ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಫೋಟಕಗಳ ಮೂಲಗಳ ಮೇಲೆ ದಾಳಿ: 100 ಟನ್‌ ಸ್ಫೋಟಕ ವಶ

ಗಡಿಭಾಗದ ರಾಯದುರ್ಗದಿಂದ ರಾಜ್ಯದ ಬಹುತೇಕ ಜಿಲ್ಲೆಗಳ ಕ್ವಾರಿಗಳಿಗೆ ಸರಬರಾಜು
Last Updated 29 ಜನವರಿ 2021, 18:30 IST
ಅಕ್ಷರ ಗಾತ್ರ

ಶಿವಮೊಗ್ಗ: ಹುಣಸೋಡು ಸ್ಫೋಟಕ್ಕೆ ಪೂರೈಕೆಯಾದ ಸ್ಫೋಟಕಗಳ ಮೂಲ ಪತ್ತೆಹಚ್ಚಿರುವ ಜಿಲ್ಲಾ ಪೊಲೀಸರು ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಆಂಧ್ರಪ್ರದೇಶದರಾಯದುರ್ಗ ಸುತ್ತಮುತ್ತ ದಾಳಿ ನಡೆಸಿ, ಅಪಾರ ಪ್ರಮಾಣದ ಜಿಲೆಟಿನ್‌ ಕಡ್ಡಿಗಳು,ಡಿಟೊನೇಟರ್ ಮತ್ತಿತರ ಸಾಮಗ್ರಿಗಳನ್ನು ಜಪ್ತಿ ಮಾಡಿದ್ದಾರೆ.

ಹುಣಸೋಡು ಸ್ಫೋಟದ ನಂತರ ತನಿಖೆಗೆ ಆರು ತಂಡಗಳನ್ನು ರಚಿಸಲಾಗಿತ್ತು. ಎರಡು ತಂಡಗಳು ಜಿಲ್ಲೆಗೆ ಪೂರೈಕೆಯಾಗುವ ಸ್ಫೋಟಕಗಳ ಮೂಲ ಪತ್ತೆ ಮಾಡಲು ಕಾರ್ಯಾಚರಣೆ ಆರಂಭಿಸಿದ್ದವು. ಸ್ಫೋಟ ಸ್ಥಳದ ಸಮೀಪ ದೊರೆತಿದ್ದ ಕೆಲವು
ಜೀವಂತ ಜಿಲೆಟಿನ್‌ ಕಡ್ಡಿಗಳ ಮೇಲಿದ್ದ ಬ್ಯಾಚ್‌ ನಂಬರ್‌ಗಳು ತಯಾರಿಕಾ ಘಟಕಗಳನ್ನು ಪತ್ತೆ ಹಚ್ಚುವಲ್ಲಿ ಮಹತ್ವದ ಸುಳಿವು ನೀಡಿದ್ದವು. ಆಂಧ್ರಪ್ರದೇಶದ ಉನ್ನತಾಧಿಕಾರಿಗಳ ನೆರವು ಪಡೆದು, ಅಲ್ಲಿನ ಪೊಲೀಸರ ಸಹಕಾರದಿಂದ ದಾಳಿ ನಡೆಸಿದ್ದಾರೆ. ಮೂಲಗಳ ಪ್ರಕಾರ ಸುಮಾರು 100 ಟನ್‌ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.

ಗಡಿ ಭಾಗದ ರಾಯದುರ್ಗವೇ ಪ್ರಧಾನ ನೆಲೆ: ಶಿವಮೊಗ್ಗ ಜಿಲ್ಲೆ ಸೇರಿ ಕರ್ನಾಟಕದ ಬಹುತೇಕ ಭಾಗಗಳ ಕ್ವಾರಿಗಳಿಗೆ ಅನಂತಪುರಂ ಜಿಲ್ಲೆಯ ವಿವಿಧೆಡೆ ತಯಾರಾಗುವ ಸ್ಫೋಟಕಗಳು ಸರಬರಾಜಾಗುತ್ತವೆ. ಸ್ಥಳೀಯ ಗಣಿಗಾರಿಕೆಗೆ ಬಳಸಲು ಸೀಮಿತ ಅನುಮತಿ ಪಡೆದ ತಯಾರಕರು ಅಧಿಕ ಪ್ರಮಾಣದಲ್ಲಿ ಸಿದ್ಧಪಡಿಸಿ, ನೆರೆಯ ರಾಜ್ಯಗಳಿಗೆ ಅಕ್ರಮವಾಗಿ ಸಾಗಣೆ ಮಾಡುತ್ತಿರುವುದು ಗೊತ್ತಾಗಿದೆ.

ಹುಣಸೋಡಿಗೆ ಬಂದ ಲಾರಿ ಮಾರ್ಗವೂ ಪತ್ತೆ: ಹುಣಸೋಡಿಗೆ ಜನವರಿ 21ರ ರಾತ್ರಿ ಬಂದಿದ್ದ ಸ್ಫೋಟಕಗಳು ತುಂಬಿದ್ದ ಲಾರಿ ಸಾಗಿಬಂದ ಮಾರ್ಗವೂ ಖಚಿತವಾಗಿದೆ. ಅಪಾರ ಪ್ರಮಾಣದ ಜಿಲೆಟಿನ್‌ ಕಡ್ಡಿ ಮತ್ತಿತರ ಸಾಮಗ್ರಿ ಹೊತ್ತ ಲಾರಿ ಅಂದು ರಾಯದುರ್ಗದಿಂದ ಹೊರಟು ರಾಜ್ಯದ ಮೊಳಕಾಲ್ಮುರು, ಚಳ್ಳಕೆರೆ, ಚಿತ್ರದುರ್ಗ, ಹೊಳಲ್ಕೆರೆ, ಚನ್ನಗಿರಿ, ಹೊಳೆಹೊನ್ನೂರು ಮಾರ್ಗವಾಗಿ ರಾತ್ರಿ 9ಕ್ಕೆ ಶಿವಮೊಗ್ಗ ತಲುಪಿದೆ. ಲಾರಿಯ ಮುಂದೆ ಸಾಗಿದ್ದ ಜೀಪ್‌ಗಳು ದಾರಿಯಲ್ಲಿ ಬರುವ ಚೆಕ್‌ಪೋಸ್ಟ್‌ಗಳು, ಪೊಲೀಸರ ಮೇಲೆ ನಿಗಾ ವಹಿಸುತ್ತಾ ಸುರಕ್ಷಿತ ಸಂದೇಶ ನೀಡಿದ ನಂತರವೇ ಲಾರಿ ಸಾಗಿದೆ.

ಪತ್ತೆಯಾಗದ ಮೃತ ವ್ಯಕ್ತಿ ಗುರುತು

ಸ್ಫೋಟದಲ್ಲಿ ಮೃತಪಟ್ಟ ಆರು ಜನರಲ್ಲಿ ಐವರ ಗುರುತು ಪತ್ತೆಯಾಗಿದೆ. ಇನ್ನೊಬ್ಬರ ಗುರುತು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಅಂದು ಸ್ಫೋಟ ನಡೆದ ಸ್ಥಳದಲ್ಲಿದ್ದು, ನಾಪತ್ತೆಯಾಗಿರುವ ಭದ್ರಾವತಿಯ ಶಶಿಕುಮಾರ್ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅದಕ್ಕಾಗಿ ಡಿಎನ್‌ಎ ಪರೀಕ್ಷೆಗೆ ಮುಂದಾಗಿದ್ದಾರೆ. ಆದರೆ, ಕುಟುಂಬಸ್ಥರು ಅವನು ಬದುಕಿದ್ದಾನೆ ಎಂಬ ನಂಬಿಕೆಯಲ್ಲಿದ್ದಾರೆ.

ಮೃತರ ಕುಟುಂಬಗಳಿಗೆ ಪರಿಹಾರ ನಿರಾಕರಣೆ

ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹ 5 ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದರು. ಆದರೆ, ಮೃತಪಟ್ಟವರ ಮೇಲೂ ಸ್ಫೋಟಕಗಳ ಅಕ್ರಮ ಸಾಗಣೆಯಲ್ಲಿ ತೊಡಗಿದ್ದ ಆರೋಪ ಇರುವ ಕಾರಣ ತಕ್ಷಣಕ್ಕೆ ಪರಿಹಾರನೀಡಲು ಸಾಧ್ಯವಿಲ್ಲ.
ತನಿಖೆಯ ನಂತರ ಪರಿಹಾರ ನೀಡುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT