ಬುಧವಾರ, ಜನವರಿ 19, 2022
23 °C
ಜೆಡಿಎಸ್ ವಿರುದ್ಧ ಸಿದ್ದರಾಮಯ್ಯ ಟೀಕೆ

‘ಗೆಲುವಿದ್ದಲ್ಲಿ ಕುಟುಂಬಕ್ಕೆ, ಸೋಲುವ ಕಡೆ ಅನ್ಯರಿಗೆ’–ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕುಟುಂಬ ರಾಜಕಾರಣಕ್ಕೆ ಜೆಡಿಎಸ್‌ ಹೆಸರುವಾಸಿ. ಕಾರ್ಯಕರ್ತರನ್ನು ದುಡಿಸಿಕೊಳ್ಳುವುದಷ್ಟೇ ಅವರ ಕೆಲಸ. ಅವರ (ಎಚ್‌.ಡಿ. ದೇವೇಗೌಡ) ಮನೆಯಲ್ಲಿ ಎಂಟನೆಯವರು ರಾಜಕೀಯಕ್ಕೆ ಬಂದಿದ್ದಾರೆ. ಎಲ್ಲಿ ಗೆಲ್ಲಲು ಅವಕಾಶ ಇದೆ ಅವರು ನಿಲ್ಲುತ್ತಾರೆ. ಎಲ್ಲಿ ಸೋಲುತ್ತಾರೆ ಅಲ್ಲಿ ಬೇರೆಯವರನ್ನು ಕಣಕ್ಕೆ ಇಳಿಸುತ್ತಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಗೋ ಹತ್ಯೆ ನಿಷೇಧ ಕಾಯ್ದೆ ಬಂದಾಗ ಜೆಡಿಎಸ್ ನಾಯಕ ಎಚ್.ಡಿ. ದೇವೇಗೌಡರು ಮಾತನಾಡಲಿಲ್ಲ. ಈಗ ನರೇಂದ್ರ ಮೋದಿ ಜೊತೆ ಭಾಯಿ ಭಾಯಿ ಅಂತಾರೆ. ಇವರು ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿದವರು’ ಎಂದು ಕುಟುಕಿದರು.

‘ಜೆಡಿಎಸ್‌ನವರದ್ದು ಅವಕಾಶವಾದಿ ರಾಜಕಾರಣ. ಅವರಿಗೆ ಯಾವುದೇ ಸಿದ್ಧಾಂತ, ಕಾರ್ಯಕ್ರಮ ಇಲ್ಲ. ಅದಕ್ಕೆ ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಂ ಎಂದು ಹೇಳುವುದು. ನಾನು ಬಿ ಟೀಂ ಎಂದು ಹೇಳಿದರೆ ಅವರಿಗೆ ಸಿಟ್ಟು ಬರುತ್ತದೆ’ ಎಂದರು.

‘ಕರ್ನಾಟಕದಲ್ಲಿ ನಡೆಯುತ್ತಿರುವ ಕಮಿಷನ್ ದಂಧೆಯ ಬಗ್ಗೆ ಪ್ರಧಾನಿಗೆ ಗುತ್ತಿಗೆದಾರರು ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಶೇ 40ರಷ್ಟು ಕಮಿಷನ್ ದಂಧೆ ನಡೆಯುತ್ತಿದೆ. ಈ ಬಗ್ಗೆ ತಕ್ಷಣ ತನಿಖೆ ಮಾಡಿಸಬೇಕಲ್ಲವೇ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

‘ಬಿಜೆಪಿ ಅಂದರೆ ಭ್ರಷ್ಟ ಜನತಾ ಪಾರ್ಟಿ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬಸವರಾಜ ಬೊಮ್ಮಾಯಿ ಗೃಹಸಚಿವರಾಗಿದ್ದವರು. ಬಿಜೆಪಿಯಲ್ಲಿರುವವರ ಭ್ರಷ್ಟಾಚಾರದ ಬಗ್ಗೆ ಬೊಮ್ಮಾಯಿಗೆ ಗೊತ್ತಿರಲಿಲ್ಲವೇ’ ಎಂದೂ ಪ್ರಶ್ನಿಸಿದರು.

‘ಅದಾನಿ ವಿಶ್ವದಲ್ಲೇ ನಂಬರ್ ವನ್ ಶ್ರೀಮಂತ. ಅಂಬಾನಿಗಿಂತ ದೊಡ್ಡ ಶ್ರೀಮಂತನಾಗಿದ್ದಾನೆ. ಇದಕ್ಕೆ ಪ್ರಧಾನಿ ಮೋದಿಯವರ ಕುಮ್ಮಕ್ಕಿದೆ. ಬಿ.ಕಾಂ ಓದಲು ಅದಾನಿಗೆ ಆಗಲಿಲ್ಲ. ಅಂಥವನು ಇಂದು ಏಷ್ಯಾದಲ್ಲೇ ದೊಡ್ಡ ಶ್ರೀಮಂತ’ ಎಂದೂ ವ್ಯಂಗ್ಯವಾಡಿದರು.

‘ಬಿ ಟೀಂ ಎಂದು ಬರೆಸಿ ಕೊರಳಿಗೆ ಹಾಕಿಕೊಳ್ಳಲಿ’

‘ಜೆಡಿಎಸ್‌ ಬಿಜೆಪಿಯ ಬಿ ಟೀಂ ಅಂತ ಸಿದ್ದರಾಮಯ್ಯ ಪದೇ ಪದೇ ಹೇಳುವ ಬದಲು, ಅದನ್ನೇ ಒಂದು ಸ್ಲೇಟಿನಲ್ಲಿ  ಬರೆದುಕೊಂಡು ಕಟ್ಟು ಹಾಕಿಸಿ ಕುತ್ತಿಗೆಗೆ ಹಾಕಿಕೊಂಡು ತಿರುಗಾಡಲಿ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಸಿದ್ದರಾಮಯ್ಯ ಟೀಕೆಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿಯ ಬಿ ಟೀಂ ಎಂದು ಪ್ರಚಾರ ಮಾಡಿಕೊಂಡು ದಿನವೂ ಓಡಾಡಿಕೊಂಡೇ ಇರಲಿ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು