಾಲುದಾರರು ಶೆಟ್ಟಿಯವರಿಗೆ ತಮ್ಮ ಷೇರುಗಳನ್ನು ಮಾರಿದರು. ಮುಂದಿನ ಎಂಟು ವರ್ಷಗಳ ಅವಧಿಯಲ್ಲಿ ಶೆಟ್ಟಿ ಆ ಕಂಪನಿಯನ್ನು ಸರಿದಾರಿಗೆ ತಂದರು! ಉಳಿಯಲಾರದು ಎಂದು ಕೈಚೆಲ್ಲಿದ್ದರೆ, ಆ ಕಂಪನಿ ಮುಂದೆ ಹಲವು ನಿರ್ಮಾಣ ಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತಿರಲಿಲ್ಲ. ಸೋಲಿನಲ್ಲೂ ಗೆಲುವಿನ ಬೆಳಕನ್ನು ಕಾಣುವ ಗುಣ ಹೊಂದಿದ್ದ ಶೆಟ್ಟಿ ಅವರು ಈಗ ಕೀರ್ತಿಶೇಷರಾಗಿದ್ದಾರೆ. 

(ಲೇಖಕ: ರಾಜ್ಯ ಯೋಜನಾ ಮಂಡಳಿಯ ಮಾಜಿ ಸದಸ್ಯ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು