ಸಿಂದಗಿ (ವಿಜಯಪುರ ಜಿಲ್ಲೆ): ಶಾಲೆಗೆ ಮೂಲಸೌಕರ್ಯ ಕಲ್ಪಿಸಬೇಕು ಮತ್ತು ಶಿಕ್ಷಕರ ಕೊರತೆ ನೀಗಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದರಿಂದ ಮಂಗಳವಾರತಾಲ್ಲೂಕಿನ ಓತಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು, ಬಯಲಲ್ಲೇ ಕುಳಿತು ಪಾಠ ಕೇಳಬೇಕಾಯಿತು.
ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಶಿವಾನಂದ ಸಾಲಿಮಠ, ಗ್ರಾಮದ ಪ್ರಮುಖರ ನೇತೃತ್ವದಲ್ಲಿ ಗ್ರಾಮಸ್ಥರು ಶಾಲೆಗೆ ಬಂದು ವಿದ್ಯಾರ್ಥಿಗಳನ್ನು ಕೊಠಡಿಯಿಂದ ಹೊರ ಕಳಿಸಿ ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಗ್ರಾಮದ ಪ್ರಮುಖ ಬಾಬೂ ನಾಟೀಕಾರ ಮಾತನಾಡಿ, ‘ಶಾಲೆ 30 ವರ್ಷಗಳಿಂದ ಸೌಕರ್ಯಗಳಿಂದ ವಂಚಿತವಾಗಿದೆ. ಕಾಂಪೌಂಡ್ ಇಲ್ಲ, ಕ್ರೀಡಾ ಸಾಮಗ್ರಿಗಳಿಲ್ಲ. ವಿದ್ಯುತ್ ಸಂಪರ್ಕವೂ ಇಲ್ಲ. ಮೂರು ದಶಕಗಳಿಂದ ಈವರೆಗೆ ಒಂದು ಸಲವೂ ಕೊಠಡಿಗಳಿಗೆ ಸುಣ್ಣ-ಬಣ್ಣ ಹಚ್ಚಿಲ್ಲ...’ ಎಂದು ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಟ್ಟರು.
‘ಇಂಗ್ಲಿಷ್, ಗಣಿತ, ವಿಜ್ಞಾನ ಶಿಕ್ಷಕರ ಕೊರತೆಯಿಂದಾಗಿ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿದೆ. ಶಾಲೆಯ ಸಮಸ್ಯೆಗಳ ಕುರಿತು ಬಿಇಒ, ಡಿಡಿಪಿಐ ಅವರ ಗಮನಕ್ಕೆ ಸಾಕಷ್ಟು ಬಾರಿ ತಂದರೂ ಪ್ರಯೋಜನ ಆಗಿಲ್ಲ. ಇನ್ನಾದರೂ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಿ. ಇಲ್ಲದಿದ್ದರೆ ಹೋರಾಟ ತೀವ್ರಗೊಳ್ಳುತ್ತದೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಶಿವಾನಂದ ಸಾಲಿಮಠ ಎಚ್ಚರಿಸಿದರು.
ಈ ಪ್ರತಿಭಟನೆಯಿಂದಾಗಿ ಮಕ್ಕಳು ಬಯಲಲ್ಲೇ ಕುಳಿತು ಪಾಠ ಕೇಳಿದರು.
* 300 ವಿದ್ಯಾರ್ಥಿಗಳಿಗೆ ಕೇವಲ ನಾಲ್ವರು ವಿಷಯ ಶಿಕ್ಷಕರು. ಹೀಗಾಗಿ ಮಕ್ಕಳ ಶಿಕ್ಷಣ ಕುಂಠಿತಗೊಳ್ಳುತ್ತಿದೆ. ಕೂಡಲೇ ಶಿಕ್ಷಕರ ನಿಯೋಜನೆ ಮಾಡಬೇಕು.
-ಬಾಬು ನಾಟೀಕಾರ, ಗ್ರಾಮಸ್ಥ, ಓತಿಹಾಳ
* ಇಬ್ಬರು ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಮುಖ್ಯ ಶಿಕ್ಷಕರಿಗೆ ಆದೇಶಿಸಲಾಗಿದೆ. ಶಾಲೆಗೆ ಮೂಲಸೌಕರ್ಯಗಳನ್ನು ಗ್ರಾಮ ಪಂಚಾಯಿತಿ ಕಲ್ಪಿಸಬೇಕಿದೆ.
- ಆರ್.ಎಸ್.ನೀರಲಗಿ, ಕ್ಷೇತ್ರ ಶಿಕ್ಷಣಾಧಿಕಾರಿ, ಸಿಂದಗಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.