ಗುರುವಾರ , ಮೇ 26, 2022
26 °C

ಸಿದ್ದರಾಮಯ್ಯ ಕರೆ ಮಾಡಿದ್ದರು, ಅವರ ಅಂತರಾಳದಲ್ಲಿ ಏನಿದೆಯೊ ಗೊತ್ತಿಲ್ಲ: ಎಂಟಿಬಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸಿದ್ದರಾಮಯ್ಯ ಅವರ ಅಂತರಾಳದಲ್ಲಿ ಏನಿದೆಯೊ ನನಗಂತೂ ಗೊತ್ತಿಲ್ಲ. ಅವರು ಬಹಳ ಸಲ ಕರೆ ಮಾಡುತ್ತಾರೆ. ನಿನ್ನೆ (ಸೋಮವಾರ) ಕೂಡಾ ಬಾದಾಮಿಯಿಂದ ದೂರವಾಣಿ ಕರೆ ಮಾಡಿದ್ದರು. ಆದರೆ, ರಾಜಕೀಯವಾಗಿ ಒಂದೇ ಒಂದು ಸಲ ಕೂಡಾ ಮಾತನಾಡಿಲ್ಲ. ನಾನು ದೇವರ ಮೇಲೆ ಸತ್ಯ ಮಾಡಿ ಹೇಳುತ್ತೇನೆ. ಆದರೆ, ಒಮ್ಮೆಯೂ ಸಿದ್ದರಾಮಯ್ಯ ಅವರು ನನ್ನ ಬಳಿ ರಾಜಕೀಯ ಮಾತನಾಡಿಲ್ಲ’ ಎಂದು ಸಚಿವ ಎಂಟಿಬಿ ನಾಗರಾಜು ಹೇಳಿದ್ದಾರೆ.

ಜಿಲ್ಲಾ ಉಸ್ತುವಾರಿ ಹಂಚಿಕೆ ಬಗ್ಗೆ ಮಾತನಾಡಿದ ಅವರು,  ‘ಈಗ ಚಿಕ್ಕಬಳ್ಳಾಪುರ ಉಸ್ತುವಾರಿ ಕೊಟ್ಟಿದ್ದಾರೆ. ಇದಕ್ಕೆ ನಮಗೆ ಒಪ್ಪಿಗೆ ಇದೆ. ನನಗೆ ಬದಲಾವಣೆ ಮಾಡುತ್ತಾರೆಂಬ ಯಾವುದೇ ನಿರೀಕ್ಷೆ ಇರಲಿಲ್ಲ. ಮುಖ್ಯಮಂತ್ರಿ ಬಳಿ ಬದಲಾವಣೆ ಬಗ್ಗೆ ಕೇಳಿದೆ. ಇದು ಹೈಕಮಾಂಡ್ ತೀರ್ಮಾನ ಎಂದು ಹೇಳಿದ್ದಾರೆ. ಪಕ್ಷದ ವರಿಷ್ಠರು ತೆಗೆದುಕೊಂಡ ತೀರ್ಮಾನಕ್ಕೆ ನನ್ನ ಸಹಮತ ಇದೆ’ ಎಂದು ಅವರು ಹೇಳಿದರು.

‘ನನ್ನನ್ನು ಸಚಿವ ಸ್ಥಾನದಲ್ಲಿ ಮುಂದುವರಿಸಿದರೂ ಸಂತೋಷ, ಬಿಟ್ಟರೂ ಸಂತೋಷ. ಆಗಿನ ಸಂದರ್ಭದಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬರಬೇಕಾಯಿತು. ನನಗೆ ಅಧಿಕಾರ ಮುಖ್ಯ ಅಲ್ಲ. ಈ ಹಿಂದೆ ನನ್ನ ಬಳಿ ಬೆಂಗಳೂರು ಗ್ರಾಮಾಂತರ ಉಸ್ತುವಾರಿಯೇ ಆಗಿದಿದ್ದರೆ ಒಳ್ಳೆಯದಿತ್ತು. ನಾನು ಮುಂದಿನ ಚುನಾವಣೆಗೆ ಹೊಸಕೋಟೆಯಿಂದಲೇ ಸ್ಪರ್ಧಿಸುತ್ತೇನೆ. ಹೀಗಾಗಿ ಅಲ್ಲಿಯ ಉಸ್ತುವಾರಿ ಬೇಕು ಎಂದು ಕೇಳಿದ್ದೆ. ಪಕ್ಷದ ಹಿತದೃಷ್ಟಿಯಿಂದ ಬದಲಾವಣೆ ಮಾಡಿದ್ದಾರೆ’ ಎಂದರು.

‘ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮುಂದೆ ಚುನಾವಣೆ ಬರುತ್ತಿದೆ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಇದೆ. ಹೀಗಾಗಿ, ನಮ್ಮ ಜಿಲ್ಲೆಯಲ್ಲೇ ಕೆಲಸ ಮಾಡಬೇಕು ಎನ್ನುವ ಆಸೆ ಇತ್ತು. ಆದರೆ, ವರಿಷ್ಠರು ತೆಗೆದುಕೊಂಡ ನಿರ್ಧಾರವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ನನ್ನ ಬಳಿ ಯಾರೂ ಕೂಡ ಪಕ್ಷ ಬಿಡುವ ವಿಚಾರ ಹೇಳಿಲ್ಲ. ನಾನು ಹೋಗುವುದಾದರೆ ರಾಜಕೀಯ ಬಿಟ್ಟು ಮನೆಗೆ ಹೋಗುತ್ತೇನೆಯೇ ಹೊರತು ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ಜನಸೇವೆ ಮಾಡುವುದಕ್ಕೆ ಬಂದಿದ್ದೇನೆ ಹೊರತು ಅಧಿಕಾರಕ್ಕಲ್ಲ. ನಾನು ಯಾವುದಕ್ಕೂ ಆಸೆ ಪಡುವವನಲ್ಲ’ ಎಂದರು.

ಪಕ್ಷ ನೀಡುವ ಜವಾಬ್ದಾರಿ ನಿರ್ವಹಿಸುತ್ತೇನೆ: ‘ಮುಖ್ಯಮಂತ್ರಿ ಮತ್ತು ಪಕ್ಷದ ವರಿಷ್ಠರು ನನ್ನ ಮೇಲೆ ವಿಶ್ವಾಸ ಇಟ್ಟು ಜವಾಬ್ದಾರಿ ನೀಡಿದ್ದಾರೆ. ಅದಕ್ಕೆ ನಾನು ಆಭಾರಿಯಾಗಿದ್ದೇನೆ. ಕಳೆದ ಒಂದೂಮುಕ್ಕಾಲು ವರ್ಷ ಹಾಸನ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೆ. ನನ್ನ ಕೆಲಸವನ್ನು ಪಕ್ಷ ಗಮನಿಸಿದೆ. ಜೆಡಿಎಸ್ ಬಾಹುಳ್ಯದ ಜಿಲ್ಲೆಗಳನ್ನು ಕೊಟ್ಟಿದ್ದರೂ ಚೆನ್ನಾಗಿ ನಿರ್ವಹಿಸುವ ಆತ್ಮವಿಶ್ವಾಸವಿದೆ’ ಎಂದು ಅಬಕಾರಿ ಸಚಿವ ಕೆ. ಗೋಪಾಲಯ್ಯ ಹೇಳಿದರು.

‘ಬುಧವಾರವೇ ಮಂಡ್ಯಕ್ಕೆ ಹೋಗುತ್ತೇನೆ. ಹೊಣೆಗಾರಿಕೆಯಿಂದ ಕೆಲಸ ಮಾಡುತ್ತೇನೆ. ಈ ಹಿಂದೆ ಆಹಾರ ಸಚಿವನಾಗಿ ಮತ್ತು ಈಗ ಅಬಕಾರಿ ಸಚಿವನಾಗಿಯೂ ಉತ್ತಮ ಕೆಲಸ ಮಾಡಿದ್ದೇನೆ. ಪಕ್ಷ ನೀಡುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು