ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕಿತರ ಅಂತ್ಯಕ್ರಿಯೆ ಅಂಜದ ತಂಡ

ಅಖಿಲ ಭಾರತ ಮುಸ್ಲಿಂ ಅಭಿವೃದ್ಧಿ ವೇದಿಕೆ ಸೇವಾ ಕಾರ್ಯ
Last Updated 7 ಸೆಪ್ಟೆಂಬರ್ 2020, 13:09 IST
ಅಕ್ಷರ ಗಾತ್ರ

ಬೈಲಹೊಂಗಲ: ಅಖಿಲ ಭಾರತ ಮುಸ್ಲಿಂ ಅಭಿವೃದ್ಧಿ ವೇದಿಕೆ ಬೈಲಹೊಂಗಲ ಘಟಕದ ಸದಸ್ಯರು ಕೊರೊನಾವೈರಸ್‌ ಕಾರಣದಿಂದ ಮರಣ ಹೊಂದಿದವರ ಅಂತ್ಯಕ್ರಿಯೆ ನೆರವೇರಿಸುತ್ತಿದ್ದಾರೆ. ಆರೋಗ್ಯ ಇಲಾಖೆಯಿಂದ ತರಬೇತಿ ಪಡೆದು ಎಲ್ಲ ಧರ್ಮೀಯರ ಅಂತ್ಯಕ್ರಿಯೆಗಳನ್ನು ಅವರವರ ವಿಧಿವಿಧಾನಗಳಂತೆ ಮಾಡುತ್ತಿದ್ದಾರೆ.

‘ಘಟಕದ 50 ಸ್ವಯಂ ಸೇವಕರು ಜೀವದ ಹಂಗು ತೊರೆದು ಈ ಸೇವಾ ಕಾರ್ಯದಲ್ಲಿ ತೊಡಗಿದ್ದಾರೆ. ಹಿಂದೂ, ಮುಸ್ಲಿಂ, ಕ್ರೈಸ್ತರ ಅಂತ್ಯಸಂಸ್ಕಾರವನ್ನು ವಿಧಿ– ವಿಧಾನದಿಂದ ನಿರ್ವಹಿಸುತ್ತಿದ್ದಾರೆ. ಇದು ಮೆಚ್ಚುಗೆಗೆ ಪಾತ್ರವಾಗಿದೆ’ ಎನ್ನುತ್ತಾರೆ ಸಾರ್ವಜನಿಕರು.

ಚಿಕಿತ್ಸೆಗೆ ಸ್ಪಂದಿಸದೆ ಸೋಂಕಿತರು ಮೃತಪಟ್ಟರೆ ಆರೋಗ್ಯ ಇಲಾಖೆ ಹಾಗೂ ಕುಟುಂಬದವರು ಮಾಹಿತಿ ನೀಡುತ್ತಾರೆ. ಅಂತ್ಯಕ್ರಿಯೆಗೆ ನೆರವಾಗುವಂತೆ ತಿಳಿಸುತ್ತಾರೆ. ತಕ್ಷಣವೇ ಆಸ್ಪತ್ರೆಗೆ ತೆರಳಿ ಅಲ್ಲಿಂದ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ (ಪಿಪಿಇ ಕಿಟ್ ಧರಿಸಿ) ಅಂತ್ಯಸಂಸ್ಕಾರ ನೆರವೇರಿಸಲು ಸ್ಮಶಾನ ಭೂಮಿಯತ್ತ ತೆರಳುತ್ತೇವೆ’ ಎನ್ನುತ್ತಾರೆ ಸಂಘಟನೆಯ ಸಂಸ್ಥಾಪಕ ಸದಸ್ಯ ಹಾಗೂ ರಾಜ್ಯ ಖಜಾಂಚಿ ವಕ್ಕುಂದ ಗ್ರಾಮದ ನಜೀರ ಅಹ್ಮದ್ ಮುಲ್ಲಾ.

‘ಮನುಷ್ಯ ಜನ್ಮ ಶ್ರೇಷ್ಠವಾದುದು. ಯಾವುದೇ ವ್ಯಕ್ತಿ ಮೃತಪಟ್ಟರೆ ಸಂಪ್ರದಾಯ ಬದ್ಧವಾಗಿ ಅಂತ್ಯಕ್ರಿಯೆ ಮಾಡಿ ಗೌರವ ಸಲ್ಲಿಸಬೇಕು. ಹಾಗಾಗಿ ನಿಸ್ವಾರ್ಥ ಮನೋಭಾವದಿಂದ ಉಚಿತವಾಗಿ ಈ ಕೆಲಸದಲ್ಲಿ ತೊಡಗಿದ್ದೇವೆ. ಮುಸ್ಲಿಮರು ಮೃತಪಟ್ಟರೆ ಅವರ ಸಂಬಂಧಿಕರ ಪೈಕಿ ಒಬ್ಬರು ಪಿಪಿಇ ಕಿಟ್, ಮಾಸ್ಕ್, ಗ್ಲೌಸ್ ಧರಿಸಿ ನಮ್ಮೊಂದಿಗೆ ಬರುತ್ತಾರೆ. ಆ ಧರ್ಮದ ಅನುಸಾರ ಅಂತ್ಯಕ್ರಿಯೆ ನೆರವೇರಿಸುತ್ತೇವೆ. ಹಿಂದೂ, ಕ್ರೈಸ್ತ ಸಮುದಾಯದವರು ಮೃತಪಟ್ಟರೆ ಅವರ ಸಂಬಂಧಿಗಳು ನೀಡುವ ಸೂಚನೆ ಪಾಲಿಸಿ ವಿಧಿವಿಧಾನ ನೆರವೇರಿಸುತ್ತೇವೆ’ ಎಂದು ತಾಲ್ಲೂಕು ಘಟಕ ಅಧ್ಯಕ್ಷ ಅಲ್ತಾಫ ನೇಸರಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಕಾರ್ಯದಲ್ಲಿ ರಾಜ್ಯ ಕಾರ್ಯದರ್ಶಿ ಶೌಕತ್ ಅಲಿ ಬಂಕಾಪುರ, ಕಾರ್ಯದರ್ಶಿ ಶರೀಫ ತಿಗಡಿ, ರಫೀಕ ಕರೋಲಿ, ಸಮೀವುಲ್ಲಾ ಸಂಗೊಳ್ಳಿ, ಸಾದಿಕ ಕರವಿನಕೊಪ್ಪ ಸೇರಿದಂತೆ ಐವತ್ತು ಮಂದಿ ಸೇವಕರು ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಮಾಹಿತಿಗೆ ನಜೀರ ಅಹ್ಮದ್ ಮೊ:9880033086.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT