ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಎರಡನೇ ಅಲೆ: ಸೆರೋ ಸಮೀಕ್ಷೆಗೆ ಶಿಫಾರಸು

Last Updated 17 ಡಿಸೆಂಬರ್ 2020, 14:06 IST
ಅಕ್ಷರ ಗಾತ್ರ

ಬೆಂಗಳೂರು: ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಕೋವಿಡ್ ಎರಡನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಎರಡನೇ ಹಂತದ ಸೆರೋ ಸಮೀಕ್ಷೆಯನ್ನು ಹೊಸ ವರ್ಷದ ಮೊದಲ ಅಥವಾ ಎರಡನೇ ವಾರದಲ್ಲಿ ನಡೆಸಬೇಕು ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದೆ.

ಅನ್ಯ ರಾಜ್ಯಗಳು ಹಾಗೂ ವಿದೇಶಗಳಲ್ಲಿ ಕೋವಿಡ್ ಪೀಡಿತರ ಸಂಖ್ಯೆ ಮತ್ತೆ ಏರುಗತಿ ಪಡೆದ ಕಾರಣ ರಾಜ್ಯದಲ್ಲಿಯೂ ಎರಡನೇ ಅಲೆಯ ಆತಂಕ ಶುರುವಾಗಿದೆ. ಇದಕ್ಕೆ ಪೂರಕವಾಗಿ ತಜ್ಞರು ಅಧ್ಯಯನ ನಡೆಸಿ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಶಿಫಾರಸು ಮಾಡಿದ್ದರು. ಅದೇ ರೀತಿ, ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಜನರು ಸೇರದಂತೆ ನಿರ್ಬಂಧ ವಿಧಿಸಲು ಸೂಚಿಸಿದ್ದರು. ಗ್ರಾಮ ಪಂಚಾಯಿತಿ ಚುನಾವಣೆ ಹಾಗೂ ಹೊಸ ವರ್ಷದ ಸಂಭ್ರಮಾಚಣೆಯ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಸೆರೋ ಸಮೀಕ್ಷೆಯನ್ನು ನಡೆಸಬೇಕು ಎಂದು ಸಮಿತಿಯ ತಜ್ಞರು ಸರ್ಕಾರಕ್ಕೆ ಸೂಚಿಸಿದ್ದಾರೆ.

ಮೊದಲ ಹಂತದ ಸೆರೋ ಸಮೀಕ್ಷೆಯು 2020 ರ ಸೆಪ್ಟೆಂಬರ್‌ 3 ರಿಂದ 16 ರವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಡೆದಿತ್ತು. 16,585 ಜನರ ಮಾದರಿಗಳನ್ನು ಪಡೆದು ಪರೀಕ್ಷೆ ಮಾಡಲಾಗಿತ್ತು. ಅದರಲ್ಲಿ ಶೇ 16 ರಷ್ಟು ಜನರಲ್ಲಿ ಕೋವಿಡ್‌ ಪ್ರತಿಕಾಯ ಇರುವುದು ತಿಳಿದುಬಂದಿತ್ತು. ಗ್ರಾಮ ಪಂಚಾಯಿತಿ ಚುನಾವಣೆ ಹಾಗೂ ಹೊಸ ವರ್ಷ ಆಚರಣೆಯ ಬಳಿಕ ಎರಡು ವಾರಗಳ ಕಾಲ ಸೋಂಕು ಹರಡುವ ಸಾಧ್ಯತೆಗಳ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದು, ಈ ಅವಧಿಯಲ್ಲೇ ಸಮೀಕ್ಷೆ ಮಾಡಬೇಕೆಂದು ಸೂಚಿಸಿದ್ದಾರೆ.

ಮಾದರಿ ಸಂಗ್ರಹಕ್ಕೆ ಆದ್ಯತೆ: ಎರಡನೇ ಹಂತದ ಸಮೀಕ್ಷೆಯಲ್ಲಿ ತರಕಾರಿ ಮಾರುಕಟ್ಟೆಗಳಲ್ಲಿನ ವ್ಯಾಪಾರಿಗಳು, ಆಟೋ ರಿಕ್ಷಾ ಚಾಲಕರು, ಸಾರಿಗೆ ನೌಕರರು ಹಾಗೂ ಚಾಲಕರು ಸೇರಿದಂತೆ ಸಾರ್ವಜನಿಕ ಜೀವನದಲ್ಲಿ ಇರುವವರನ್ನು ಆದ್ಯತೆ ಮೇಲೆ ಗುರುತಿಸಿ, ಅವರ ಮಾದರಿಗಳನ್ನು ಸಂಗ್ರಹಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

‘ಕೋವಿಡ್‌ ಪ್ರಕರಣಗಳು ಇಳಿಕೆಯಾಗುತ್ತಿದೆ ಎಂದು ಜನತೆ ಮೈಮರೆಯುತ್ತಿದ್ದಾರೆ. ಚುನಾವಣೆ ಹಾಗೂ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಒಂದೆಡೆ ಸೇರಿದರೆ ಮತ್ತೆ ಸಮಸ್ಯೆಯಾಗಲಿದೆ. ಹಾಗಾಗಿ ಜನವರಿ ಪ್ರಾರಂಭದಲ್ಲಿ ಸೆರೋ ಸಮೀಕ್ಷೆ ನಡೆಸಬೇಕಿದೆ. ಕೊರೊನಾ ವೈರಾಣು ದೇಹಕ್ಕೆ ಪ್ರವೇಶಿಸಿದಾಗ ಪ್ರತಿರೋಧಕಗಳು ಉತ್ಪತ್ತಿಯಾಗುತ್ತವೆ. ಕಡಿಮೆ, ಮಧ್ಯಮ ಹಾಗೂ ಅಧಿಕ ಅಪಾಯದಲ್ಲಿರುವವರನ್ನು ಗುರುತಿಸಿ, ಸಮೀಕ್ಷೆ ನಡೆಸಬೇಕು’ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT