ಸೋಮವಾರ, ಏಪ್ರಿಲ್ 19, 2021
23 °C

ಅಲೆಮಾರಿಗಳಿಗೆ ಪ್ರತ್ಯೇಕ ಸ್ಮಶಾನ: ರವೀಂದ್ರ ಶೆಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಅಲೆಮಾರಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಗಳಲ್ಲಿ, ಪ್ರತ್ಯೇಕ ಸ್ಮಶಾನ ನಿರ್ಮಾಣಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ರಾಜ್ಯ ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಹೇಳಿದರು.

‘ಕೊರಟಗೆರೆ ತಾಲ್ಲೂಕಿನಲ್ಲಿ ಈಚೆಗೆ ಮಗುವಿನ ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದ ಪ್ರಕರಣ ಬೇಸರ ತರಿಸಿದೆ. ಈ ಘಟನೆಯ ಬಳಿಕ ಪ್ರತ್ಯೇಕ ಸ್ಮಶಾನ ಅಗತ್ಯವೆಂದು ನನಗೆ ಅನಿಸಿತು. ಘಟನಾ ಸ್ಥಳಕ್ಕೆ ತೆರಳಿ ದಾಖಲೆ ಪರಿಶೀಲಿಸಿದ್ದು, ಅದು ಅಲೆಮಾರಿ (ದೊಂಬಿದಾಸ) ಕುಟುಂಬ ಎಂಬುದು ಗೊತ್ತಾಗಿದೆ. ಆದರೆ, ಜಾತಿ ಪ್ರಮಾಣಪತ್ರದಲ್ಲಿ ಅಲೆಮಾರಿ ಎಂದು ನಮೂದಾಗಿಲ್ಲ. ಆ ಕುಟುಂಬಕ್ಕೆ ಹಣಕಾಸಿನ ನೆರವು ನೀಡಲಾಗಿದೆ‌‌’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನಿಗಮದ ವ್ಯಾಪ್ತಿಯಲ್ಲಿ 46 ಜಾತಿಗಳಿದ್ದು (ಪ್ರವರ್ಗ-1), ಜಾತಿ ಪ್ರಮಾಣಪತ್ರ ನೀಡಿಕೆಯಲ್ಲಿ ಗೊಂದಲವಿದೆ. ಪ್ರಮಾಣಪತ್ರದಲ್ಲಿ ಅಲೆಮಾರಿ ಎಂದು ನಮೂದಾಗುತ್ತಿಲ್ಲ. ಈ ಗೊಂದಲಇತ್ಯರ್ಥಕ್ಕೆ ಕ್ರಮ ವಹಿಸಲಾಗುವುದು. ಸರ್ಕಾರದ ಸೌಲಭ್ಯ ಪಡೆಯಲು ಇದರಿಂದ ಸಹಾಯವಾಗಲಿದೆ’ ಎಂದರು.

ರಾಜ್ಯದಲ್ಲಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯದ ಸುಮಾರು 70 ಲಕ್ಷ ಜನಸಂಖ್ಯೆ ಇರಬಹುದೆಂದು ಅಂದಾಜಿಸಲಾಗಿದೆ. ಈ ಬಗ್ಗೆ ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದಾಗಿ ಹೇಳಿದರು.

ಕಾಲೊನಿ ನಿರ್ಮಾಣ: ಸರ್ಕಾರದಿಂದ ಜಾಗ ಪಡೆದು, ಪ್ರತಿ ಜಿಲ್ಲೆಯಲ್ಲಿ ಅಲೆಮಾರಿಗಳು ಹೆಚ್ಚಿರುವ ಕಡೆ ಕಾಲೊನಿ ನಿರ್ಮಿಸುವ ಯೋಜನೆಯನ್ನು ನಿಗಮ ಹೊಂದಿದೆ. ಈ ವಿಚಾರವಾಗಿ ಮುಖ್ಯಮಂತ್ರಿ ಹಾಗೂ ವಸತಿ ಸಚಿವರ ಜೊತೆ ಚರ್ಚಿಸಲಾಗುವುದು ಎಂದು ತಿಳಿಸಿದರು.

‘ಅಲೆಮಾರಿಗಳ ಅಭಿವೃದ್ಧಿಗಾಗಿ ಇದೇ ಮೊದಲ ಬಾರಿ ನಿಗಮ ಸ್ಥಾಪಿಸಿದ್ದು, ಅದರ ಪ್ರಥಮ ಅಧ್ಯಕ್ಷನಾಗಿದ್ದೇನೆ. ₹ 250 ಕೋಟಿ ಅನುದಾನಕ್ಕಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಬೇಡಿಕೆ ಸಲ್ಲಿಸಲಿದ್ದೇನೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು