ಪ್ರಬಲರಿಗೆ ಮೀಸಲಾತಿ: ಹಿಂದುಳಿದವರಿಗೆ ಅನ್ಯಾಯ- ಹಿಂದುಳಿದ ವರ್ಗಗಳ ವೇದಿಕೆ ಕಳವಳ

ಬೆಂಗಳೂರು: ‘ಜನಬಲದ ಆಧಾರದ ಮೇಲೆ ಪ್ರಬಲ ಜಾತಿಗಳನ್ನು ಪ್ರವರ್ಗ 1 ಮತ್ತು ಪ್ರವರ್ಗ 2 (ಎ) ಪಟ್ಟಿಗೆ ಸೇರಿ ದರೆ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದ ಜಾತಿಗಳಿಗೆ ಅನ್ಯಾಯವಾಗುತ್ತದೆ’ ಎಂದು ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಕಳವಳ ವ್ಯಕ್ತಪಡಿಸಿದೆ.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಎಂ.ಸಿ. ವೇಣುಗೋಪಾಲ್, ‘ಸಂವಿಧಾನದ ಅಡಿ ಮೀಸಲಾತಿ ನೀಡಲು ಶೈಕ್ಷಣಿಕ ಮತ್ತು ಸಾಮಾಜಿಕ ಹಿನ್ನೆಲೆಯನ್ನು ಮಾನದಂಡವಾಗಿ ಪರಿಗಣಿಸಲಾಗಿದೆ. ಸರ್ಕಾರ ಅವೈಜ್ಞಾನಿಕವಾಗಿ ಪ್ರಬಲ ಸಮುದಾಯಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿದರೆ, ಹಿಂದುಳಿದ ಸಮುದಾಯಗಳ ಪಾಲು
ಬಲಿಷ್ಠರ ಪಾಲಾಗುತ್ತದೆ. ಪ್ರಸ್ತುತ ಪ್ರವರ್ಗ 2 (ಎ)ರಲ್ಲಿ 102 ಜಾತಿಗಳು ಇದ್ದು, ಶೇ 15ರಷ್ಟು ಮೀಸಲಾತಿ ನೀಡಲಾಗಿದೆ. 2 (ಎ) ಪ್ರವರ್ಗದಲ್ಲಿರುವ ಅನೇಕ ಸಮುದಾಯದ ಜನರು ಕುಶಲಕರ್ಮಿಗಳು ಮತ್ತು ಭೂಹೀನರು. ಇವರು ಕುಲಕಸಬುಗಳನ್ನು ನಂಬಿರುವವರು. ಇವರಿಗೆ ಇಲ್ಲಿಯವರೆಗೆ ಒಮ್ಮೆಯೂ ಮೀಸಲಾತಿ ಸೌಲಭ್ಯ ದೊರೆತಿಲ್ಲ. ಆದ್ದರಿಂದ ದುರ್ಬಲ ಮತ್ತು ಅಸಹಾಯಕ ಸಮುದಾಯಗಳನ್ನು ರಕ್ಷಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕು’ ಎಂದು ಹೇಳಿದರು.
‘ಪ್ರಬಲರ ಒತ್ತಾಯಕ್ಕೆ ಮಣಿದು, ಮೀಸಲಾತಿ ನೀಡಿದರೆ ಪ್ರವರ್ಗ 1 ಮತ್ತು ಪ್ರವರ್ಗ 2 (ಎ) ಪಟ್ಟಿಯಲ್ಲಿರುವ ಎಲ್ಲ 197 ಜಾತಿಗಳು ರಾಜ್ಯದಾದ್ಯಂತ ಬೀದಿಗಿಳಿದು ಹೋರಾಟ ಮಾಡಲಿವೆ. ಅವಶ್ಯಕತೆ ಬಿದ್ದರೆ ಕಾನೂನು ಹೋರಾಟವನ್ನೂ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.