ಸೋಮವಾರ, ಜನವರಿ 25, 2021
21 °C

ಕಂದಾಯ ನಿವೇಶನ ನೋಂದಣಿಗೆ ನಿರ್ಬಂಧ: ಪ್ರತಿಭಟನೆಗೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೊಮ್ಮನಹಳ್ಳಿ: ಕಂದಾಯ ನಿವೇಶನ ನೋಂದಣಿಗೆ ರಾಜ್ಯ ಸರ್ಕಾರ ನಿರ್ಬಂಧ ಹೇರಿರುವುದನ್ನು ಖಂಡಿಸಿ ಕಂದಾಯ ನಿವೇಶನದಾರರ ಸಂಘವು ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

‘ವಸತಿ ಸಂಕೀರ್ಣಗಳ ಬಿಲ್ಡರ್‌ಗಳ ಒತ್ತಡಕ್ಕೆ ಮಣಿದು ಸಚಿವ ಆರ್.ಅಶೋಕ ಅವರು ಕಂದಾಯ ನಿವೇಶನ ನೋಂದಣಿಗೆ ತಡೆ ನೀಡಿದ್ದು, ಈ ನಿರ್ಧಾರದಲ್ಲಿ ಯಾವುದೇ ಸದುದ್ದೇಶವಿಲ್ಲ’ ಸಂಘದ ಪದಾಧಿಕಾರಿಗಳು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು. 

‘ನಗರದ ಜನತೆಗೆ ವಸತಿ ಕಲ್ಪಿಸಬೇಕಾಗಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಗೃಹ ಮಂಡಳಿಗೆ ಈವರೆಗೆ ಶೇಕಡ 30 ರಷ್ಟು ಜನರಿಗೂ ವಸತಿ ನೀಡಲು ಸಾಧ್ಯವಾಗಿಲ್ಲ. ಇವುಗಳೂ ಈಗ ದುಬಾರಿಯಾಗಿವೆ. ಇದೀಗ ಕಂದಾಯ ನಿವೇಶನಗಳ ನೋಂದಣಿಗೆ ನಿರ್ಬಂಧ ಹೇರಿಕೆಯಿಂದ ಸ್ವಂತ ಸೂರು ಹೊಂದುವ ನಗರದ ಜನರ ಕನಸು ಕಮರಿ ಹೋಗಲಿದೆ’ ಎಂದರು.

‘ಆರ್ಥಿಕವಾಗಿ ಹಿಂದುಳಿದ ಜನರು ಬಿಡಿಎ ಅಥವಾ ಖಾಸಗಿ ಅನುಮೋದಿತ ಲೇಔಟ್‌ಗಳಲ್ಲಿ ದುಬಾರಿ ಬೆಲೆ ತೆತ್ತು ನಿವೇಶನ ಖರೀದಿಸಲು ಸಾಧ್ಯವಾಗದ ಸ್ಥಿತಿ ಇದೆ. ಇಂತಹ ಜನರು ಅನಿವಾರ್ಯವಾಗಿ ಕಂದಾಯ ನಿವೇಶನಗಳನ್ನು ಖರೀದಿಸುತ್ತಾರೆ. ಹೀಗಾಗಿ ನೋಂದಣಿಗೆ ನಿರ್ಬಂಧ ಹಾಕಿರುವ ಕ್ರಮವು ಬಡಜನ ವಿರೋಧಿಯಾಗಿದೆ’ ಎಂದು ಕರ್ನಾಟಕ ರೆವಿನ್ಯೂ ನಿವೇಶನದಾರರ ಸಂಘದ ಅಧ್ಯಕ್ಷ ಆರ್.ಪ್ರಭಾಕರ್ ರೆಡ್ಡಿ ದೂರಿದ್ದಾರೆ.

ಇದುವರೆಗೆ ನೋಂದಣಿಯಾಗಿರುವ ರೆವಿನ್ಯೂ ನಿವೇಶನಗಳನ್ನು ಸಕ್ರಮಗೊಳಿಸಬೇಕು. ರಾಜಸ್ವ ಶುಲ್ಕವನ್ನು ಶೇಕಡ 3 ರಷ್ಟು ಇಳಿಸಬೇಕೆಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಪ್ರತಿಭಟನೆ ನಡೆಯಲಿದೆ ಎಂದು ಹೇಳಿ
ದರು. ಉಪಾಧ್ಯಕ್ಷ ಎಚ್.ಇ.ಕೃಷ್ಣಪ್ಪ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು