ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತದ ಧಾರಣೆ ಕುಸಿತ: ರೈತರ ಆತಂಕ

ಗುಣಮಟ್ಟದ ಕೊರತೆ: ಮಾರುಕಟ್ಟೆಯಲ್ಲಿ ವಾಡಿಕೆಗಿಂತ ಹೆಚ್ಚು ಆವಕ
Last Updated 14 ಮೇ 2022, 20:37 IST
ಅಕ್ಷರ ಗಾತ್ರ

ಯಾದಗಿರಿ: ಕಲ್ಯಾಣ ಕರ್ನಾಟಕ ಪ್ರದೇಶ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭತ್ತದ ಧಾರಣೆ ಕುಸಿದಿದೆ. ಭತ್ತದ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಡಿಮೆ ಬೆಲೆಗೆ ಭತ್ತ ಮಾರುವ ಸ್ಥಿತಿಗೆ ತಲುಪಿದ್ದು, ಭತ್ತ ಖರೀದಿ ಕೇಂದ್ರ ಆರಂಭಿಸಲು ಸರ್ಕಾರಕ್ಕೆ ಮೊರೆ ಇಟ್ಟಿದ್ದಾರೆ.

ಭತ್ತ ಹೆಚ್ಚು ಬೆಳೆಯುವ ರಾಯಚೂರು, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಹಿಂಗಾರು ಹಂಗಾಮಿನಲ್ಲಿ ರೈತರು ಎರಡನೇ ಬೆಳೆಯಾಗಿ ಭತ್ತ ಬೆಳೆದಿದ್ದಾರೆ. ಈಗಾಗಲೇ ಭತ್ತ ಕಟಾವು ಆಗಿದೆ. ದರ ಇಲ್ಲದ ಕಾರಣ ಜಮೀನಿನಲ್ಲೇ ರಾಶಿಯ ಕಣ ಉಳಿದಿದೆ.

ಭತ್ತದ ಎರಡನೇ ಬೆಳೆಯಲ್ಲಿ ಗುಣಮಟ್ಟದ ಕೊರತೆ ಮತ್ತು ಮಾರುಕಟ್ಟೆಯಲ್ಲಿ ವಾಡಿಕೆಗಿಂತ ಹೆಚ್ಚು ಭತ್ತ ಆವಕ ಆಗುತ್ತಿರುವ ಕಾರಣ ದರ ಕುಸಿದಿದೆ. ಬೇಡಿಕೆ ಇಲ್ಲದ ಕಾರಣ ವ್ಯಾಪಾರಸ್ಥರೂ ಭತ್ತ ಖರೀದಿಗೆ ಮುಂದಾಗಿಲ್ಲ ಎಂಬ ಮಾತು ವ್ಯಕ್ತವಾಗುತ್ತಿವೆ.

‘2021ರಲ್ಲಿ ಮುಂಗಾರಿನಲ್ಲಿ ಉತ್ತಮ ಬೆಳೆ ಬಂದರೆ, ಹಿಂಗಾರಿನಲ್ಲಿ ಬೆಳೆ ಹಾನಿಯಾಗಿತ್ತು. ಈ ವರ್ಷ ಎರಡೂ ಬೆಳೆ ಉತ್ತಮವಾಗಿವೆ. ನಿತ್ಯ 30 ಸಾವಿರ ಕ್ವಿಂಟಲ್ ಭತ್ತ ಮಾರುಕಟ್ಟೆಗೆ ಬರುತ್ತಿದೆ. ಅಕ್ಕಿ ಗಿರಣಿಗಳಿಗೆ ನೇರವಾಗಿ 10 ಸಾವಿರ ಕ್ವಿಂಟಲ್ ಭತ್ತ ಹೋಗುತ್ತಿದೆ’ ಎಂದು ರಾಯಚೂರು ಅಕ್ಕಿ ಗಿರಣಿಗಳ ಒಕ್ಕೂಟದ ಅಧ್ಯಕ್ಷ ಎ.ಪಾಪರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಯಚೂರು ಜಿಲ್ಲೆಯಲ್ಲಿ 2020–21ರಲ್ಲಿ ಭತ್ತದ ದರ ಪ್ರತಿ ಕ್ವಿಂಟಲ್‌ಗೆ ಗರಿಷ್ಠ ₹2860 ಇತ್ತು. 2021–22ರಲ್ಲಿ ದರ ಗರಿಷ್ಠ ₹2,680ಕ್ಕೆ ಕೊಂಚ ಕುಸಿದಿತ್ತು. ಸದ್ಯ ಪ್ರತಿ ಕ್ವಿಂಟಲ್‌ ಭತ್ತದ ದರ ಗರಿಷ್ಠ ₹1,945 ಇದೆ. ಸುಮಾರು ₹700ರಷ್ಟು ದರ ಕುಸಿದಿದೆ. ಕೊಪ್ಪಳ ಜಿಲ್ಲೆಯಲ್ಲಿ ಭತ್ತದ ದರ ಒಂದು ಮೂಟೆಗೆ ₹1,370 ರಿಂದ ₹ 1,380ರವರೆಗೆ ಕುಸಿದಿದೆ. ಈ ಮೊದಲು ದರವು
₹ 1,700ರಿಂದ ₹ 1,650 ಇತ್ತು.

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲೂ ದರ ಕುಸಿದಿದ್ದು, ಅಲ್ಲಿನ ಬೆಳೆಗಾರರೂ ಸಹ ಭತ್ತ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT