ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯನ್ನು ಸೋಲಿಸಿದರೆ ಬೆಲೆ ಇಳಿಯುತ್ತದೆ: ಇದು ಮೋದಿ ಪಾಠ ಎಂದ ಸಿದ್ದರಾಮಯ್ಯ

Last Updated 4 ನವೆಂಬರ್ 2021, 12:56 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣೆಯಲ್ಲಿ ಮತದಾರರು ಬಿಜೆಪಿಯನ್ನು ಸೋಲಿಸಿದರೆ ಪೆಟ್ರೋಲ್ –ಡೀಸೆಲ್ ಬೆಲೆ ಇಳಿಯುತ್ತದೆ ಎನ್ನುವ ಪಾಠವನ್ನು ಹೇಳಿಕೊಟ್ಟ ನರೇಂದ್ರ ಮೋದಿ ಅವರಿಗೆ ಧನ್ಯವಾದ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದಾರೆ. ಅಲ್ಲದೆ, ಬೆಲೆ ಇಳಿಯಬೇಕಿದ್ದರೆ ಬಿಜೆಪಿಯನ್ನು ಸೋಲಿಸುತ್ತಿರಬೇಕು ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರವು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಲೀಟರಿಗೆ ₹10, ಪೆಟ್ರೋಲ್ ಮೇಲಿನ ಎಕ್ಸೈಸ್ ಸುಂಕವನ್ನು ಗುರುವಾರ ಲೀಟರಿಗೆ ₹5 ತಗ್ಗಿಸಿತ್ತು. ಇದರ ಬೆನ್ನಿಗೇ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಲೀಟರಿಗೆ ತಲಾ ₹7 ಕಡಿಮೆ ಮಾಡಲು ರಾಜ್ಯ ಸರ್ಕಾರವೂ ತೀರ್ಮಾನಿಸಿತ್ತು.

ಈ ಹಿನ್ನೆಲೆಯಲ್ಲಿ ಸರಣಿ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, ‘ಯುಪಿಎ ಕಾಲದಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್‌ಗೆ 125 ಡಾಲರ್ ಇದ್ದಾಗ ಪೆಟ್ರೋಲ್ ಬೆಲೆ 65 ರೂಪಾಯಿಗಳಾಗಿತ್ತು. ಬಿಜೆಪಿ ಸರ್ಕಾರದಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್‌‌ಗೆ 82 ಡಾಲರ್ ಇದ್ದಾಗ ಪೆಟ್ರೋಲ್ ಬೆಲೆ 100 ರೂಪಾಯಿಗೆ ಇಳಿಸಿದ್ದು ಮಹಾನ್ ಸಾಧನೆ,‘ ಎಂದು ಟೀಕಿಸಿದ್ದಾರೆ.

‘ಚುನಾವಣೆಯಲ್ಲಿ ಮತದಾರರು ಬಿಜೆಪಿಯನ್ನು ಸೋಲಿಸಿದರೆ ಪೆಟ್ರೋಲ್–ಡೀಸೆಲ್ ಬೆಲೆ ಇಳಿಯುತ್ತದೆ ಎನ್ನುವ ಪಾಠವನ್ನು ಹೇಳಿಕೊಟ್ಟ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ಇದು ಪ್ರಧಾನಿ ನೀಡಿದ ದೀಪಾವಳಿ ಕೊಡುಗೆ ಅಲ್ಲ, ಇದು ದೇಶದಾದ್ಯಂತ ನಡೆದ ಉಪಚುನಾವಣೆಗಳ ಕೊಡುಗೆ,’ ಎಂದು ಗೇಲಿ ಮಾಡಿದ್ದಾರೆ.

‘ಅಡುಗೆ ಅನಿಲ ಬೆಲೆ ಸಾವಿರ ರೂಪಾಯಿ ತಲುಪಿದೆ, ಆಹಾರ ಧಾನ್ಯ, ಖಾದ್ಯತೈಲದ ಬೆಲೆ ಏರುತ್ತಲೇ ಇದೆ. ಈ ಬೆಲೆಗಳು ಕೂಡಾ ಇಳಿಯಬೇಕಾದರೆ ಬಿಜೆಪಿಯನ್ನು ಇನ್ನಷ್ಟು ಚುನಾವಣೆಗಳಲ್ಲಿ ಮತದಾರರು ಸೋಲಿಸುತ್ತಲೇ ಇರಬೇಕು. ಸದ್ಯದಲ್ಲಿಯೇ ನಮ್ಮ ರಾಜ್ಯದಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ಗಳಿಗೆ ಹಾಗೂ ಬೆಂಗಳೂರು ಮಹಾನಗರಪಾಲಿಕೆಗೆ ಚುನಾವಣೆಗಳು ನಡೆಯಲಿವೆ. ನರೇಂದ್ರ ಮೋದಿ ಅವರು ಹೇಳಿಕೊಟ್ಟಿರುವ ಪಾಠವನ್ನು ಮತದಾರರು ನೆನಪಲ್ಲಿಟ್ಟುಕೊಂಡು ಮತದಾನ ನಡೆಸಬೇಕು,’ ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT