ಶನಿವಾರ, ಏಪ್ರಿಲ್ 1, 2023
23 °C

ಪ್ರಧಾನಿ ಕಚೇರಿಯಲ್ಲಿ ಆರ್‌ಎಸ್‌ಎಸ್‌ ಸಭೆ: ಉಗ್ರಪ್ಪ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ‘ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಹೆಚ್ಚಿಸುವ ಸಂಬಂಧ ಇತ್ತೀಚೆಗೆ ಪ್ರಧಾನಿ ಕಚೇರಿಯಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಮುಖಂಡರು ಸಭೆ ನಡೆಸಿದ್ದಾರೆ’ ಎಂದು ವಿ.ಎಸ್‌. ಉಗ್ರಪ್ಪ ಆರೋಪಿಸಿದರು.

'ಇತ್ತೀಚೆಗೆ ಖಾಸಗಿ ಸುದ್ದಿವಾಹಿನಿಯೊಂದು ನಡೆಸಿದ ಸಮೀಕ್ಷೆಯಲ್ಲಿ ನರೇಂದ್ರ ಮೋದಿಯವರ ಜನಪ್ರಿಯತೆ ಶೇ 64ರಿಂದ ಶೇ 24ಕ್ಕೆ ಕುಸಿದಿದೆ. ಇದರಿಂದ ಚಿಂತಕ್ರಾಂತರಾಗಿರುವ ಆರ್‌ಎಸ್‌ಎಸ್‌ನವರು ಪುನಃ ಮೋದಿ ವರ್ಚಸ್ಸು, ಜನಪ್ರಿಯತೆ ಹೆಚ್ಚಿಸಲು ಕಸರತ್ತು ನಡೆಸುತ್ತಿದ್ದಾರೆ. ಇದರ ಬದಲು ಜನರು ಬವಣೆ ನೀಗಿಸಲು ಶ್ರಮಿಸಿದ್ದರೆ ಉತ್ತಮ’ ಎಂದು ಸಲಹೆ ನೀಡಿದರು.

ರಾವಣನ ಲಂಕೆಯಲ್ಲಿ ಪೆಟ್ರೋಲ್‌ ಬೆಲೆ ₹57, ರಾಮನ ಭಾರತದಲ್ಲಿ ₹100
‘ರಾವಣನ ಲಂಕೆಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ ₹57 ಇದ್ದರೆ, ರಾಮನ ಜಪ ಮಾಡುವ ಭಾರತದಲ್ಲಿ ಅದರ ಬೆಲೆ ₹100 ಗಡಿ ದಾಟಿದೆ. ಇದು ಬಿಜೆಪಿಯ ರಾಮರಾಜ್ಯವೇ?’ ಹೀಗೆಂದು ಪ್ರಶ್ನಿಸಿದ್ದು ಮಾಜಿ ಸಂಸದ, ಕಾಂಗ್ರೆಸ್‌ ಮುಖಂಡ ವಿ.ಎಸ್‌. ಉಗ್ರಪ್ಪ. 

ಸೋಮವಾರ ನಗರದ ಬ್ಲಾಕ್‌  ಕಾಂಗ್ರೆಸ್‌ ಕಚೇರಿಯಲ್ಲಿ ಏರ್ಪಡಿಸಿದ್ದ ರಾಜೀವ್‌ ಗಾಂಧಿ ಪಂಚಾಯತ್‌ ರಾಜ್‌ ಸಂಘಟನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸೀತೆಯ ನೇಪಾಳದಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ ₹53, ನೆರೆಯ ಪಾಕಿಸ್ತಾನದಲ್ಲೂ ಅಷ್ಟೇ ಇದೆ’ ಎಂದು ಹೇಳಿದರು.

‘ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಿದ್ದಾಗ ಪೆಟ್ರೋಲ್‌, ಡೀಸೆಲ್‌ ದರ ₹70ರ ಗಡಿ ದಾಟಿರಲಿಲ್ಲ. ಪ್ರತಿ ಸಿಲಿಂಡರ್‌ ಬೆಲೆ ₹450ರೊಳಗೆ ಇತ್ತು. ಈಗ ಸಿಲಿಂಡರ್‌ ದರ ಸಾವಿರದ ಸನಿಹ ತಲುಪಿದೆ. ಅಡುಗೆ ಎಣ್ಣೆ ಬೆಲೆ, ಅಗತ್ಯ ವಸ್ತುಗಳ ದರ ಸೇರಿದಂತೆ ಎಲ್ಲವೂ ಗಗನಕ್ಕೆ ಏರಿದೆ. ಆದರೆ, ಬಿಜೆಪಿಯವರು ಉಡಾಫೆ ಮಾತುಗಳನ್ನು ಆಡುತ್ತಿದ್ದಾರೆ. ಹಾಳುಗೆಡವಿರುವ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಬೇಕು’ ಎಂದು ಹಕ್ಕೊತ್ತಾಯ ಮಾಡಿದರು.

‘ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರಿಗೆ ಬುದ್ಧಿಯಿಲ್ಲ. ಸದಾ ಸುಳ್ಳು ಮಾತುಗಳನ್ನು ಆಡುತ್ತಾರೆ. ಪ್ರತಿಯೊಂದರ ಮೇಲೆ ಕೇಂದ್ರ ಸರ್ಕಾರ ತೆರಿಗೆ ಹಾಕಿರುವುದರಿಂದ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಜನಸಾಮಾನ್ಯರು ಕಷ್ಟದಲ್ಲಿ ಬದುಕುತ್ತಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್‌ ದರ ತಗ್ಗಿದರೂ ನಮ್ಮ ದೇಶದಲ್ಲಿ ಇಳಿಕೆ ಮಾಡುತ್ತಿಲ್ಲ’ ಎಂದು ಆರೋಪಿಸಿದರು.

‘ಕೇಂದ್ರ, ರಾಜ್ಯ ಸರ್ಕಾರಗಳ ಬಳಿ ಯಾವುದೇ ಹೊಸ ಯೋಜನೆಗಳಿಲ್ಲ. ಕಾಂಗ್ರೆಸ್‌ ಜಾರಿಗೆ ತಂದಿರುವ ಯೋಜನೆಗಳ ಹೆಸರು ಬದಲಿಸಿ ತಮ್ಮದೆಂದು ಹೇಳಿಕೊಳ್ಳುತ್ತಿದ್ದಾರೆ. ಇದು ಅವರು ಅಧೋಗತಿಗೆ ಇಳಿದಿರುವುದನ್ನು ತೋರಿಸುತ್ತದೆ. ಜನಪರವಾದ ಒಂದು ಉತ್ತಮ ಕಾರ್ಯಕ್ರಮ ಮಾಡಲು ಆಗದ ಬಿಜೆಪಿಯವರು ಬೌದ್ಧಿಕವಾಗಿ ದಿವಾಳಿಯಾಗಿದ್ದಾರೆ ಎನ್ನುವುದು ಇದರಿಂದ ತಿಳಿಯಬಹುದು’ ಎಂದು ಹೇಳಿದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಜ್ಯ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ‘ಸಿದ್ದರಾಮಯ್ಯನವರು ಮುಖ್ಯಮಂತ್ರಿಯಿದ್ದಾಗ ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತಂದು, ಶಕ್ತಿ ತುಂಬುವ ಕೆಲಸ ಮಾಡಿದ್ದರು. ಆದರೆ, ಬಿಜೆಪಿಯವರು ಕುಂಟು ನೆಪ ಹೇಳಿ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಲು ಹಿಂದೇಟು ಹಾಕುತ್ತಿದ್ದಾರೆ. ಈ ವಿಷಯವಾಗಿ ಇತ್ತೀಚೆಗೆ ನ್ಯಾಯಾಲಯ ಕೂಡ ಛೀಮಾರಿ ಹಾಕಿದೆ. ಮಹಾನಗರ ಪಾಲಿಕೆಯ ಚುನಾವಣೆ ನಡೆಸಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಆದಷ್ಟು ಬೇಗ ನಡೆಸಬೇಕು’ ಎಂದು ಆಗ್ರಹಿಸಿದರು.

ಸಂಘಟನೆಯ ರಾಜ್ಯ ಸಂಚಾಲಕ ಡಿ.ಆರ್‌. ಪಾಟೀಲ ಮಾತನಾಡಿ, ‘ಗ್ರಾಮ ಸ್ವರಾಜ್ಯ ಗಾಂಧೀಜಿಯವರ ಕನಸು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಆ ಕನಸು ನನಸಾಗಬೇಕು. ಪಂಚಾಯಿತಿಗೆ ಹೆಚ್ಚಿನ ಅಧಿಕಾರ ಸಿಗಬೇಕು. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೆಲಸ ಮಾಡಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ವಿಜಯ್ ಸಿಂಗ್, ವೆಂಕಟರಾವ ಘೋರ್ಪಡೆ, ಬಿ.ವಿ. ಶಿವಯೋಗಿ, ಮೊಹಮ್ಮದ್‌ ಇಮಾಮ್‌ ನಿಯಾಜಿ, ವಿ. ಸೋಮಪ್ಪ, ಸಿ. ಬಸವರಾಜ, ಗುಜ್ಜಲ್‌ ನಾಗರಾಜ್‌, ನಿಂಬಗಲ್‌ ರಾಮಕೃಷ್ಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು