ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ವೈಫಲ್ಯ ಮುಚ್ಚಿಹಾಕಲು ಬಿಎಸ್‌ವೈಯಿಂದ ರಾಜ್ಯದ ಹಿತ ಬಲಿ: ಸಿದ್ದರಾಮಯ್ಯ

Last Updated 3 ಸೆಪ್ಟೆಂಬರ್ 2020, 15:31 IST
ಅಕ್ಷರ ಗಾತ್ರ

ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ವೈಫಲ್ಯ ಮುಚ್ಚಿಹಾಕಲು ಯಡಿಯೂರಪ್ಪನವರುರಾಜ್ಯದ ಹಿತವನ್ನು ಬಲಿಗೊಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಜಿಎಸ್‌ಟಿ, ಕೊರೊನಾ ಸಂಕಷ್ಟ ಮತ್ತು ರಾಜ್ಯದಲ್ಲಿ ತಲೆದೋರಿರುವ ಪ್ರವಾಹ ಪರಿಸ್ಥಿತಿಗಳ ಬಗ್ಗೆ ಟ್ವೀಟ್‌ ಮಾಡಿರುವ ಅವರು ಕೇಂದ್ರ ಹಾಗೂ ರಾಜ್ಯಗಳ ವಿರುದ್ದ ಹರಿಹಾಯ್ದಿದ್ದಾರೆ.

'ಕೇಂದ್ರ ಸರ್ಕಾರದ ವಿಶ್ವಾಸದ್ರೋಹಕ್ಕೆ ತಲೆಬಾಗಿರುವ ಯಡಿಯೂರಪ್ಪನವರು, ಜಿಎಸ್‌ಟಿ ಪರಿಹಾರವನ್ನು ತುಂಬಿಕೊಳ್ಳಲು ಆರ್‌ಬಿಐನಿಂದ ಸಾಲ ಪಡೆಯಲು ತೀರ್ಮಾನಿಸುವ ಮೂಲಕ ರಾಜ್ಯದ ಜನತೆಯನ್ನು ಸಾಲದ ಶೂಲಕ್ಕೆ ಒಡ್ಡಿದ್ದಾರೆ' ಎಂದು ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

'ಸಾಲ ಮಾಡಿಯಾದರೂ ಕೊರೊನಾ ನಿಯಂತ್ರಿಸುತ್ತೇನೆ, ಪ್ರವಾಹ ಪೀಡಿತರಿಗೆ ಪರಿಹಾರ ನೀಡುತ್ತೇನೆ, ಸರ್ಕಾರಿ ನೌಕರರ ಸಂಬಳ ಕೊಡುತ್ತೇನೆ… ಎಂದು ಯಡಿಯೂರಪ್ಪನವರು ಪ್ರತಿಯೊಂದಕ್ಕೂ ಸಾಲದ ಮಂತ್ರ ಪಠಿಸುತ್ತಾ ಬಂದಿದ್ದಾರೆ. ಇವರೇನು ರಾಜ್ಯ ಸರ್ಕಾರವನ್ನು ದಿವಾಳಿ ಮಾಡಲು ತೀರ್ಮಾನಿಸಿದ್ದಾರೆಯೇ?' ಎಂದು ಅವರು ಪ್ರಶ್ನಿಸಿದ್ದಾರೆ.

'2020-21ರ ಅಂತ್ಯಕ್ಕೆ ರೂ.3,68,692 ಕೋಟಿ ಸಾಲದ ಅಂದಾಜನ್ನು ಬಿಎಸ್‌ವೈ ಬಜೆಟ್‌ನಲ್ಲಿ ಮಾಡಿದ್ದರು. ಈಗ ಕೊರೊನಾದಿಂದ ತೆರಿಗೆ ಸಂಗ್ರಹ ಕುಸಿದಿದೆ, ವಿತ್ತೀಯ ಕೊರತೆ ಹೆಚ್ಚಲಿದೆ, ಇವೆಲ್ಲದ್ದಕ್ಕೂ ಸಾಲ ಮಾಡಲು ಹೊರಟರೆ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಸಾಲದ ಮಿತಿ ಶೇ.25 ಅನ್ನು ಮೀರಲಾರದೇ?' ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಎಸ್‌ಟಿ ಪರಿಹಾರದ ಬಗ್ಗೆ ಉಲ್ಲೇಖಿಸಿರುವ ಸಿದ್ದರಾಮಯ್ಯ,'ಹೊಸ ಸಾಲದ ಹೊರೆ ರೂ.11,324 ಕೋಟಿಗಷ್ಟೇ ಸೀಮಿತವೇ? ಇದು ಒಟ್ಟು ಜಿಎಸ್‌ಟಿ ಪರಿಹಾರ 97,000 ಕೋಟಿಯಲ್ಲಿ ರಾಜ್ಯದ ಪಾಲು ಅಷ್ಟೆ. ಇದರ ಜೊತೆ ಕೊರೊನಾದಿಂದಾಗಿ ಜಿಎಸ್‌ಟಿ ಒಟ್ಟು ನಷ್ಟ ರೂ.2,35,000 ಕೋಟಿ ಎಂದು ಅಂದಾಜು ಮಾಡಲಾಗಿದೆ. ಇದನ್ನು ಕೇಂದ್ರ ತುಂಬಿಕೊಡಲಿದೆಯೇ? ರಾಜ್ಯವೇ ಸಾಲ‌ಮಾಡಬೇಕೇ?' ಎಂದು ಪ್ರಶ್ನೆ ಎತ್ತಿದ್ದಾರೆ.

'ಪ್ರಧಾನಿ ನರೇಂದ್ರ ಮೋದಿ ಅವರ ವೈಫಲ್ಯವನ್ನು ಮುಚ್ಚಿಹಾಕಲು ಬಿಎಸ್‌ವೈ ಅವರು ರಾಜ್ಯದ ಹಿತವನ್ನು ಬಲಿಗೊಡುತ್ತಿದ್ದಾರೆ. ರಾಜ್ಯ ಮತ್ತು‌ ಕೇಂದ್ರ ಸರ್ಕಾರ ಜನತೆಗೆ ಬಗೆದಿರುವ ದ್ರೋಹವನ್ನು‌ ಕಾಂಗ್ರೆಸ್ ಪಕ್ಷ ವಿಧಾನಮಂಡಲದ‌ ಅಧಿವೇಶನದಲ್ಲಿ ಬಿಚ್ಚಿಡಲಿದೆ' ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT