ಭಾನುವಾರ, ಅಕ್ಟೋಬರ್ 24, 2021
20 °C

ಸಿದ್ದರಾಮಯ್ಯ ಅವರದ್ದು ‘ಬ್ರೂಟಸ್‌’ ರಾಜಕಾರಣ: ಎಚ್‌.ಡಿ. ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಸಿದ್ದರಾಮಯ್ಯ ಅವರದ್ದು ‘ಬ್ರೂಟಸ್‌’ ಮಾದರಿಯ ರಾಜಕಾರಣ. ಜೆಡಿಎಸ್‌ನ ಮಿತ್ರ ಪಕ್ಷವಾಗಿದ್ದುಕೊಂಡೇ ಲೋಕಸಭಾ ಚುನಾವಣೆಯಲ್ಲಿ ಕುತಂತ್ರದಿಂದ ನಮ್ಮ ಅಭ್ಯರ್ಥಿಗಳನ್ನು ಸೋಲಿಸಿದರು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ದೂರಿದ್ದಾರೆ.

‘ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್‌ ದುರ್ಬಲವಾಗಿದೆ’ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಭಾನುವಾರ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಮೈತ್ರಿ ಸರ್ಕಾರದ ಭಾಗವಾಗಿದ್ದುಕೊಂಡೇ ಬೆನ್ನಿಗಿರಿದ ನಿಮ್ಮ ಹೀನ ರಾಜಕೀಯ ಯಾರಿಗೆ ಗೊತ್ತಿಲ್ಲ ಹೇಳಿ? ನಿಮ್ಮ ಕುತಂತ್ರದ ಹೆಜ್ಜೆಗಳು ಎಲ್ಲೆಲ್ಲಿ ಮೂಡಿದವು ಎಂಬುದು ಜನರಿಗೆ ಗೊತ್ತಿದೆ’ ಎಂದಿದ್ದಾರೆ.

ಮಂಡ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಹೇಗೆ ಸೋತರು ಎಂಬುದು ಗೊತ್ತಿದೆ. ಬಿಜೆಪಿ, ಕಾಂಗ್ರೆಸ್‌, ರೈತ ಸಂಘ ಮತ್ತು ಕೆಲವು ಮಾಧ್ಯಮಗಳು ಸೇರಿ ನಡೆಸಿದ ಪ್ರಯತ್ನದಿಂದ ಜೆಡಿಎಸ್‌ಗೆ ಸೋಲಾಯಿತು. ಕೌರವರು ರಚಿಸಿದ ಚಕ್ರವ್ಯೂಹದಲ್ಲಿ ಅಭಿಮನ್ಯು ಸೋತಂತೆ ನಿಖಿಲ್‌ ಸೋತಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್‌ ದುರ್ಬಲವಾಗಿದೆ ಎಂಬುದಾಗಿ ಹೇಳುವುದು ಮೂರ್ಖತನದ ಪರಮಾವಧಿ ಎಂದು ಹೇಳಿದ್ದಾರೆ.

‘ಜೆಡಿಎಸ್‌ ಮತ್ತು ಕುಮಾರಸ್ವಾಮಿ ಕುರಿತು ಮಾತನಾಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿರುತ್ತಾರೆ. ಆದರೆ, ಪದೇ ಪದೇ ಕಾಲು ಕೆರೆದು ಜಗಳಕ್ಕೆ ಬರುತ್ತಾರೆ. ನಮ್ಮ ಹಾಗೂ ಜೆಡಿಎಸ್‌ ಕುರಿತು ಮಾತನಾಡದೇ ಇದ್ದರೆ ಅವರಿಗೆ ನಿದ್ದೆ ಬರುವುದಿಲ್ಲ ಅನಿಸುತ್ತದೆ’ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು