ಸೋಮವಾರ, ಸೆಪ್ಟೆಂಬರ್ 26, 2022
22 °C
‘ಕರ್ನಾಟಕ ಭೂಕಂದಾಯ ಮಸೂದೆ 2022’ಕ್ಕೆ ಅಂಗೀಕಾರ

ಬಗರ್‌ಹುಕುಂ: ಅರ್ಜಿ ಅವಧಿ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಗರ್‌ ಹುಕುಂ ಸಾಗುವಳಿ ಮಾಡುತ್ತಿರುವ ಜಮೀನಿನ ಸಕ್ರಮಕ್ಕೆ ನಮೂನೆ 57 ರಡಿ ಅರ್ಜಿ ಸಲ್ಲಿಸಲು ಇನ್ನೂ ಒಂದು ವರ್ಷ ಅವಧಿ ವಿಸ್ತರಿಸುವ ಉದ್ದೇಶದ ‘ಕರ್ನಾಟಕ ಭೂಕಂದಾಯ (ತಿದ್ದುಪಡಿ) ಮಸೂದೆ 2022’ ಅನ್ನು ವಿಧಾನಸಭೆ ಶುಕ್ರವಾರ ಅಂಗೀಕರಿಸಿತು.

ರಾಜ್ಯ ಸರ್ಕಾರ ಮೇ 26 ರಂದು ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಿತ್ತು. ಒಂದು ವರ್ಷದ ಅವಧಿ ವಿಸ್ತರಣೆಯ ಕ್ರಮವನ್ನು ವಿಧಾನಸಭೆಯಲ್ಲಿ ಎಲ್ಲ ಪಕ್ಷಗಳ ಸದಸ್ಯರು ಸ್ವಾಗತಿಸಿದರು. 

2005 ರ ಜನವರಿ 1 ಕ್ಕೂ ಹಿಂದಿನಿಂದ ಸರ್ಕಾರಿ ಜಮೀನಿನಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಿರುವವರು ಸಕ್ರಮಕ್ಕೆ ಅರ್ಜಿ ಸಲ್ಲಿಸಲು 2018ರ ಮಾರ್ಚ್‌ 17 ರಿಂದ 2019ರ ಮಾರ್ಚ್‌ 16 ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಆಗ ಲೋಕಸಭೆಯ ಚುನಾವಣೆ ಘೋಷಣೆಯಾಗಿದ್ದರಿಂದಾಗಿ2019 ರ ಮಾರ್ಚ್‌ 10 ರಿಂದ ಅರ್ಜಿಸ್ವೀಕರಿಸಿರಲಿಲ್ಲ. ಅವಧಿಯನ್ನು ವಿಸ್ತರಿಸುವಂತೆ ಶಾಸಕರೂ ಮತ್ತು ಸಾರ್ವಜನಿಕರು ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಮತ್ತೆ ಅವಧಿ ವಿಸ್ತರಿಸಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ ವಿವರಿಸಿದರು.

ಗ್ರಾಮಾಂತರ ಮಟ್ಟದಲ್ಲಿ ಎಲ್ಲರಿಗೂ ಈ ಮಾಹಿತಿ ತಿಳಿಸಲು ತಹಶೀಲ್ದಾರ್‌ ಕಚೇರಿಗಳ ಬಳಿ ಜಾಹೀರಾತು ಫಲಕಗಳನ್ನು ಹಾಕಲಾಗುವುದು ಎಂದು ಅವರು ಭರವಸೆ ನೀಡಿದರು.

ಗೋಮಾಳ ಒತ್ತುವರಿ ಸಕ್ರಮಕ್ಕೆ ಶಾಸಕರ ಪಟ್ಟು:

ಗೋಮಾಳ ಜಮೀನಿನಲ್ಲಿ ರೈತರು ಅಕ್ರಮವಾಗಿ ಸಾಗುವಳಿ ಮಾಡುತ್ತಿರುವ ಜಮೀನನ್ನು ಸಕ್ರಮ ಮಾಡಿಕೊಡಬೇಕು ಎಂದು ಪಕ್ಷ ಭೇದ ಮರೆತ ಶಾಸಕರು ಸರ್ಕಾರವನ್ನು ಒತ್ತಾಯಿಸಿದರು.

ಗೋಮಾಳವನ್ನು ಮಠಗಳಿಗೆ ಮತ್ತು ಸರ್ಕಾರದ ವಿವಿಧ ಉದ್ದೇಶಗಳಿಗಾಗಿ ನೀಡಲಾಗುತ್ತಿದೆ. ಅಕ್ರಮ ಸಾಗುವಳಿ ನಡೆಸುತ್ತಿರುವ ರೈತರಿಗೆ ಏಕೆ ಕೊಡಬಾರದು ಎಂದು ಕಾಂಗ್ರೆಸ್‌ ಯತೀಂದ್ರ ಸಿದ್ದರಾಮಯ್ಯ, ಪುಟ್ಟರಂಗಶೆಟ್ಟಿ, ಬಿಜೆಪಿಯ ಗೂಳಿಹಟ್ಟಿ ಶೇಖರ್‌, ಮಾಡಾಳ್‌ ವಿರೂಪಾಕ್ಷಪ್ಪ, ಕುಮಾರ್‌ ಬಂಗಾರಪ್ಪ, ಜೆಡಿಎಸ್‌ನ ಕೃಷ್ಣಾರೆಡ್ಡಿ ಒತ್ತಾಯಿಸಿದರು.

ನಗರಪಾಲಿಕೆ ವ್ಯಾಪ್ತಿಯಿಂದ 10 ಕಿ.ಮೀ ದೂರದಲ್ಲಿರುವ ಸರ್ಕಾರಿ ಜಮೀನು ವಿವಿಧ ಉದ್ದೇಶಗಳಿಗೆ ಸ್ವಾಧೀನಪಡಿಸಿಕೊಳ್ಳುವಾಗ 50– 60 ವರ್ಷಗಳಿಂದ ಉಳುಮೆ ಮಾಡುತ್ತಿರುವ ರೈತರಿಗೆ ಎಕ್ಸ್‌ಗ್ರೇಷಿಯಾ ಅಥವಾ ಸೂಕ್ತ ಪರಿಹಾರ ಕೊಡಬೇಕು. ಪರಿಹಾರ ನೀಡದೇ ಇದ್ದರೆ, ರೈತರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಬಗರ್‌ಹುಕುಂ ಸಕ್ರಮ ಮಾಡುವ ಸಂದರ್ಭದಲ್ಲಿ ಶ್ರೀಮಂತರೇ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸುತ್ತಾರೆ. ಇದರಿಂದಾಗಿ ಬಡವರಿಗೆ ಲಾಭ ಸಿಗುತ್ತಿಲ್ಲ. ಬಡವರು ಹೆಚ್ಚು ಭೂಮಿ ಒತ್ತುವರಿ ಮಾಡುವುದಿಲ್ಲ. ಹಣವಂತರೇ ಹೆಚ್ಚು ಪ್ರಮಾಣದಲ್ಲಿ ಒತ್ತುವರಿ ಮಾಡುತ್ತಾರೆ ಇದಕ್ಕೊಂದು ಮಾರ್ಗಸೂಚಿ ರೂಪಿಸುವ ಅಗತ್ಯವಿದೆ. ಇಲ್ಲವಾದರೆ ಶ್ರೀಮಂತರು ಭೂಮಿಯನ್ನು ರಿಯಲ್ ಎಸ್ಟೇಟ್‌ ಉದ್ದೇಶಕ್ಕೆ ಬಳಸಿಕೊಳ್ಳುತ್ತಾರೆ ಎಂದು ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್ ಎಚ್ಚರಿಸಿದರು.

 ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ಮಸೂದೆಗೆ ಒಪ್ಪಿಗೆ:

ಹಣಕಾಸು ಸಂಸ್ಥೆಗಳು ಠೇವಣಿದಾರರಿಗೆ ವಂಚನೆ ಮಾಡಿದ ಅಪರಾಧವನ್ನು ಸಂಜ್ಞೇಯ ಮತ್ತು ಜಾಮೀನುರಹಿತ ಎಂದು ಪರಿಗಣಿಸಲು, ಎಲ್ಲ ಎಫ್‌ಐಆರ್‌ಗಳನ್ನು ವಿಲೀನಗೊಳಿಸಿ ಆರೋಪಿತ ಅಥವಾ ಅದೇ ಹಣಕಾಸು ಸಂಸ್ಥೆಯ ವಿರುದ್ಧ ಒಂದೇ ಪ್ರಕರಣ ದಾಖಲಿಸುವ ಉದ್ದೇಶದಿಂದ ‘ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ತಿದ್ದುಪಡಿ) ಮಸೂದೆ’ಗೆ ಒಪ್ಪಿಗೆ ನೀಡಲಾಯಿತು.

ಅಲ್ಲದೆ, ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲು ವಿಶೇಷ ನ್ಯಾಯಾಲಯಗಳಿಗೆ ಅಧಿಕಾರವೂ ಸಿಗಲಿದೆ. ಈ ಮಸೂದೆಯು ಸುಗ್ರೀವಾಜ್ಞೆಗೆ ಬದಲಿಯಾಗಿ ತಂದ ಮಸೂದೆಯಾಗಿದೆ ಎಂದು ಕಾನೂನು
ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು