ಶುಕ್ರವಾರ, ಮಾರ್ಚ್ 31, 2023
22 °C
ಸ್ಯಾಂಟ್ರೊ ರವಿ ವಿರುದ್ಧ ವಾಟ್ಸ್‌ಆ್ಯಪ್ ಪುರಾವೆ

ವರ್ಗಾವಣೆ ದಂಧೆ: 2022ರ ಮೊದಲ ವರ್ಗಾವಣೆ ಸಂಭ್ರಮಿಸಿದ್ದ ಸ್ಯಾಂಟ್ರೊ ರವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪರಿಶಿಷ್ಟ ಸಮುದಾಯದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಹಲ್ಲೆ ಮಾಡಿ ಕೊಲೆ ಬೆದರಿಕೆಯೊಡ್ಡಿದ್ದ ಪ್ರಕರಣದ ಆರೋಪಿ ಕೆ.ಎಸ್‌. ಮಂಜುನಾಥ್ ಅಲಿಯಾಸ್‌ ಸ್ಯಾಂಟ್ರೊ ರವಿ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿದ್ದನೆಂಬ ಆರೋಪ ಕೇಳಿಬಂದಿದೆ.

ಸ್ಯಾಂಟ್ರೊ ರವಿ ವಿರುದ್ಧ ಮೈಸೂರು ವಿಜಯನಗರ ಠಾಣೆಗೆ ಜ. 2ರಂದು ದೂರು ನೀಡಿರುವ ಎರಡನೇ ಪತ್ನಿ, ವಾಟ್ಸ್ಆ್ಯಪ್‌ ಸಂದೇಶ ಹಾಗೂ ಸ್ಟೇಟಸ್‌ಗಳನ್ನು ಪುರಾವೆಯಾಗಿ ನೀಡಿದ್ದಾರೆ. ಆರೋಪಿ ರವಿ ತನ್ನ ಸ್ಟೇಟಸ್‌ಗಳಲ್ಲಿ ವರ್ಗಾವಣೆಗೆ ಸಂಬಂಧಪಟ್ಟಂತೆ ಹಲವು ಮಾಹಿತಿ ಹಂಚಿಕೊಂಡಿದ್ದಾನೆ.

‘ವಿಜಯನಗರದ ನಾಲ್ಕನೇ ಹಂತದಲ್ಲಿರುವ ಮನೆಯಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಎಂಟರ್‌ಪ್ರೈಸಸ್’ ಹೆಸರಿನ ಕಚೇರಿ ತೆರೆದಿದ್ದ ಸ್ಯಾಂಟ್ರೊ ರವಿ, ತಾನೊಬ್ಬ ಫೈನಾನ್ಶಿಯರ್ ಎಂಬುದಾಗಿ ಹೇಳಿಕೊಳ್ಳುತ್ತಿದ್ದ. ‘ಕೆ.ಎಸ್. ಮಂಜುನಾಥ್, ಬಿ.ಎ, ಫೈನಾನ್ಶಿಯರ್’ ಎಂಬ ಫಲಕವನ್ನೂ ಕಚೇರಿಯಲ್ಲಿ ನೇತು ಹಾಕಿದ್ದ’ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಮೇಲ್ನೋಟಕ್ಕೆ ಕಚೇರಿ ಹೊಂದಿದ್ದ ರವಿ, ತೆರೆಮರೆಯಲ್ಲಿ ರಾಜಕಾರಣಿಗಳು ಹಾಗೂ ಅವರ ಕುಟುಂಬದವರ ಜೊತೆ ಒಡನಾಟವಿಟ್ಟುಕೊಂಡು ವರ್ಗ ಮಾಡಿಸುತ್ತಿದ್ದನೆಂಬ ಆರೋಪ ಎದುರಿಸುತ್ತಿದ್ದಾನೆ. ವೇಶ್ಯಾವಾಟಿಕೆ ಹಾಗೂ ಹಣವೇ ವರ್ಗಾವಣೆಯ ಅಸ್ತ್ರವಾಗಿತ್ತೆಂಬುದನ್ನು ಪುರಾವೆಗಳು ಹೇಳುತ್ತಿವೆ.

‘ಅತ್ಯಾಚಾರ, ಹಲ್ಲೆ, ಜೀವ ಬೆದರಿಕೆ, ವರದಕ್ಷಿಣೆ ಕಿರುಕುಳ ಪ್ರಕರಣ ಸಂಬಂಧ ಸಂತ್ರಸ್ತೆ ದೂರು ನೀಡಿದ್ದಾರೆ. ಅದರನ್ವಯ ಮಾತ್ರ ಎಫ್ಐಆರ್‌ ದಾಖಲಿಸಿಕೊಳ್ಳಲಾಗಿದೆ. ಉಳಿದಂತೆ, ವರ್ಗಾವಣೆ ಹಾಗೂ ವೇಶ್ಯಾವಾಟಿಕೆ ಆಯಾಮದಲ್ಲಿ ತನಿಖೆ ನಡೆಸುವುದು ನಮ್ಮ ವ್ಯಾಪ್ತಿಗೆ ಮೀರಿದ್ದು’ ಎಂದು ಮೈಸೂರು ಕಮಿಷನರೇಟ್‌ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

2022ರಲ್ಲಿ ರಾಜ್ಯದ ಹಲವು ಪಿಎಸ್‌ಐಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಸಿಬ್ಬಂದಿ ಮಂಡಳಿ ಆದೇಶ ಹೊರಡಿಸಿತ್ತು. ಆದೇಶ ಪ್ರತಿಯನ್ನು ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದ ಸ್ಯಾಂಟ್ರೊ ರವಿ, ‘ಇದು ನನ್ನ ಕೆಲಸ. 2022ರ ಮೊದಲ ಜಯ’ ಎಂಬುದಾಗಿ ಬರೆದುಕೊಂಡು ಸಂಭ್ರಮಿಸಿದ್ದ.

ವರ್ಗಾವಣೆ ಆದೇಶ ಪತ್ರದಲ್ಲಿದ್ದ ಪಿಎಸ್‌ಐ ಡಿ. ರವಿಕುಮಾರ್ (ಮಂಡ್ಯ ಜಿಲ್ಲೆಯ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಿಂದ ಹಲಗೂರು ಪೊಲೀಸ್ ಠಾಣೆಗೆ ವರ್ಗ) ಹೆಸರನ್ನು ಗುರುತು ಮಾಡಿದ್ದ. ಈ ವರ್ಗಾವಣೆಗೂ ರವಿಗೂ  ಸಂಬಂಧವೇನು? ಎಂಬುದು ತನಿಖೆಯಿಂದಲೇ ತಿಳಿಯಬೇಕಿದೆ.

ಶಿವಮೊಗ್ಗ ಕೇಂದ್ರ ಕಾರಾಗೃಹ ಅಧೀಕ್ಷಕ ಮಹೇಶ್‌ಕುಮಾರ್ ಜಿಗಣಿ ಅವರನ್ನು ಬೆಂಗಳೂರು ಕೇಂದ್ರ ಕಾರಾಗೃಹದ ಅಧೀಕ್ಷಕಿ ಲತಾ ಅವರ ಜಾಗಕ್ಕೆ ವರ್ಗಾಯಿಸಲು ಕೋರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರು ಪತ್ರ ಬರೆದಿದ್ದರು. ಅದನ್ನು ಉಲ್ಲೇಖಿಸಿ ಕಾರಾಗೃಹ ಇಲಾಖೆಯ ಡಿಜಿಪಿಯವರಿಗೆ ನಿರ್ದೇಶನ ನೀಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ, ವರ್ಗಾವಣೆ ಮಾಡುವಂತೆ ಸೂಚಿಸಿದ್ದರು. ಈ ಪತ್ರವನ್ನೂ ಸ್ಯಾಂಟ್ರೊ, ‘ವಿಕ್ಟರಿ’ ಎಮೋಜಿ ಸಹಿತವಾಗಿ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದ.

‘ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಕೃಷ್ಣಮೂರ್ತಿ ಬಿ. ಕುಲಕರ್ಣಿ ಅವರನ್ನು ಅದೇ ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾಯಿಸಲಾಗಿದೆ’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿತ್ತು. ಇದರ ಆದೇಶವನ್ನೂ ವಿಕ್ಟರಿ ಎಮೋಜಿ ಸಮೇತ ಹಾಕಿಕೊಂಡಿದ್ದ. ಕೃಷ್ಣಮೂರ್ತಿ ಅವರೇ ಸದ್ಯ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಯಾಗಿದ್ದು, ಇವರ ವರ್ಗಾವಣೆಯಲ್ಲಿ ರವಿ ಪಾತ್ರವೇನು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಸಚಿವರ ನಂಟು: ತನಿಖೆಗೆ ಕಾಂಗ್ರೆಸ್ ಆಗ್ರಹ
ಬೆಂಗಳೂರು: ಸ್ಯಾಂಟ್ರೊ ರವಿ ಜತೆಗೆ ಬಿಜೆಪಿ ಸರ್ಕಾರದ ಸಚಿವರು ಹೊಂದಿರುವ ನಂಟಿನ ಕುರಿತು ಲೋಕಾಯುಕ್ತ ಅಥವಾ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

ರವಿ ಬಂಧನದ ಬಳಿಕ ಕೆಪಿಸಿಸಿ ಅಧಿಕೃತ ಟ್ವಿಟರ್‌ ಖಾತೆಯಿಂದ ಸರಣಿ ಟ್ವೀಟ್‌ ಮಾಡಿದ್ದು, ‘ಆತನ ಪತ್ನಿ ನೀಡಿದ್ದ ದೂರಿನ ಆಧಾರದಲ್ಲಿ ರವಿಯ ಬಂಧನವಾಗಿದೆ. ಇದಕ್ಕೆ ಸರ್ಕಾರದ ದೂರು ಕಾರಣವಲ್ಲ. ವರ್ಗಾವಣೆ ದಂಧೆಯ ಬಗ್ಗೆ ಇನ್ನೂ ತನಿಖೆ ಆರಂಭವಾಗಿಲ್ಲ. ಸಚಿವರು ಮತ್ತು ಸರ್ಕಾರದ ಜತೆಗಿನ ಆತನ ನಂಟು ಹಾಗೂ ವರ್ಗಾವಣೆ ದಂಧೆ ಕುರಿತು ತನಿಖೆ ನಡೆಸಬೇಕು’ ಎಂದು ಒತ್ತಾಯಿಸಲಾಗಿದೆ.

‘ಎಲ್ಲ ಸಾಕ್ಷ್ಯಗಳನ್ನೂ ನಾಶಪಡಿಸಿದ ಬಳಿಕ ಸರ್ಕಾರದ ಮುಖ್ಯ ಬ್ರೋಕರ್‌, ಬಿಜೆಪಿ ಮುಖಂಡ ಸ್ಯಾಂಟ್ರೊ ರವಿಯ ಬಂಧನ ನಾಟಕ ನಡೆಸಿದೆ. ಆತನನ್ನು ಗುಜರಾತಿನಲ್ಲಿ ಬಂಧಿಸಲಾಗಿದೆ. ಆತ ಗುಜರಾತಿಗೆ ಹೋಗಿದ್ದು ಹೇಗೆ? ಎಲ್ಲ ದಂಧೆಕೋರರಿಗೂ ಗುಜರಾತ್‌ ಪ್ರಿಯವಾಗುವುದೇಕೆ? ಇದು ಗುಜರಾತ್‌ ಮಾದರಿಯ ಪ್ರಭಾವವೆ’ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

‘ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಗುರುವಾರ ಗುಜರಾತ್‌ನ ಅಹಮದಾಬಾದ್‌ಗೆ ತೆರಳಿದ್ದರು. ಸ್ಯಾಂಟ್ರೊ ರವಿಯನ್ನು ಅಹಮದಾಬಾದ್‌ನಲ್ಲೇ ಶುಕ್ರವಾರ ಬಂಧಿಸಲಾಗಿದೆ. ಇದು ಖಂಡಿತಾ ಕಾಕತಾಳೀಯವಲ್ಲ’ ಎಂದು ಕುಟುಕಿದೆ.

**

ಗೃಹ ಸಚಿವರ ರಕ್ಷಣೆ: ಕುಮಾರಸ್ವಾಮಿ ಆರೋಪ
ಕಲಬುರಗಿ:
‘ಮಹಿಳೆಗೆ ವಂಚಿಸಿ ಸ್ಯಾಂಟ್ರೊ ರವಿ ಗುಜರಾತ್ ಮೂಲಕ ವಿದೇಶಕ್ಕೆ ಪರಾರಿಯಾಗಲು ಯೋಜನೆ ರೂಪಿಸಿದ್ದನೆ? ಕರ್ನಾಟಕ ಗಡಿ ದಾಟಲು ಆತನಿಗೆ ಹೇಗೆ ಸಾಧ್ಯವಾಯಿತು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.‌ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬಹುಶಃ ಸ್ಯಾಂಟ್ರೊ ರವಿಗೆ ಗೃಹ ಸಚಿವರ ರಕ್ಷಣೆ ಇರಬಹುದು. ಅವರೇ ಆತನೊಂದಿಗೆ ತೆರಳಿರಬಹುದು’ ಎಂದು ಅನುಮಾನ ವ್ಯಕ್ತಪಡಿಸಿದರು.

**

ಭಯವೂ ಇದೆ: ಸಂತ್ರಸ್ತೆ
ಮೈಸೂರು:
‘ರವಿಯ ಬಂಧನದಿಂದ ಸಮಾಧಾನವಾಗಿದೆ. ಆದರೆ, ಸರ್ಕಾರದ ಭಾಗವಾದ ಪ್ರಭಾವಿಗಳೇ ಆತನೊಂದಿಗೆ ಶಾಮೀಲಾಗಿರುವ ಆರೋಪ ಇರುವಾಗ ಸಮಸ್ಯೆಯಾಗಬಹುದೆಂಬ ಭಯವೂ ಇದೆ’ ಎಂದು ಸಂತ್ರಸ್ತೆ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು