ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SC-ST ದೌರ್ಜನ್ಯ: ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ತಿಂಗಳಿಗೊಮ್ಮೆ ಸಭೆ -ಸಿಎಂ

Last Updated 30 ಆಗಸ್ಟ್ 2021, 9:07 IST
ಅಕ್ಷರ ಗಾತ್ರ

ಬೆಂಗಳೂರು: ‘ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ವರ್ಗ (ಎಸ್‌ಟಿ) ಸಮುದಾಯದ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂರು ತಿಂಗಳಿಗೊಮ್ಮೆ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ನಡೆಯುವ ಸಭೆಯನ್ನು ತಿಂಗಳಿಗೊಮ್ಮೆ ನಡೆಸಲು ಮತ್ತು ವಿಶೇಷ ಸಂದರ್ಭಗಳಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ದೌರ್ಜನ್ಯ ಪ್ರತಿಬಂಧ ಕಾಯ್ದೆ 1989 (ತಿದ್ದುಪಡಿ ಕಾಯ್ದೆ 2015) ಮತ್ತು ನಿಯಮಗಳು 1995 (ತಿದ್ದುಪಡಿ ನಿಯಮಗಳು 2016) ಅಡಿ ರಾಜ್ಯಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿಯ ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಎಸ್‌ಸಿ, ಎಸ್‌ಟಿ ಸಮುದಾಯಗಳ ಮೇಲಿನ ದೌರ್ಜನ್ಯ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು’ ಎಂದರು.

‘ಸುಮಾರು ಪ್ರಕರಣಗಳಲ್ಲಿ ತನಿಖೆ ವಿಳಂಬವಾಗಿದೆ. ದೋಷಾರೋಪ ಪಟ್ಟಿ ಸಲ್ಲಿಕೆಯಾದ ಬಳಿಕ ವಿಚಾರಣೆ ಹಂತದಲ್ಲೂ ವಿಳಂಬ ಆಗಿದೆ. ಈ ಎರಡೂ ಹಂತಗಳಲ್ಲಿ ಪ್ರಗತಿ ಪರಿಶೀಲನೆ ನಡೆಸಿ ಯಾವುದೇ ವಿಳಂಬ ಆಗದಂತೆ ಕ್ರಮ ತೆಗೆದುಕೊಳ್ಳಲು ಗೃಹ ಮತ್ತು ಕಾನೂನು ಇಲಾಖೆ ಸೂಚಿಸಿದ್ದೇನೆ. ಅದರ ಮೇಲುಸ್ತುವಾರಿಯನ್ನು ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಾಡಬೇಕು’ ಎಂದರು,

‘ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೆಳ ಹಂತದ ಸಭೆಗಳು ನಿಯಮಾನುಸಾರ ಮೂರು ತಿಂಗಳಿಗೊಮ್ಮೆ ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಕಡ್ಡಾಯವಾಗಿ ನಡೆಯಬೇಕು. ಈ ಬಗ್ಗೆ ಸೂಕ್ತ ನಿರ್ದೇಶನ ನೀಡಲಾಗುವುದು. ಪ್ರಕರಣಗಳಲ್ಲಿ ಸಾಕ್ಷಿಗಳಿಗೆ ಸುರಕ್ಷತೆ ನೀಡಬೇಕಿದೆ. ಅವರು ನ್ಯಾಯಾಲಯಕ್ಕೆ ಬರುವಾಗ ಹೆದರಿಸುವುದು, ಆಮಿಷ ಒಡ್ಡುವುದು ನಡೆಯುತ್ತಿದೆ. ಅದಕ್ಕೆ ಹೆಚ್ಚವರಿ ಅಡ್ವೊಕೇಟ್‌ ಜನರಲ್‌ ಅವರನ್ನು ಉಸ್ತುವಾರಿಯಾಗಿ ನೇಮಿಸಲು ತೀರ್ಮಾನಿಸಲಾಗಿದೆ’ ಎಂದು ವಿವರಿಸಿದರು.

‘ಅರಣ್ಯ ಹಕ್ಕು ಕಾಯ್ದೆಯಲ್ಲಿ 1.80 ಲಕ್ಷ ಅರ್ಜಿಗಳು ತಿರಸ್ಕೃತವಾಗಿದೆ. ಅವುಗಳನ್ನು ಮರು ಪರಿಶೀಲಿಸಲು ರಾಜ್ಯಮಟ್ಟದ ಸಮಿತಿ ರಚಿಸಲಾಗುವುದು. ಆ ಸಮಿತಿಗೆ ಮೂರು ಮಂದಿಯನ್ನು ನೇನಿಸಲಾಗುವುದು. ಎಸ್‌ಸಿ ನಕಲಿ ಜಾತಿ ಪ್ರಮಾಣಪತ್ರಗಳನ್ನು ರದ್ದು ಮಾಡುವ ಜೊತೆಗೆ, ಯಾವ ಅಧಿಕಾರಿ ಕೊಟ್ಟಿದ್ದಾರೆ ಅಂಥವರ ಮೇಲೆ ಕ್ರಮ ತೆಗೆದುಕೊಳ್ಳಲು ತೀರ್ಮಾಿಸಲಾಗಿದೆ’ ಎಂದೂ ತಿಳಿಸಿದರು.

‘ಎಸ್‌ಸಿ ಎಸ್‌ಟಿ ಅನುಕಂಪದ ಆಧಾರದಲ್ಲಿ ನೌಕರಿಗೆ ಸೇರಲು ಹೆಚ್ಚಿನ ಕಾಲಾವಕಾಶ ಕೊಡಲು ಕಾನೂನು ತಿದ್ದುಪಡಿ ಮಾಡುವ ಬಗ್ಗೆಯೂ ತೀರ್ಮಾನಿಸಲಾಗಿದೆ. ಎಸ್‌ಸಿಪಿ, ಟಿಎಸ್‌ಪಿ ಯೋಜನೆಗಳ ಅನುಷ್ಠಾನವನ್ನು ಕಾಲಮಿತಿಯಲ್ಲಿ ಮುಗಿಸಬೇಕು. ಬಾಕಿ ಇರುವ ಕೊಳವೆ ಬಾವಿ ಅನುಮತಿ, ವಿದ್ಯುತ್‌ ಸಂಪರ್ಕ ಕೆಲಸವನ್ನು ಮುಂದಿನ 4 ತಿಂಗಳ ಒಳಗೆ ಪೂರ್ಣಗೊಳಿಸಬೇಕು. ಎಸ್‌ಸಿ, ಎಸ್‌ಟಿ ಅಭಿವೃದ್ಧಗೆ ಮೀಸಲಿಟ್ಟ ಹಣ ಆ ಸಮುದಾಯದ ಅಗತ್ಯಕ್ಕೆ ಬಳಸಬೇಕು. ಈ ಬಗ್ಗೆ ಅಗತ್ಯ ಇದ್ದರೆ ಕಾನೂನು ತಿದ್ದುಪಡಿಗೂ ಕಾನೂನು ಇಲಾಖೆಗೆ ಸೂಚಿಸಿದ್ದೇನೆ’ ಎಂದರು.

ಗಣೇಶ ಉತ್ಸವಕ್ಕೆ ಅನುಮತಿ ಕೊಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಸಂಜೆ ಸಭೆ ಇದೆ. ಸರ್ಕಾರ ಎಲ್ಲವನ್ನೂ‌ ಗಮನಿಸಿದೆ, ಎಲ್ಲರ ಭಾವನೆಗಳನ್ನು ಅರ್ಥ ಮಾಡಿಕೊಂಡಿದೆ. ಮೂರನೇ ಅಲೆಯ ಬಗ್ಗೆ ತಜ್ಙರು ಹೇಳಿದ್ದಾರೆ. ಕಳೆದ ವರ್ಷ ಏನಾಯಿತು, ಈ ವರ್ಷ ಏನಾಗಿದೆ ಎಂದೂ ಗಮನಿಸುತ್ತೇವೆ’ ಎಂದರು,

‘ಶಾಲೆಗಳಲ್ಲಿ 1ರಿಂದ 8ರವರೆಗಿನ ತರಗತಿಗಳನ್ನು ಆರಂಭಿಸುವ ಬಗ್ಗೆ ಕೂಡಾ ಸಂಜೆಯ ಸಭೆಯಲ್ಲಿ ನಿರ್ಧರಿಸಲಾಗುವುದು’ ಎಂದರು.

ಸಭೆಯಲ್ಲಿ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ಸಮಿತಿಯ ಸದಸ್ಯರಾದ ಸಂಸದರು, ಶಾಸಕರು ಮತ್ತು ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT