ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೆಡಿಎಸ್‌ ಸೇರಲು ಶಾಸಕ ತನ್ವೀರ್‌ ಸೇಠ್‌ಗೆ‌ ಸ್ವಾಗತ ಕೋರಿದ ಶಾಸಕ ಸಾ.ರಾ. ಮಹೇಶ್’

ಮೈತ್ರಿ ಗೊಂದಲಕ್ಕೆ ಸಿದ್ದರಾಮಯ್ಯ ಕಾರಣ
Last Updated 28 ಫೆಬ್ರುವರಿ 2021, 19:31 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಮೇಯರ್‌ ಚುನಾವಣೆ ಹಾಗೂ ಮೈತ್ರಿ ವಿಚಾರ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಗೊಂದಲಕ್ಕೆ ಸಿದ್ದರಾಮಯ್ಯ ಅವರೇ ನೇರ ಕಾರಣ ಎಂದಿರುವ ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌, ಶಾಸಕ ತನ್ವೀರ್‌ ಸೇಠ್‌ ಅವರನ್ನು ಕಾಂಗ್ರೆಸ್‌ನಿಂದ ವಜಾ ಮಾಡಿದರೆ ತಮ್ಮ ಪಕ್ಷಕ್ಕೆ ಸ್ವಾಗತಿಸುವುದಾಗಿ ಹೇಳಿದರು.

ತನ್ವೀರ್‌ ಅವರಿಗೆ ಜೆಡಿಎಸ್‌ ಟಿಕೆಟ್‌ ಕೊಡುತ್ತೀರಾ ಎಂಬ ವಿಚಾರಕ್ಕೆ, ‘ಮೊದಲು ಅವರು ಪಕ್ಷಕ್ಕೆ ಬರಲಿ. ಅಲ್ಪಸಂಖ್ಯಾತ ಮುಖಂಡರಾಗಿರುವ ಅವರು ಯಾವುದೇ ಪಕ್ಷದಲ್ಲಿ ಇದ್ದರೂ ಗೌರವಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಪದೇ ಪದೇ ಜೆಡಿಎಸ್‌ ಹಾಗೂ ಕುಮಾರಣ್ಣನನ್ನು ಹೀಯಾಳಿಸಿದ ಕಾರಣಕ್ಕೆ ಪಾಲಿಕೆಯಲ್ಲಿ ಕಾಂಗ್ರೆಸ್‌ ಜೊತೆಗಿನ ಮೈತ್ರಿ ಮುರಿದುಕೊಳ್ಳಲು ಮುಂದಾದೆವು. ಅವರ ತವರು ಮೈಸೂರಿನಲ್ಲೇ ಜೆಡಿಎಸ್‌ ಶಕ್ತಿ ಏನೆಂದು ತೋರಿಸಿದ್ದೇವೆ. ಇದು ಸ್ಯಾಂಪಲ್‌ ಅಷ್ಟೆ. ಆ ಪಕ್ಷದ ಇನ್ನುಳಿದ ಯಾವುದೇ ನಾಯಕರ ಬಗ್ಗೆ ನಮ್ಮ ತಕರಾರು ಇಲ್ಲ’ ಎಂದರು.

‘ಮೈತ್ರಿ ಮುಂದುವರಿಸಿ ಮೇಯರ್‌ ಸ್ಥಾನ ಬಿಟ್ಟುಕೊಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೊದಲು ಆಹ್ವಾನ ನೀಡಿದರು. ನನ್ನ ಹಾಗೂ ಕುಮಾರಸ್ವಾಮಿ ಜತೆಗೆ ಎರಡು ಬಾರಿ ಕರೆ ಮಾಡಿ, ಮಾತನಾಡಿದರು. ಮತ್ತೊಮ್ಮೆ ಕರೆ ಸ್ವೀಕರಿಸಲು ಸಾಧ್ಯವಾಗಲಿಲ್ಲ. ಚುನಾವಣೆಗೆ ಕೆಲವೇ ನಿಮಿಷಗಳು ಇದ್ದಾಗ ಮೇಯರ್‌ ಸ್ಥಾನ ಬಿಟ್ಟುಕೊಡುವುದಾಗಿ ತನ್ವೀರ್‌ ಹೇಳಿದರು’ ಎಂದು ಬಹಿರಂಗಪಡಿಸಿದರು.

‘ಕಾಂಗ್ರೆಸ್‌ ಅಥವಾ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳದಿದ್ದರೂ ಜೆಡಿಎಸ್‌ಗೆ ಮೇಯರ್‌ ಪಟ್ಟ ಸಿಗುತಿತ್ತು. ಹೀಗಾಗಿ, ಸ್ವತಂತ್ರವಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದೆವು. ಆದರೆ, ನಮ್ಮ ಪಕ್ಷದ ಶಾಸಕ ಜಿ.ಟಿ.ದೇವೇಗೌಡ ಹಾಗೂ ವಿಧಾನ ಪರಿಷತ್‌ ಸದಸ್ಯ ಸಂದೇಶ್‌ ನಾಗರಾಜ ಮತದಾನದಿಂದ ದೂರ ಉಳಿದರು. ಈ ವಿಚಾರವಾಗಿ ಚುನಾವಣೆಯ ಹಿಂದಿನ ರಾತ್ರಿ ತನ್ವೀರ್‌ ಕೂಡ ಸಂದೇಶ ಕಳುಹಿಸಿದ್ದರು. ಇವರಿಬ್ಬರು ಬಿಜೆಪಿ ಜೊತೆ ಹೋಗಬಹುದೆಂಬ ಕಾರಣಕ್ಕೆ ಜೆಡಿಎಸ್‌ನ ಪಾಲಿಕೆ ಸದಸ್ಯರು ಕೊನೆ ಕ್ಷಣದಲ್ಲಿ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಉದ್ಭವಿಸಿತು’ ಎಂದು ವಿವರಿಸಿದರು.

‘ಮುಂದಿನ ಬಾರಿ ಕಾಂಗ್ರೆಸ್‌ಗೆ ಮೇಯರ್‌ ಸ್ಥಾನ ಬಿಟ್ಟುಕೊಡುತ್ತೇವೆ. ಆದರೆ, ಸಿದ್ದರಾಮಯ್ಯ ಅವರು ತಮ್ಮ ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಳ್ಳಬೇಕು’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT