ಶನಿವಾರ, ಫೆಬ್ರವರಿ 27, 2021
30 °C
ಆಪರೇಷನ್ ಕಮಲದಲ್ಲಿ ಹಣದ ಪ್ರಭಾವ ಸಾಬೀತು: ಸಿದ್ದರಾಮಯ್ಯ

ರಮೇಶ ಹೇಳಿಕೆ: ಸಮಗ್ರ ತನಿಖೆಗೆ ಸಿದ್ದರಾಮಯ್ಯ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಬಿಜೆಪಿ ಸರ್ಕಾರ ರಚನೆಗೆ ನೆರವಾಗಲು ಯೋಗೇಶ್ವರ್ ಅವರು ₹ 9 ಕೋಟಿ ಸಾಲ ಮಾಡಿದ್ದರು ಎಂಬ ಸಚಿವ ರಮೇಶ ಜಾರಕಿಹೊಳಿ ಅವರ ಹೇಳಿಕೆ ಬಗ್ಗೆ ಹೈಕೋರ್ಟ್‌ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶನಿವಾರ ಒತ್ತಾಯಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಆಪರೇಷನ್ ಕಮಲದಲ್ಲಿ ಹಣದ ಪ್ರಭಾವ ಇದೆ ಎಂಬುದು ಜಾರಕಿಹೊಳಿಯವರ ಹೇಳಿಕೆಯಿಂದ ಸಾಬೀತಾಗಿದೆ. ಹೀಗಾಗಿ, ಈ ಕುರಿತು ಸಮಗ್ರ ತನಿಖೆ ಆಗಲೇಬೇಕು’ ಎಂದರು.

‘ನಾವು ಸಜ್ಜನರು, ಆಪರೇಷನ್ ಕಮಲಕ್ಕೆ ಹಣ ಖರ್ಚು ಮಾಡಿಲ್ಲ. 17 ಶಾಸಕರು ಅವರಾಗೇ ಬಂದಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಾರೆ. ಬಿಜೆಪಿಯವರು ಎಂಥ ನೀಚರು, ಸುಳ್ಳುಗಾರರು ಎಂಬುದು ತನಿಖೆಯಿಂದ ರಾಜ್ಯದ ಜನರಿಗೆ ತಿಳಿಯಲಿ. ಯಡಿಯೂರಪ್ಪ ಅವರು ಆಪರೇಷನ್ ಕಮಲದ ಜನಕ. ಅವರು ಜನರಿಂದ ಮುಖ್ಯಮಂತ್ರಿ ಆದವರಲ್ಲ. ಹಣ ಮತ್ತು ಆಪರೇಷನ್ ಕಮಲದಿಂದ ಮುಖ್ಯಮಂತ್ರಿ ಆಗಿದ್ದಾರೆ’ ಎಂದೂ ಅವರು ವಾಗ್ದಾಳಿ ನಡೆಸಿದರು.

ಸಿ.ಡಿ. ಬಗ್ಗೆಯೂ ತನಿಖೆಯಾಗಲಿ: ‌‘ಬಸನಗೌಡ ಪಾಟೀಲ ಯತ್ನಾಳ ಬಿಜೆಪಿಯ ಹಿರಿಯ ನಾಯಕ. ಸಿ.ಡಿ ಕುರಿತಾಗಿ ಆರೋಪ ಮಾಡಿದ್ದಾರೆ. ಸಿ.ಡಿ.ಯಲ್ಲಿ ಕೊಳಕು ದೃಶ್ಯಗಳಿವೆ ಎಂದಿದ್ದಾರೆ. ಹೀಗಾಗಿ ಸಿ.ಡಿ ಬಗ್ಗೆಯೂ ತನಿಖೆ ಸೂಕ್ತ. ಯಡಿಯೂರಪ್ಪ ಅವರಿಗೆ ಏಕೆ ಮತ್ತು ಹೇಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂಬ ಸತ್ಯಾಂಶವೂ ಹೊರಬರಬೇಕಲ್ಲವೇ’ ಎಂದು ಪ್ರಶ್ನಿಸಿದರು.

‘ಉನ್ನತಮಟ್ಟದ ತನಿಖೆ ಆಗಲಿ’

ಮಡಿಕೇರಿ: ‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧದ ಸಿ.ಡಿ ವಿಚಾರವಾಗಿ ಅವರದ್ದೇ ಪಕ್ಷದ ಶಾಸಕರು ಹೇಳಿಕೆ ಕೊಡುತ್ತಿದ್ದಾರೆ. ಈ ಸಿ.ಡಿ ಪ್ರಕರಣವನ್ನು ಉನ್ನತಮಟ್ಟದ ತನಿಖೆಗೆ ವಹಿಸಬೇಕು’ ಎಂದು ಕಾಂಗ್ರೆಸ್‌ ಮುಖಂಡ ಆರ್‌.ಧ್ರುವನಾರಾಯಣ ಇಲ್ಲಿ ಶನಿವಾರ ಆಗ್ರಹಿಸಿದರು.

‘ಎಚ್‌.ವಿಶ್ವನಾಥ್‌, ಬಸನಗೌಡ ಪಾಟೀಲ ಯತ್ನಾಳ ಅವರು ಜವಾಬ್ದಾರಿಯುತ ನಾಯಕರು. ಸಿ.ಡಿ ಇರುವುದರಿಂದಲೇ ಅವರು ಧೈರ್ಯದಿಂದ ಹೇಳಿಕೆ ನೀಡುತ್ತಿದ್ದಾರೆ. ತನಿಖೆಯಾದರೆ ಸತ್ಯಾಂಶವೆಲ್ಲವೂ ಹೊರಬರಲಿದೆ’ ಎಂದರು.

‘ಮಾಸಾಂತ್ಯದಲ್ಲಿ ರಾಜಕೀಯ ಧ್ರುವೀಕರಣ’ (ಮೈಸೂರು): ‘ಮಾಸಾಂತ್ಯದಲ್ಲಿ ರಾಜಕೀಯ ಧ್ರುವೀಕರಣ ನಡೆಯಲಿದೆ. ಕಾಂಗ್ರೆಸ್‌ ಹೈಕಮಾಂಡ್‌ಗೂ ಇದರ ಮಾಹಿತಿಯಿದೆ’ ಎಂದು ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯ ಆರ್‌.ಧರ್ಮಸೇನ ಶನಿವಾರ ಇಲ್ಲಿ ಹೇಳಿದರು.

‘ಮುಖ್ಯಮಂತ್ರಿಗೆ ಸಿ.ಡಿ. ಬ್ಲ್ಯಾಕ್‌ಮೇಲ್‌ ವಿಷಯ ಇದೀಗ ಅಂತಿಮ ಘಟ್ಟ ತಲುಪಿದೆ. ಬಿಜೆಪಿಯ ಅತೃಪ್ತ ಶಾಸಕರು ಅಮಿತ್‌ ಶಾ ಭೇಟಿಯಾಗಿ ಈ ಬಗ್ಗೆ ಚರ್ಚಿಸಲಿದ್ದಾರೆ. ನಮ್ಮ ಹೈಕಮಾಂಡ್‌ಗೂ ಈ ಬಗ್ಗೆ ಮಾಹಿತಿಯಿದೆ. ಇದಕ್ಕಾಗಿಯೇ ಕಾಂಗ್ರೆಸ್‌ ಪದಾಧಿಕಾರಿಗಳ ನೇಮಕ ವಿಳಂಬವಾಗುತ್ತಿದೆ’ ಎಂದು ತಮ್ಮನ್ನು ಭೇಟಿಯಾದ ಪತ್ರಕರ್ತರಿಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು