ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪೀಡಕ ಸರ್ಕಾರ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ

Last Updated 29 ಜುಲೈ 2021, 20:03 IST
ಅಕ್ಷರ ಗಾತ್ರ

ಬೆಂಗಳೂರು: ‘ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಎರಡು ವರ್ಷದ ಸಾಧನೆ ಭ್ರಷ್ಟಾಚಾರ, ಅದಕ್ಷತೆ, ಅರಾಜಕತೆ, ದುರಾಡಳಿತ. ಅಭಿವೃದ್ಧಿ ಶೂನ್ಯ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುರುವಾರ ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರದ ವೈಫಲ್ಯಗಳ ಕುರಿತ ‘ಜನಪೀಡಕ ಸರ್ಕಾರ’ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿದ ಅವರು, ‘ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಬಿಜೆಪಿ ಸರ್ಕಾರ ಇದ್ದರೆ ಸ್ವರ್ಗವನ್ನೇ ಸೃಷ್ಟಿಸುತ್ತೇವೆ ಎಂದು ನಂಬಿಸಿ, ಬಿಜೆಪಿಗರು ರಾಜ್ಯವನ್ನು ಲೂಟಿ ಹೊಡೆದರು. ಕೊರೊನಾ ಸಂದರ್ಭದಲ್ಲೂ ವಿಪರೀತ ಭ್ರಷ್ಟಾಚಾರ ನಡೆಸಿದರು. ಮಕ್ಕಳ ಪೌಷ್ಟಿಕಾಂಶ ಹೆಚ್ಚಿಸಲು ಮೀಸಲಿಟ್ಟ ಮೊಟ್ಟೆಯ ಹಣವನ್ನೂ ಸರ್ಕಾರ ನುಂಗಿ ನೀರು ಕುಡಿಯಿತು’ ಎಂದು ಕಿಡಿಕಾರಿದರು.

‘ಕೊರೊನಾ ಸಲಕರಣೆಗಳು, ವೆಂಟಿಲೇಟರ್, ಸ್ಯಾನಿಟೈಸರ್, ಪಿಪಿಇ ಕಿಟ್‌ಗಳ ಖರೀದಿಯಲ್ಲೂ ಲಂಚ ತಿಂದರು. ಈ ಭ್ರಷ್ಟಾಚಾರವನ್ನು ವಿಧಾನಸಭೆಯಲ್ಲಿ ದಾಖಲೆ ಸಮೇತ ಬಹಿರಂಗಗೊಳಿಸಿದೆ. ಅದ್ಯಾವುದಕ್ಕೂ ಮುಖ್ಯಮಂತ್ರಿ ಉತ್ತರಿಸಲಿಲ್ಲ. ಆರೋಗ್ಯ ಸಚಿವರಾಗಿದ್ದ ಸುಧಾಕರ್ ಎಲ್ಲವನ್ನೂ ಒಪ್ಪಿಕೊಂಡರು. ಆದರೆ ಭ್ರಷ್ಟಾಚಾರ ನಡೆದಿಲ್ಲ ಎಂದು ವಾದಿಸಿದರು’ ಎಂದರು.

‘ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಮೃತಪಟ್ಟವರು ಮೂರೇ ಮಂದಿ ಎಂದು ಸಚಿವ ಸುಧಾಕರ್ ಸುಳ್ಳು ಹೇಳಿದರು. ಆದರೆ, ಮೃತಪಟ್ಟವರು 24ಕ್ಕೂ ಹೆಚ್ಚು ಮಂದಿ. ಆಮ್ಲಜನಕ ಕೊರತೆಯಿಂದ ಯಾರೂ ಮೃತಪಟ್ಟಿಲ್ಲ ಎಂದು ಕೇಂದ್ರವೂ ಸುಳ್ಳು ಹೇಳುತ್ತಿದೆ’ ಎಂದರು.

‘ಆರ್ಥಿಕ ಶಿಸ್ತು ಪಾಲಿಸದೆ ನಿಯಮ ಮೀರಿ ಸಾಲ ಮಾಡಿದ್ದು, ನಿಯಮ ಮೀರಿದ ಸಾಲ ತೀರಿಸುವುದಕ್ಕೇ ಮತ್ತೆ ಸಾಲ ಮಾಡುವ ಸ್ಥಿತಿಗೆ ಸರ್ಕಾರ ಬಂದಿದೆ. ರಾಜ್ಯ ಮತ್ತು ಕೇಂದ್ರ ಎರಡರಲ್ಲೂ ನಿಯಮ ಮೀರಿ ಸಾಲ ಮಾಡಿ, ಆ ಹೊರೆಯನ್ನು ಜನರ ತಲೆ ಮೇಲೆ ಹೊರಿಸಿದ್ದಾರೆ’ ಎಂದು ಆರೋಪಿಸಿದರು.

ಬಿಜೆಪಿ ಅಲ್ಲ ಬ್ಲೂಜೆಪಿ: ಕಿರುಹೊತ್ತಿಗೆಯಲ್ಲಿ ‘ಸುಳ್ಳಿನ ಕಾರ್ಖಾನೆ ಬಿಜೆಪಿಯನ್ನು ತಿರಸ್ಕರಿಸಿ’ ಎಂದಿರುವ ಸಿದ್ದರಾಮಯ್ಯ, ‘ಬಿಜೆಪಿಯವರು ಅಧಿಕಾರಕ್ಕೆ ಬಂದಾಗಲೆಲ್ಲ ಕನಾಟಕದ ಮಾನವನ್ನು ಬೀದಿ ಪಾಲು ಮಾಡುವ ಕೆಲಸವನ್ನು ಮಾಡುತ್ತಲೆ ಇದ್ದಾರೆ. ಸದನದಲ್ಲೆ ಬ್ಲೂಫಿಲಂ ನೋಡಿ ಹಲವು ಮಂತ್ರಿಗಳು ರಾಜೀನಾಮೆ ಕೊಟ್ಟರು. ಹಲವರು ಅಕ್ರಮ ಸಂಬಂಧಗಳ ಮೂಲಕ ಬೀದಿ ಮಾತಾದರು. ಹೀಗಾಗಿ, ಬಿಜೆಪಿ ಅಲ್ಲ ಬ್ಲೂಜೆಪಿ ಎಂದು ಜನ ಆಡಿಕೊಳ್ಳುವಂತಾಗಿದೆ’ ಎಂದೂ ಕುಟುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT