ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2004ರಲ್ಲಿ ಸೋನಿಯಾ ಮಾಡಿದ ತ್ಯಾಗ ಟೀಕಾಕಾರಿಗೆ ತಿಳಿಯದೇ? ಸಿದ್ದರಾಮಯ್ಯ ಪ್ರಶ್ನೆ

Last Updated 17 ಮಾರ್ಚ್ 2022, 9:20 IST
ಅಕ್ಷರ ಗಾತ್ರ

ಬೆಂಗಳೂರು: 2004ರಲ್ಲಿ ಸೋನಿಯಾ ಗಾಂಧಿಯವರು ಹಕ್ಕಿನಿಂದ ಪಡೆಯಬಹುದಾದ ಪ್ರಧಾನಿ ಪಟ್ಟವನ್ನು ತ್ಯಾಗ ಮಾಡಿದ್ದನ್ನು ಇಂದಿನ‌ ಟೀಕಾಕಾರರು ಕಂಡಿಲ್ಲವೇ? ಎಂದು ಪ್ರಶ್ನೆ ಮಾಡಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್‌ ನಾಯಕತ್ವವನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ದೇಶವನ್ನು ಮುನ್ನಡೆಸುವ ಪ್ರಬಲ ಶಕ್ತಿಯಾಗಿ ಕಾಂಗ್ರೆಸ್‌ ಮತ್ತೆ ಎದ್ದು ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಜಿ –23 (ಕಾಂಗ್ರೆಸ್‌ನ ಭಿನ್ನಮತೀಯ ನಾಯಕರು) ನಾಯಕರು ‘ಗಾಂಧಿ ಕುಟುಂಬದ’ ನಾಯಕತ್ವದ ವಿರುದ್ಧ ಧ್ವನಿ ಎತ್ತಿದ್ದಾರೆ. ಈ ಬೆಳವಣಿಗೆ ಕಾಂಗ್ರೆಸ್‌ಗೆ ಮುಜುಗರ ಸೃಷ್ಟಿ ಮಾಡಿದ್ದು, ಸಿದ್ದರಾಮಯ್ಯ ಅವರು ಸೋನಿಯಾ, ರಾಹುಲ್‌ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅವರು ಅಭಿಪ್ರಾಯ ಹಂಚಿಕೊಂಡಿದ್ದು, ಭಿನ್ನಮತೀಯ ನಾಯಕರಿಗೆ ಚಾಟಿ ಬೀಸಿದ್ದಾರೆ.

‘ಕಾಂಗ್ರೆಸ್ ಪಕ್ಷ, ಇತ್ತೀಚಿನ ಕೆಲವು ಚುನಾವಣಾ ಸೋಲುಗಳ ತಾತ್ಕಾಲಿಕ ಹಿನ್ನಡೆಯನ್ನು ಎದುರಿಸಿದ್ದು, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ದೇಶವನ್ನು ಮತ್ತೆ ಮುನ್ನಡೆಸುವ ಪ್ರಬಲ ರಾಜಕೀಯ ಶಕ್ತಿಯಾಗಿ ಎದ್ದು ಬರಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಕರ್ನಾಟಕ ಕಾಂಗ್ರೆಸ್ ಪಕ್ಷದ ನಾಯಕರಿಂದ ಹಿಡಿದು ಕಾರ್ಯಕರ್ತರವರೆಗೆ ಪ್ರತಿಯೊಬ್ಬರೂ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ನಾಯಕತ್ವವನ್ನು ಬೆಂಬಲಿಸುತ್ತಿದ್ದಾರೆ. ಇದೇ ನಂಬಿಕೆ ಮತ್ತು ಆತ್ಮವಿಶ್ವಾಸದಿಂದ ರಾಜ್ಯದಲ್ಲಿ ಮುಂದಿನ ಚುನಾವಣೆಯನ್ನು ಎದುರಿಸಿ ಪಕ್ಷಕ್ಕೆ ಗೆಲುವಿನ ಉಡುಗೊರೆ ನೀಡುತ್ತೇವೆ’ ಎಂದು ಅವರು ಹೇಳಿದ್ದಾರೆ.

‘ಹೊರಗಿನ ವಿರೋಧ ಪಕ್ಷಗಳ ಅಪಪ್ರಚಾರ ಮತ್ತು ಕೆಲವು ಒಳಗಿನ ಹಿತಶತ್ರುಗಳ ಕುಟಿಲ ಕಾರಸ್ತಾನಗಳಿಂದ ವಿಚಲಿತರಾಗದೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಭರವಸೆ ಇಟ್ಟು ಪಕ್ಷಕ್ಕೆ ಶಕ್ತಿ ತುಂಬಲು ಪ್ರತಿಯೊಬ್ಬ ಕಾಂಗ್ರೆಸಿಗನು ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳಬೇಕು’ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

‘ಈಗ ಸೋನಿಯಾ ಗಾಂಧಿಯವರ ನಾಯಕತ್ವವನ್ನು ಪ್ರಶ್ನಿಸುತ್ತಿರುವವರು, ಅವರದ್ದೇ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ಸತತ ಎರಡು ಬಾರಿ ಲೋಕಸಭಾ ಚುನಾವಣೆಗಳನ್ನು ಗೆದ್ದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವುದನ್ನು ಮರೆತಿರುವುದು ಆತ್ಮದ್ರೋಹವಲ್ಲದೆ ಮತ್ತೇನು?’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

‘ಸೋನಿಯಾ ಗಾಂಧಿಯವರ ನಾಯಕತ್ವದಲ್ಲಿಯೇ ಕೇಂದ್ರದಲ್ಲಿ ಮಾತ್ರವಲ್ಲ, ಹದಿನೈದಕ್ಕೂ ಹೆಚ್ಚು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು‌ ಎನ್ನುವುದನ್ನು ಇಂದು ಅವರ ನಾಯಕತ್ವವನ್ನು ಪ್ರಶ್ನಿಸುವವರು ನೆನಪು ಮಾಡಿಕೊಳ್ಳಬೇಕಾಗಿದೆ. ದೇಶಕ್ಕೆ ಬಲಿದಾನಗೈದ ಪತಿಯ ಅಗಲಿಕೆಯ ಶೋಕ ಮತ್ತು ಎರಡು ಎಳೆಯ ಮಕ್ಕಳ ಭವಿಷ್ಯದ ಕಾಳಜಿಯಿಂದ ರಾಜಕೀಯದಿಂದ ದೂರ ಇದ್ದ ಸೋನಿಯಾ ಗಾಂಧಿಯವರನ್ನು ಕಾಂಗ್ರೆಸ್ ಪಕ್ಷವನ್ನು ಉಳಿಸಲಿಕ್ಕಾಗಿ ಒತ್ತಾಯದಿಂದ ಸಕ್ರಿಯ ರಾಜಕೀಯಕ್ಕೆ ಎಳೆದು ತಂದಿದ್ದ ಕೆಲವು ನಾಯಕರೇ ಈಗ ಸೋನಿಯಾ ಸೈದ್ಧಾಂತಿಕ ನಾಯಕತ್ವವನ್ನು ಪ್ರಶ್ನಿಸುತ್ತಿರುವುದು ವಿಷಾದನೀಯ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘2004ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದ ಸೋನಿಯಾ ಗಾಂಧಿಯವರು ಹಕ್ಕಿನಿಂದ ಪಡೆಯಬಹುದಾದ ಪ್ರಧಾನಿ ಪಟ್ಟವನ್ನು ತ್ಯಾಗ ಮಾಡಿ ವಿಶ್ವಕ್ಕೆ ಮಾದರಿಯಾಗಿದ್ದನ್ನು ಇಡೀ ವಿಶ್ವ ಕಂಡಿದೆ. ಇಂದಿನ‌ ಟೀಕಾಕಾರರು ಈ ತ್ಯಾಗವನ್ನು ಕಂಡಿಲ್ಲವೇ’ ಎಂದು ಅವರು ಪ್ರಶ್ನೆ ಕೇಳಿದ್ದಾರೆ.

‘ಕೆಲವು ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಸೋತಿರಬಹುದು.‌ ಆದರೆ, ಆಹಾರ, ಶಿಕ್ಷಣ, ಉದ್ಯೋಗ ಮತ್ತು ಮಾಹಿತಿಯ ಶಾಸನಾತ್ಮಕ ಹಕ್ಕನ್ನು ನೀಡಿದ್ದ ಕಾರ್ಯಕ್ರಮಗಳ ರೂವಾರಿಯಾದ ಶ್ರೀಮತಿ ಸೋನಿಯಾ ಗಾಂಧಿಯವರು ದೇಶದ ಜನತೆಯ ಮನೆ-ಮನಗಳಲ್ಲಿ ಶಾಶ್ವತವಾಗಿ ನೆಲೆ ನಿಂತಿದ್ದಾರೆ. ಆ ಚಿತ್ರವನ್ನು ಅಳಿಸಲಾಗದು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ‌ ಮತ್ತು ಪ್ರಿಯಾಂಕಾ ಗಾಂಧಿಯವರು ಒಂಟಿಯಲ್ಲ, ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರು ಮಾತ್ರವಲ್ಲ, ದೇಶದ ಕೋಟ್ಯಂತರ ಜನ ಅವರ ಬೆನ್ನ ಹಿಂದಿದ್ದಾರೆ. ಇಂದಿನ‌ ಸಂಕಷ್ಟ ಸ್ಥಿತಿಯಿಂದ ದೇಶವನ್ನು ಕಾಂಗ್ರೆಸ್ ಪಕ್ಷ ಮಾತ್ರ ಪಾರುಮಾಡಲು ಸಾಧ್ಯ ಎನ್ನುವುದು ಪ್ರತಿಯೊಬ್ಬರೂ ಅರಿತಿದ್ದಾರೆ. ಕೋಮುವಾದಿ ರಾಜಕಾರಣ, ಸುಳ್ಳುಗಳ ಅಪಪ್ರಚಾರ, ದುಡ್ಡಿನ ಬಲದ ಚುನಾವಣಾ ತಂತ್ರ-ಕುತಂತ್ರಗಳ ಎದುರು ಸೈದ್ಧಾಂತಿಕ ರಾಜಕಾರಣಕ್ಕೆ ಬದ್ಧವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿರಬಹುದು. ಇದು ತಾತ್ಕಾಲಿಕ ಹಿನ್ನಡೆ, ಸತ್ಯವೇ ಗೆಲ್ಲುವುದು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT