ಪರಿಶಿಷ್ಟರ ಕಲ್ಯಾಣಕ್ಕೆ ಶೇ 24ರಷ್ಟು ಮೀಸಲಿಡಲು ಬಿಜೆಪಿ ಸಿದ್ಧವೇ?: ಸಿದ್ದರಾಮಯ್ಯ

ಬೆಂಗಳೂರು: ‘ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ (ಟಿಎಸ್‌ಪಿ) ಕಾಯ್ದೆಯನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೆ ತಂದು ಬಜೆಟ್‌ನ ಶೇ 24ರಷ್ಟನ್ನು ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಡಲು ಬಿಜೆಪಿ ಸರ್ಕಾರ ಸಿದ್ಧ ಇದೆಯೇ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
‘ನಾನು ಪರಿಶಿಷ್ಟರನ್ನು ಅವಮಾನಿಸಿದ್ದೇನೆ ಎಂದು ಕೀಳುಮಟ್ಟದ ಆರೋಪಗಳನ್ನು ಬಿಜೆಪಿ ಎಸ್‌ಸಿ ಮೋರ್ಚಾದ ನಾಯಕರು ಮಾಡಿರುವುದನ್ನು ಗಮನಿಸಿದ್ದೇನೆ. ಸಿಂದಗಿಯಲ್ಲಿ ನಡೆದಿದ್ದ ಮಾದಿಗ ದಂಡೋರಾ ಸಭೆಯಲ್ಲಿ ಗೋವಿಂದ ಕಾರಜೋಳ, ರಮೇಶ ಜಿಗಜಿಣಗಿ, ನಾರಾಯಣ ಸ್ವಾಮಿ ಮತ್ತಿತರ ನಾಯಕರು ಅಂಬೇಡ್ಕರ್ ಮತ್ತು ಸಂವಿಧಾನವನ್ನು ವಿರೋಧಿಸುವ ಬಿಜೆಪಿ ಜೊತೆ ಸ್ವಾರ್ಥಕ್ಕಾಗಿ ಸೇರಿದ್ದಾರೆ ಎಂದು ಹೇಳಿದ್ದೇನೆಯೇ ಹೊರತು, ಪರಿಶಿಷ್ಟರು ಹೊಟ್ಟೆಪಾಡಿಗಾಗಿ ಬಿಜೆಪಿ ಸೇರಿದ್ದಾರೆ ಎಂದು ಹೇಳಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
’ನನ್ನನ್ನು ಪರಿಶಿಷ್ಟರ ವಿರೋಧಿ ಎಂದು ಚಿತ್ರಿಸಲು ಹೊರಟಿರುವ ಬಿಜೆಪಿ ಎಸ್‌ಸಿ ಮೋರ್ಚಾದ ತಥಕಾಥಿತ ನಾಯಕರು, ಅವರ ಪಕ್ಷದ ಸಂಸದ ಅನಂತಕುಮಾರ ಹೆಗಡೆ ಸಂವಿಧಾನ ಬದಲಿಸುತ್ತೇವೆ ಎಂದಾಗ, ಪರಿಶಿಷ್ಟರನ್ನು ನಾಯಿಗಳು ಎಂದು ತುಚ್ಚೀಕರಿಸಿದಾಗ ಎಲ್ಲಿ ಹೋಗಿದ್ದರು? ಯಾಕೆ ಬಾಯಿ ಮುಚ್ಚಿಕೊಂಡಿದ್ದರು? ಯಾಕೆ ಪ್ರತಿಭಟಿಸಲಿಲ್ಲ? ಎನ್ನುವುದನ್ನು ರಾಜ್ಯದ ಜನತೆಗೆ ತಿಳಿಸಬೇಕು’ ಎಂದು ಆಗ್ರಹಿಸಿದ್ದಾರೆ.
‘ರಾಜ್ಯ ಬಜೆಟ್‌ನ ಶೇ 24ರಷ್ಟನ್ನು ಮೀಸಲಿಡುವ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆಯನ್ನು ನಾನು ಜಾರಿಗೆ ತಂದಿದ್ದೆ. ಆಂಧ್ರಪ್ರದೇಶದಲ್ಲಿ ಇದೇ ಉದ್ದೇಶ ಕಾಯ್ದೆ ಇದ್ದರೂ ನಾವು ರಚಿಸಿದ ಕಾಯ್ದೆ ಹೆಚ್ಚು ಪ್ರಗತಿಪರವಾದುದು. ನಮ್ಮಲ್ಲಿನ ಕಾಯ್ದೆ ಪ್ರಕಾರ ಮೀಸಲಿಟ್ಟ ಶೇ 24ರಷ್ಟು ಹಣ ಖರ್ಚಾಗದಿದ್ದರೆ ಅದನ್ನು ಮುಂದಿನ ವರ್ಷಕ್ಕೆ ಬಳಸಬಹುದು. ಅಲ್ಲದೆ, ಖರ್ಚು ಮಾಡದ ಇಲಾಖೆಗಳ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬಹುದು’ ಎಂದಿದ್ದಾರೆ.
‘2008-09ರಿಂದ 2012-13ನೇ ಸಾಲಿನವರೆಗೆ ಬಿಜೆಪಿ ಸರ್ಕಾರ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಖರ್ಚು ಮಾಡಿದ್ದು ಕೇವಲ ₹ 22,261 ಕೋಟಿ. ನಮ್ಮ (ಕಾಂಗ್ರೆಸ್) ಸರ್ಕಾರದ ಅವಧಿಯಲ್ಲಿ ₹ 88,395 ಕೋಟಿ. ಯಾರು ದಲಿತ ವಿರೋಧಿ? ನಾನಾ? ಬಿಜೆಪಿ ನಾಯಕರಾ’ ಎಂದೂ ಪ್ರಶ್ನಿಸಿದ್ದಾರೆ.
‘ನಾನು ಮುಸ್ಲಿಮರ ವಿರೋಧಿ ಎಂದು ಬೊಬ್ಬಿಟ್ಟ ಪಕ್ಷದ ಅಭ್ಯರ್ಥಿಗಳ ಠೇವಣಿ ಜಪ್ತಿ ಮಾಡಿಸುವ ಮೂಲಕ ಉಪ ಚುನಾವಣೆಯಲ್ಲಿ ಮತದಾರರು ಉತ್ತರ ಕೊಟ್ಟಿದ್ದಾರೆ. ಈಗ ಬಿಜೆಪಿಯ ಕೆಲವು ನಾಯಕರು ನಾನು ಪರಿಶಿಷ್ಟರ ವಿರೋಧಿ ಎಂದು ಕೂಗಾಡುತ್ತಿದ್ದಾರೆ. ಅವರಿಗೂ ಮತದಾರರೇ ಉತ್ತರ ನೀಡಲಿದ್ದಾರೆ’ ಎಂದೂ ಹೇಳಿದ್ದಾರೆ.
ಬಿಜೆಪಿಗರಿಗೆ ನಡುಕ: ‘ಅಧಿಕಾರದಲ್ಲಿದ್ದರೂ ಪರಿಶಿಷ್ಟರನ್ನು ಮುಖ್ಯಮಂತ್ರಿಯನ್ನಾಗಿಸದೇ ಸ್ಥಿಮಿತ ಕಳೆದುಕೊಂಡವರಂತೆ ಮಾತನಾಡುವ ರಾಜ್ಯ ಬಿಜೆಪಿ ನಾಯಕರಿಗೆ, ಪರಿಶಿಷ್ಟರಪರ ಅತಿ ಹೆಚ್ಚು ಕೆಲಸ ಮಾಡಿರುವ ಸಿದ್ದರಾಮಯ್ಯ ಅವರ ಬದ್ಧತೆ ಕಂಡರೆ ನಡುಕ ಉಂಟಾಗುತ್ತದೆ’ ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ಮುಖಂಡ ಎಚ್.ಸಿ. ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.