ಮಂಗಳವಾರ, ಜನವರಿ 31, 2023
26 °C

ಬಿಜೆಪಿಯವರ ಮನೆ ಹಾಳಾಗ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆ.ಆರ್‌.ಪೇಟೆ (ಮಂಡ್ಯ ಜಿಲ್ಲೆ): ‘ಬಿಜೆಪಿಯವರ ಮನೆ ಹಾಳಾಗ, ಅವರು ಒಂದೇ ಒಂದು ಮನೆ ಕಟ್ಟಿಸಿಕೊಡಲಿಲ್ಲ. ಅಂಥವರು ಮತ್ತೆ ಅಧಿಕಾರಕ್ಕೆ ಬರಬೇಕಾ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಂಗಳವಾರ ಪ್ರಶ್ನಿಸಿದರು.

ಪಟ್ಟಣದಲ್ಲಿ ನಡೆದ ಕನಕ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ‘ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಿಸಿದರೆ ನನಗೆ ಶಕ್ತಿ ಬರುತ್ತದೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಬಸವರಾಜ ಬೊಮ್ಮಾಯಿಗೆ ಬರುತ್ತದೆ. ಕಾಂಗ್ರೆಸ್‌ ಸರ್ಕಾರ ಇದ್ದಾಗ ಜಾರಿಗೊಳಿಸಿದ್ದ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿಯವರು ನಿಲ್ಲಿಸಿದ್ದಾರೆ. ನಾವು ಮತ್ತೆ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 10 ಕೆ.ಜಿ ಅಕ್ಕಿ ಕೊಡುತ್ತೇವೆ’ ಎಂದರು.

‘ಬಿಜೆಪಿಯವರು ಮಾತೆತ್ತಿದರೆ ಕಾಂಗ್ರೆಸ್‌ನವರು ಜೈಲಿಗೆ ಹೋಗಿದ್ದರು ಎನ್ನುತ್ತಾರೆ. ಈ ದೇಶದ ಗೃಹ ಸಚಿವ ಅಮಿತ್‌ ಶಾ ಮಾವನ ಮನೆಗೆ ಹೋಗಿದ್ರಾ? ಅವರನ್ನು ಗಡಿಪಾರು ಮಾಡಲಾಗಿತ್ತು. ಮೂರು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿದ್ದರು. ಅವರು ಗೃಹ ಸಚಿವರಾಗಿಲ್ಲವೇ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿರಲಿಲ್ಲವೇ’ ಎಂದು ಪ್ರಶ್ನಿಸಿದರು.

‘ಸೈಲೆಂಟ್‌ ಸುನೀಲ್‌ ಒಬ್ಬ ಕುಖ್ಯಾತ ರೌಡಿ, ಆತನ ವಿರುದ್ಧ ಸರ್ಚ್‌ ವಾರೆಂಟ್‌ ಇದೆ. ಇಬ್ಬರು ಎಂ.ಪಿ, ಬಿಜೆಪಿ ನಾಯಕರು ಅವನ ಜೊತೆ ಇದ್ದಾರೆ. ಗೊತ್ತಿದ್ದೂ ಗೊತ್ತಿದ್ದೂ ವೇದಿಕೆ ಹಂಚಿಕೊಳ್ಳುವುದು ಸರಿಯಾ? ಅದನ್ನು ಪ್ರಶ್ನೆ ಮಾಡಿದರೆ ಕಾಂಗ್ರೆಸ್‌ನಲ್ಲೂ ರೌಡಿ ಶೀಟರ್‌ ಇದ್ದಾರೆ ಎನ್ನುತ್ತಾರೆ. ಬಿಜೆಪಿಯವರಿಗೆ ಅದು ಅಂಟು ರೋಗವಾಗಿಬಿಟ್ಟಿದೆ. ಬಸವರಾಜ ಬೊಮ್ಮಾಯಿಗೆ ಆ ರೋಗ ಜಾಸ್ತಿ ಇದೆ’ ಎಂದು ವ್ಯಂಗ್ಯವಾಡಿದರು.

ಆಧುನಿಕ ಕನಕದಾಸ: ಕನಕ ಗುರು ಪೀಠದ ಶಿವಾನಂದಪುರಿ ಸ್ವಾಮೀಜಿ ಮಾತನಾಡಿ ‘ಆಧುನಿಕ ಕನಕದಾಸ, ಅಂಬೇಡ್ಕರ್ ರಂತಿರುವ ಸಿದ್ದರಾಮಯ್ಯ ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಬೇಕು. ರಾಜ್ಯದ ಜನರಿಗೆ ಮತ್ತೆ ಭಾಗ್ಯಗಳು ಸಿಗಬೇಕು ಎಂದರೆ ಅವರು ಅಧಿಕಾರಕ್ಕೆ ಬರಬೇಕು’ ಎಂದರು.

ಶಾಸಕ ಭೈರತಿ ಸುರೇಶ್‌ ಮಾತಾಡಿ ‘ರಾಜ್ಯದಲ್ಲಿ 40– 50 ಕ್ಷೇತ್ರಗಳಲ್ಲಿ ಗೆಲ್ಲಲು ಸಿದ್ದರಾಮಯ್ಯ ಅವರ ಸಹಕಾರ ಬೇಕೇ ಬೇಕು’ ಎಂದರು.

ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮಾತನಾಡಿ ‘ಕುರುಬ ಸಮುದಾಯ ಸಿದ್ದರಾಮಯ್ಯ ಅವರನ್ನು ಬೆಂಬಲಿಸದಿದ್ದರೆ ಅದು ಮುಂದಿನ ಪೀಳಿಗೆಗೆ ಶಾಪವಾಗುತ್ತದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು